ಎಲ್ಲರೂ ಓದಬೇಕಾದ ಕೃತಿ
ಮೀಸಲಾತಿಯ ಬಗ್ಗೆ ಸ್ಪಷ್ಟವಾದ ಅರಿವು ಇಲ್ಲದೆ ಪೂರ್ವಾಗ್ರಹಗಳಿಂದ ಕೂಡಿದ ಅಥವಾ ಅನ್ಯಜಾತಿ, ಸಮುದಾಯಗಳ ಬಗ್ಗೆ ದ್ವೇಷದಿಂದ ಕೂಡಿದ ಅತಾರ್ಕಿಕವಾದ ನಂಬಿಕೆಗಳು ಇಂದು ಪ್ರಬಲವಾಗುತ್ತಿವೆ.
ಈ ಕೃತಿಯು ಭಾರತದಲ್ಲಿ, ವಿಶೇಷವಾಗಿ ಕರ್ನಾಟಕದಲ್ಲಿ ಮೀಸಲಾತಿಯ ಚರಿತ್ರೆ, ವಿವಿಧ ಆಯೋಗಗಳ ವಿಶ್ಲೇಷಣೆ, ಆಯೋಗಗಳ ವರದಿಗಳನ್ನು ಅನುಷ್ಠಾನಕ್ಕೆ ತರದೇ ಇರುವುದರ ಹಿಂದಿರುವ ಮೇಲ್ಜಾತಿ ರಾಜಕೀಯ, ಮೀಸಲಾತಿಯನ್ನು ಎಲ್ಲಾ ಸರಕಾರಗಳು ರಾಜಕೀಯ ದಾಳವಾಗಿ ಮಾತ್ರ ಬಳಸಿಕೊಂಡಿರುವ ಬಗೆಗಳು ಇವೆಲ್ಲವನ್ನು ಸರಳವಾಗಿ, ಖಚಿತವಾಗಿ ವಿವರಿಸುತ್ತದೆ. ಅತ್ಯಂತ ವಸ್ತುನಿಷ್ಠವಾಗಿ, ಸಾಮಾಜಿಕ ಅನ್ಯಾಯಗಳು ಹಾಗೂ ಅಸಮಾನತೆಗಳನ್ನು ಪ್ರಶ್ನಿಸುತ್ತ ಬರೆದ ಲೇಖನಗಳು ಇದರಲ್ಲಿವೆ.
ಈ ಲೇಖನಗಳು ಒಟ್ಟಾರೆಯಾಗಿ ನಮ್ಮ ರಾಜಕೀಯದ ದುಷ್ಟತನದಿಂದಾಗಿ ಉಂಟಾದ ದುರಂತಗಳ ವ್ಯಾಖ್ಯಾನವನ್ನು ನೀಡುತ್ತವೆ. ಈ ವ್ಯಾಖ್ಯಾನದ ಪ್ರಕಾರ ಭಾರತ ಹಾಗೂ ಕರ್ನಾಟಕದ ಸರಕಾರಗಳು ಸ್ವಾತಂತ್ರ್ಯದ ನಂತರ, ಸಂವಿಧಾನದ ನಂತರ ಮೀಸಲಾತಿಯ ಬಗ್ಗೆ ಕಾಳಜಿ ಹಾಗೂ ನಿಷ್ಠೆಯನ್ನು ತೋರಿಸಿಯೇ ಇಲ್ಲ. ಕಾರಣವೆಂದರೆ ಪಕ್ಷ ಯಾವುದೇ ಆದರೂ ಬಲಾಢ್ಯ ಜಾತಿಗಳೇ ರಾಜಕೀಯ ಅಧಿಕಾರವನ್ನು ಹೊಂದಿವೆ. ಈ ಜಾತಿಗಳು ಮೂಲತಃ ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯದ ವಿರೋಧಿಗಳಾಗಿವೆ. ಅಷ್ಟು ಮಾತ್ರವಲ್ಲ, ಮೀಸಲಾತಿಯನ್ನು ತಮ್ಮ ಪರವಾಗಿ ತಿರುಚಲು ಸಂವಿಧಾನಾತ್ಮಕ ಪ್ರಯತ್ನಗಳನ್ನು ಮಾಡುತ್ತಾ ಸರಕಾರಗಳನ್ನು ಬೆದರಿಸಿ ಇಟ್ಟಿವೆ. ಚುನಾವಣಾ ರಾಜಕೀಯದಿಂದಾಗಿ ಸರಕಾರಗಳು, ವಿಳಂಬ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳ ಉದ್ದೇಶಪೂರ್ವಕ ಕಡೆಗಣನೆ ಇಂಥ ತಂತ್ರಗಳನ್ನು ಬಳಸುತ್ತಿವೆ. ಇವುಗಳ ಜೊತೆಗೆ ಅನ್ಯ ಕೋಮಿನ ದ್ವೇಷದ ಸಿದ್ಧಾಂತದಿಂದಾಗಿ ಇಡಬ್ಲ್ಯುಎಸ್ ಎನ್ನುವ ಮೀಸಲಾತಿಯನ್ನು ವೈದಿಕ ಶಕ್ತಿಗಳು ಜಾರಿಗೆ ತಂದಿವೆ. ಕೃತಿಕಾರರ ಈ ವ್ಯಾಖ್ಯಾನವು ಅತ್ಯಂತ ವಸ್ತುನಿಷ್ಠವಾಗಿದೆ. ಅದು ನಮ್ಮ ಸಾಮಾಜಿಕ, ರಾಜಕೀಯ ಪ್ರಜ್ಞೆಯನ್ನು ಎಚ್ಚರಗೊಳಿಸಿ ವೈಚಾರಿಕ ಕ್ರಿಯಾಶೀಲತೆಯನ್ನು ಬೆಳೆಸುವಂತಿದೆ. ಅಲ್ಲದೆ ದುರ್ಬಲ ಜಾತಿ, ಸಮುದಾಯಗಳು ದನಿಯೆತ್ತಲಾರದೆ ಈಗಲೂ ತೀವ್ರ ಅಸಮಾನತೆಯ ಅಸಹಾಯಕ ಸ್ಥಿತಿಯಲ್ಲಿಯೇ ಇರುವುದರ ಬಗ್ಗೆ ಈ ಲೇಖನಗಳು ಸಕಾಲಿಕವಾಗಿ ಎಚ್ಚರವನ್ನು ನಮ್ಮಲ್ಲಿ ಹುಟ್ಟಿಸುತ್ತವೆ.