ಬರಿ ಕತೆಯಲ್ಲ-ಅಗ್ರಹಾರದ ಬದುಕಿನ ಕಥನ
ಇಲ್ಲಿವರೆಗೆ ಶೋಷಿತರ ಲೋಕ, ದಲಿತರ ಜಗತ್ತು, ಬಡವರ ಬದುಕು, ಹಿಂದುಳಿದವರು, ಅಲ್ಪಸಂಖ್ಯಾತರು ಇತ್ಯಾದಿ ಹಣೆಪಟ್ಟಿ ಹಚ್ಚಿಕೊಂಡು ನೋಡುತ್ತಿದ್ದ ಕನ್ನಡ ವಿಮರ್ಶಾ ಮಾನದಂಡಕ್ಕೆ ಹೊಸ ಸೇರ್ಪಡೆ ‘ಬರಿ ಕತೆಯಲ್ಲ-ಅಗ್ರಹಾರದ ಬದುಕಿನ ಕಥನ’ (ಅಭಿರುಚಿ ಪ್ರಕಾಶನ). ಶತಮಾನಗಳಿಂದಲೂ ದೈವಿಕ ನೆಲೆಗಳನ್ನು ಬಳಸಿಕೊಂಡು, ಅಗೋಚರ ಶಕ್ತಿಗಳ ಭಯ- ಭೀತಿಗಳನ್ನು ಸೃಷ್ಟಿಸಿ ತಮ್ಮ ಬಂಡವಾಳವನ್ನಾಗಿಸಿಕೊಳ್ಳು ತ್ತಿದ್ದ ಒಂದು ಸಮುದಾಯವೇ ಇಲ್ಲಿ ಎಗ್ಗಿಲ್ಲದೆ ವರ್ತಿಸಿದ್ದು, ಪಾಪ ಪುಣ್ಯ ಗಳ ಲೆಕ್ಕಾಚಾರಗಳಲ್ಲಿ ಮುಳುಗದೆ ಸ್ವೇಚ್ಛಾಚಾರವಾಗಿ ಬದುಕಿದ್ದನ್ನು, ಮುಗುಮ್ಮಾಗಿ ಮುಚ್ಚಲ್ಪಟ್ಟ ತೆರೆಗಳನ್ನು ಸುಚೇತ ಕೆ.ಎಸ್. ಸಂಪೂರ್ಣವಾಗಿ ಸರಿಸಿದ್ದಾರೆ.
ಮನುಕುಲದ ಮೂಲಭೂತ ಸ್ವಭಾವಗಳು ಪ್ರಾಣಿಸಹಜ ಸ್ವಭಾವಗಳೇ. ಅಕ್ಷರವಂತನಾದಂತೆ ಮಾನವ ತನ್ನ ನಡೆಗಳಲ್ಲಿ ಗಂಭೀರತೆಯನ್ನು ಮಾತುಬಾರದ ಪ್ರಾಣಿಗಳಿಗಿಂತ ಭಿನ್ನ ಎಂಬುದನ್ನು ತೋರಿಸಲು ಕಲಿತ. ‘ನಾಗರಿಕ ನಾದಂತೆ’ ತನ್ನ ವ್ಯಕ್ತಿತ್ವವನ್ನು ಸಂಸ್ಕರಿಸಿಕೊಳ್ಳಲು ಹೆಣಗಾಡುತ್ತಾನೆ. ಇದು ಸಮಾಜದ ಎಲ್ಲಾ ವರ್ಗದ ಸಮುದಾಯದವರಲ್ಲೂ ಕಾಣುವಂಥದ್ದೆ. ಇದು ಸಹಜ, ಸುಂದರ. ಆದರೆ ವರ್ಗ ತರತಮದ, ಜಾತಿ ಶ್ರೇಣೀಕರಣದ ಶ್ರೇಷ್ಠತೆಯ ವ್ಯಸನದ ಪುರೋಹಿತಶಾಹಿ ಮನಸ್ಸುಗಳು ಅನಾದಿಯಿಂದಲೂ ಅಸಡ್ಡೆ ಮತ್ತು ಅಸಭ್ಯಗಳನ್ನು ಸದಾ ಅಕ್ಷರವಂಚಿತ, ಶೋಷಣೆಗೆ ಒಳಗಾದ ನಿರ್ದಿಷ್ಟ ಸಮುದಾಯವನ್ನೇ ಗುರಿಯಾಗಿಸಿಕೊಂಡು ಬಂದಿದೆ. ಅದನ್ನೇ ಇದುವರೆಗಿನ ಕನ್ನಡ ಕಥನಗಳು ಋಜುವಾತು ಮಾಡಲು ಹೋರಾಟಮಾಡಿವೆ. ಬಡತನ, ಅಜ್ಞಾನ, ಕಳ್ಳತನ, ಕೊಳಕುತನ, ಹಾದರ, ಮೋಸಗಾರಿಕೆ, ದುರಾಸೆ, ಸೋಮಾರಿತನ ಮುಂತಾದ ಕುರುಹುಗಳಿಂದಲೇ ನಿರ್ದಿಷ್ಟ ಸಮುದಾಯ ನಿರ್ಣಾಯಕವಾಗಿ ಗುರಿಯಾಗಿಸಲ್ಪಡುತ್ತಿದೆ. ಈ ‘ತನ’ಗಳೆಲ್ಲಾ ವರ್ಗಾತೀತ, ಜಾತ್ಯತೀತ ಅನ್ನುವ ಸರಳ ವಿವೇಕ ಇಂದಿಗೂ ಕೆಲವು ನೋಟಕ್ರಮಗಳಿಗೆ ದಕ್ಕಿಲ್ಲ. ಆದ್ದರಿಂದ ಈವರೆಗೂ ಒಂದು ತೆರನಾದ ಕಲ್ಪಿತ, ಭ್ರಮೆಯ ಲೋಕದ ಗಾಜನ್ನು ಒಡೆದು ವಾಸ್ತವತೆಯನ್ನು ಅನಾವರಣಗೊಳಿಸಿದ ಯಶಸ್ಸು ಈ ಕೃತಿಗೆ ಸಲ್ಲುತ್ತದೆ.
ವೈದಿಕ ಸಮುದಾಯದ ಬಗ್ಗೆ ಗೊತ್ತಿದೆ ಎಂದು ತಿಳಿದಿರುವ ಅದೆಷ್ಟೋ ಗೊತ್ತಿಲ್ಲದ ಸಂಗತಿಗಳು ಇಲ್ಲಿವೆ. ಮಡಿ, ಮೈಲಿಗೆಗೆ ಇಂದಿಗೂ ಶ್ರೇಷ್ಠತೆಯ ಪಟ್ಟವನ್ನು ಹೊತ್ತಿರುವ, ದೇಹ ಶುದ್ಧತೆಯನ್ನೇ ತನ್ನ ಅಸ್ಮಿತೆಯನ್ನಾಗಿಸಿಕೊಂಡು, ಶತಮಾನಗಳಿಂದ ಜನರ ಮನದೊಳಗೆ ಅಚ್ಚೊತ್ತಿದ್ದ ಸಮುದಾಯದ ಶುದ್ಧ, ಶುಭ್ರತೆಯ ಬಗ್ಗೆ ಹೇವರಿಕೆ ಮೂಡಿಸುತ್ತದೆ ಇಲ್ಲಿನ ಕಥನಗಳು. ಕೊಳೆತು ನಾರುವ ಮನಸ್ಸುಗಳೂ, ದುರಾಸೆಪಡುವ ಸಣ್ಣತನ ಗಳೂ ಇವೆ. ಏಕೆಂದರೆ ಇವರೂ ಎಲ್ಲರ ಹಾಗೆ ನಮ್ಮ ನಡುವಿನ ಸಾಮಾನ್ಯರೇ.
ಸತ್ಯಹರಿಶ್ಚಂದ್ರ ಅನ್ನುವ ಅನ್ವರ್ಥಕ್ಕೆ ನಾಲಾಯಕ್ ಆದವನ ವ್ಯಕ್ತಿತ್ವವು ಸುಳ್ಳು, ಮೋಸಗಾರಿಕೆ, ಹಾದರ, ಸೋಮಾರಿತನ, ಕೂತು ಉಣ್ಣುವವನು ಏನೇನೆಲ್ಲಾ ಬೆಳೆಸಿಕೊಳ್ಳಬಹುದೋ ಆ ಎಲ್ಲಾ ದುರ್ಗುಣಗಳಲ್ಲಿ ಅದ್ದಿ ತೆಗೆದ ಕೊರಡು. ಇದಕ್ಕೆ ವಿರುದ್ಧವಾಗಿ ಬಲಿಷ್ಠವಾಗಿ ಕಡೆದ ಪುತ್ಥಳಿ ಸುಶಮ್ಮ. ಒಬ್ಬಂಟಿಯಾಗಿ, ಸಂಸಾರದ ಚಕ್ರವನ್ನು ಎಳೆದೆಳೆದೂ ತಹಬದಿಗೆ ತಂದ ಗಟ್ಟಿಗಿತ್ತಿ. ಅಗ್ರಹಾರದ ಉಂಡಾಡಿಗಳು, ಬಜಾರಿಗಳು, ಲೋಲುಪರು, ಹದಿಹರೆಯದ ತರಲೆಗಳು, ವೃದ್ಧಾಪ್ಯದ ಗೊಡವೆಗಳು, ಬಗೆಹರಿಯದ ಬಡತನಗಳು, ತಿಂದು ತೇಗಿದರೂ ತೀರದ ಸಿರಿತನಗಳು, ಮಾನವತೆಯ ಶಿಖರಗಳು, ಕೀಳುಮನಸ್ಸಿನ ಹುಡಿಗಳು, ಪುಢಾರಿಗಳು ಎಲ್ಲರನ್ನೂ, ಎಲ್ಲವನ್ನೂ ಕಾಣಸಿಗುವಂತೆ ಕಂಡಿರಿಸಿದ್ದಾರೆ.
ಲೇಖಕರು ತಮ್ಮ ಬಾಲ್ಯದಲ್ಲಿ ಕಂಡ, ಕೇಳಿದ, ಕೇಳಿಸಿಕೊಂಡ, ಗ್ರಹಿಸಿದ ಅನುಭವಗಳ ಭಂಡಾರವನ್ನು ಅಗ್ರಹಾರದ ಕಥನದೊಳಗೆ ಕಟ್ಟಿಕೊಟ್ಟಿದ್ದಾರೆ. ಆತ್ಮಕತೆಯ ತುಣುಕಿನಂತಿರುವ ಇಲ್ಲಿನ ಬರಹ ಕನ್ನಡಕ್ಕೆ ಹೊಸ ಮಾದರಿ. ಓದುಗರನ್ನು ‘‘ಅರೆ! ನಾನೂ ನನ್ನ ಅನುಭವಗಳನ್ನು ಹೀಗೆ ಹಂಚಿಕೊಳ್ಳಬಹುದಲ್ಲ?’’ ಎಂಬ ಬರವಣಿಗೆಯ ಆಸೆಯನ್ನು ಚಿಗುರಿಸುತ್ತದೆ. ಒಂದು ಸಮುದಾಯಕ್ಕೆ ಸೇರಿದ ಲೇಖಕರು ಆಯಾ ಸಮುದಾಯವನ್ನೇ ವಿಮರ್ಶಿಸುವ ಮೂಲಕ ತಮ್ಮ ಸಮುದಾಯದ ಆಂತರಿಕ ವಿಮರ್ಶಕರಾಗಿ, ಮುಚ್ಚುಮರೆಯಿಲ್ಲದೆ ತನ್ನದೆಲ್ಲವನ್ನೂ ತೆರೆದಿಟ್ಟ ಮನವೇ ಆಗಿದ್ದಾರೆ.