ಸುಡುವ ಹಾದಿಯ ನಡಿಗೆ
ಈ ಹೊತ್ತಿನ ಹೊತ್ತಿಗೆ
ಭಾರತದ ಸಾಮಾಜಿಕ,ರಾಜಕೀಯ ಕ್ಷೇತ್ರ ಮಹಿಳೆ ಮತ್ತು ಶೂದ್ರರನ್ನು ಸದಾಕಾಲ ದೂರವಿಡುತ್ತಲೇ ಬಂದಿದೆ. ಹಕ್ಕುಗಳನ್ನು ಪಡೆಯುವಲ್ಲಿ ಈ ವರ್ಗವು ಹೋರಾಟದ ಮಾರ್ಗವನ್ನೇ ಅವಲಂಬಿಸಬೇಕಾಗಿದೆ.ಇಂದಿನ ಸಾಫ್ಟ್‌ವೇರ್ ಇಂಜಿನಿಯರುಗಳಿಗೆ ಈ ಸೋಷಿಯಲ್ ಇಂಜಿನಿಯರಿಂಗ್‌ನ ಆಳ,ಅರಿವುಗಳ ಪರಿಚಯವನ್ನು ಮಾಡಿಸಿ, ಹೊಸಪೀಳಿಗೆಯಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸುವ ಕಾರ್ಯ ಇಂದಿನ ಅಗತ್ಯವಾಗಿದೆ.
ಲಡಾಯಿ ಪ್ರಕಾಶನ ಪ್ರಕಟಿಸಿರುವ ‘ಸೋಷಿಯಲ್ ಸೈಂಟಿಸ್ಟ್ ಸಾವಿತ್ರಿಬಾಯಿ’ ಈ ನಿಟ್ಟಿನಲ್ಲಿ ಮಹತ್ವದ ಕೃತಿಯೆನಿಸಿದೆ. ಸಂಗಿಶೆಟ್ಟಿ ಶ್ರೀನಿವಾಸ್ ಅವರ ತೆಲುಗುಮೂಲದ ಕೃತಿಯನ್ನು ಡಾ.ಜಾಜಿ ದೇವೇಂದ್ರಪ್ಪ ಅವರು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದ್ದಾರೆ.
ಅಕ್ಷರವೇ ಮನುಕುಲದ ವಿಕಾಸಕ್ಕೆ ಇರುವ ಏಕೈಕ ದಾರಿ ಎಂಬುದನ್ನು ಅರಿತುಕೊಂಡು ಇಂದಿಗೆ ಸುಮಾರು 200 ವರ್ಷಗಳ ಹಿಂದೆ ಸಂಪ್ರದಾಯವಾದಿಗಳ ಕೆಂಗಣ್ಣು, ಕಿರುಕುಳಕ್ಕೆ ಗುರಿಯಾಗಿ, ಅವರ ಕಟಕಿ ಮಾತುಗಳನ್ನು ಲೆಕ್ಕಿಸದೆ ಸಮಾಜದ ಕೆಳಸ್ತರದ ಬಳಿ ಅಕ್ಷರದ ಹಣತೆಯನ್ನು ತೆಗೆದುಕೊಂಡು ಹೋದ ಜ್ಯೋತಿ ಬಾ ಹಾಗೂ ಸಾವಿತ್ರಿಬಾಯಿ ಫುಲೆ ದಂಪತಿಯ ಕಾರ್ಯವು ವ್ಯವಸ್ಥೆಗೆ ಎದುರಾಗಿ ಬೀಸಿದ ಗಾಳಿಯಂತೆ, ಪ್ರವಾಹಕ್ಕೆ ಎದುರಾಗಿ ಈಜಿದ ಸಾಹಸವೇ ಸರಿ. ಇತಿಹಾಸದ ಪುಟಗಳಲ್ಲಿ ಸಿಗಬೇಕಾದ ಮನ್ನಣೆ ಈ ದಂಪತಿಯ ಕಾರ್ಯಕ್ಕೆ ಸಿಕ್ಕಿಲ್ಲ. ಸ್ಥಾಪಿತ ಮೌಲ್ಯಗಳ ಮೇಲುಗೈಯಿಂದಾಗಿ ನಮ್ಮ ವಿಸ್ಮತಿಗೆ ಸೇರಿದ ಇಂತಹ ಅಸಂಖ್ಯ ಮಹನೀಯರ ಜೀವನ-ಹೋರಾಟಗಳ ಅರಿವು ಸಮಾಜದ ಸ್ವಾಸ್ಥ್ಯ ಕಾಪಾಡಲು ಇಂದಿಗೂ ಸ್ಫೂರ್ತಿದಾಯಕವೇ ಆಗಿವೆ.
ವಿಕಾರರೂಪಿ ಆಚರಣೆಗಳು ಕ್ರೂರವಾಗಿ ದ್ದರೂ ಅವುಗಳನ್ನು ಪ್ರಶ್ನಿಸಬಾರದು, ಪ್ರಶ್ನಿಸಿದವರನ್ನು ಸರ್ವನಾಶ ಮಾಡುವ ಸರ್ವಾಧಿಕಾರತ್ವದ ಧೋರಣೆಯ ವಿರುದ್ಧ ಎದೆ ಸೆಟೆಸಿ ನಿಂತ ಫುಲೆ ದಂಪತಿಯ ಕುರಿತು ಮಹಾರಾಷ್ಟ್ರದ ಗ್ರಾಮೀಣ ಪ್ರದೇಶಗಳ ಜನರಿಗೆ ಪರಿಚಯವಿದೆ. ಮಹಾರಾಷ್ಟ್ರದ ಆಚೆಗೆ ದೇಶದಾದ್ಯಂತ ಈ ದಂಪತಿಯ ಬಗ್ಗೆ ಚರ್ಚೆ, ಸಂವಾದಗಳು ರೂಪುಗೊಳ್ಳಲು ದಲಿತ ಚಳವಳಿ ಹಾಗೂ ಬಿಎಸ್‌ಪಿ ಸ್ಥಾಪಕ ಕಾನ್ಶಿರಾಂ ಕಾರಣ. ಅವರು ರಾಜಕೀಯ ಪಕ್ಷ ಸ್ಥಾಪನೆಗೆ ಮುನ್ನ ಕೆಲವರ್ಷಗಳ ಕಾಲ ಪುಣೆಯಲ್ಲಿ ಉದ್ಯೋಗ ಮಾಡಿದ್ದರು. ಆ ಅವಧಿಯಲ್ಲಿ ಫುಲೆ ಬರಹಗಳು, ಸಿದ್ಧಾಂತಗಳನ್ನು ಅಧ್ಯಯನ ಮಾಡಿದ್ದ ಅವರು ಫುಲೆ ಚಿಂತನೆಗಳನ್ನು ದೇಶದಾದ್ಯಂತ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ತೆಲುಗುನಾಡಿಗೆ ಫುಲೆಯವರನ್ನು ಮೊತ್ತ ಮೊದಲು ಪರಿಚಯಿಸಿದ ಮುದಿಗೊಂಡ ಈಶ್ವರಯ್ಯ 1982 ರಲ್ಲಿ ಹೈದರಾಬಾದ್‌ನಲ್ಲಿ ‘ಫುಲೆ ಸ್ಮತಿ ಸಮಿತಿ’ ರಚಿಸಿ ಜಯಂತಿ, ವರ್ಧಂತಿಗಳನ್ನು ಆಚರಿಸುತ್ತಾ, ವಿವಿಧ ಪ್ರಕಟಣೆಗಳನ್ನು ಹೊರತರುವ ಮೂಲಕ ಅಕ್ಷರಲೋಕದ ಈ ಅವ್ವ-ಅಪ್ಪ ತೆಲುಗು ನಾಡಿನೊಂದಿಗೆ ಹೊಂದಿದ್ದ ವಿವಿಧ ಸಂಪರ್ಕಗಳ ಮೇಲೆ ಬೆಳಕು ಚೆಲ್ಲಿದರು.
ಮರಾಠಾ ಅಧಿಕಾರಿಯ ಮಗ ಶಿವಾಜಿ ಸ್ವತಂತ್ರ ಆಡಳಿತ ನಡೆಸಲು ಮುಂದಾಗಿ ಪಟ್ಟಾಧಿಕಾರವಹಿಸಿಕೊಳ್ಳುವಾಗ ಶಿವಾಜಿಗೆ ಕ್ಷತ್ರಿಯ ಅರ್ಹತೆ ಇಲ್ಲ ಎಂದು ಸ್ಥಳೀಯ ಬ್ರಾಹ್ಮಣ ಪಂಡಿತರು ಪಟ್ಟಾಧಿಕಾರ ಮಹೋತ್ಸವ ನಡೆಸಲು ನಿರಾಕರಿಸುತ್ತಾರೆ. ಆಗ ಕಾಶಿಯಿಂದ ಗಂಗಾಭಟ್ಟನೆಂಬ ಬ್ರಾಹ್ಮಣ ಪಂಡಿತರೊಬ್ಬರನ್ನು ಕರೆಸಿ ಪಟ್ಟಾಧಿಕಾರ ಪಡೆಯವ ಶಿವಾಜಿಯ ಕ್ರಮ ಸ್ಥಳೀಯ ಬ್ರಾಹ್ಮಣಾಧಿಪತ್ಯಕ್ಕೆ ನೀಡಿದ ದೊಡ್ಡ ಪೆಟ್ಟು ಎನಿಸಿಕೊಳ್ಳುತ್ತದೆ. ಶಿವಾಜಿಯ ಕಾಲಾನಂತರ ಕ್ರಮೇಣ ಬ್ರಾಹ್ಮಣ ಪ್ರಧಾನಮಂತ್ರಿಗಳು ಈ ರಾಜ್ಯದ ಆಡಳಿತದಲ್ಲಿ ಹಿಡಿತ ಸಾಧಿಸುತ್ತಾರೆ. ಬಾಜಿರಾವ್, ನಾನಾಸಾಹೇಬ, ಪೇಶ್ವಾ, ಮಾಧವರಾವ್, ನಾನಾ ಫಡ್ನವೀಸ್‌ರ ಕಾಲದಲ್ಲಿ ಬ್ರಾಹ್ಮಣಾಧಿಪತ್ಯ ಆಳವಾಗಿ ಬೇರೂರುತ್ತದೆ. ಪೂಜೆ ಹಾಗೂ ಉನ್ನತ ಪದವಿಗಳಿಗೆ ಶೂದ್ರರು ಅನರ್ಹರು ಎಂದು ರಾಜರಿಗೆ ಅಂಕುಶ ಹಾಕುತ್ತಾರೆ.ಬ್ರಾಹ್ಮಣರು ಈ ನೆಲದ ಮೇಲೆ ಓಡಾಡುವ ದೇವರುಗಳಂತೆ ವರ್ತಿಸಿದರು. ಅವರ ತಪ್ಪಿಗೆ ದೊಡ್ಡ ಶಿಕ್ಷೆಗಳೂ ಇರಲಿಲ್ಲ. ದಲಿತರ ನೆರಳೂ ಭೂಮಿಯ ಮೇಲೆ ಬೀಳಬಾರದೆಂಬ ಶಾಸನ ವಿಧಿಸಿದರು. ದಲಿತ ಬಾಲಕಿ ಮುಕ್ತಾಬಾಯಿ ಸಾಲ್ವೇಕರ್ ತನ್ನ ಲೇಖನದಲ್ಲಿ ದಾಖಲಿಸಿರುವ ವಿವರಗಳನ್ನು ಕೃತಿ ಒದಗಿಸುತ್ತದೆ.
ಪೇಶ್ವೆಗಳ ಆಡಳಿತ ಕೊನೆಗೊಂಡು ಬ್ರಿಟಿಷ್ ಆಡಳಿತ ಬಂದ ನಂತರ ದಲಿತರಿಗೆ ತಮಗಿಷ್ಟವಾದ ಬಟ್ಟೆ,ಆಭರಣ ಧರಿಸುವ ಸ್ವಾತಂತ್ರ್ಯ ಸಿಕ್ಕಿತು.ಮುಂದೆ ಮಿಶನರಿಗಳು ಸರಕಾರಿ ಶಾಲೆಗಳ ಮೂಲಕ ಶಿಕ್ಷಣ ನೀಡುವ ಅವಕಾಶ ಕಲ್ಪಿಸಿದರು. ದೇಶದ ಮೊದಲ ದಲಿತ ಜರ್ನಲಿಸ್ಟ್ ಗೋಪಾಲ್‌ಬಾಬಾ ವಾಲಂಗಕರ್ , ಅಂಬೇಡ್ಕರರ ತಂದೆ ರಾಮ್‌ಜಿ ಸಕ್ಪಾಲ್ ಮತ್ತಿತರರು ಅಕ್ಷರಲೋಕಕ್ಕೆ ಕಾಲಿಡಲು ಇದು ಕಾರಣವಾಯಿತು. ಪುಣೆಯಲ್ಲಿ ಉನ್ನತಾಧಿಕಾರಿಯಾಗಿದ್ದ ಬ್ರಿಟನ್ ರಾಜಕುಟುಂಬದ ಎಲ್ಫಿನ್‌ಸ್ಟೋನ್‌ರಿಂದ ಶಿಕ್ಷಣ ಕ್ಷೇತ್ರದಲ್ಲಿ ಹೊಸಯುಗ ಪ್ರಾರಂಭವಾಗಿ ಮಹಾರಾಷ್ಟ್ರದ ಶಿಕ್ಷಣ ಕ್ಷೇತ್ರ ಆಧುನಿಕತೆಗೆ ತೆರೆದುಕೊಳ್ಳಲು ಸಾಧ್ಯವಾದ ಬೆಳವಣಿಗೆಗಳ ಮೇಲೆ ಪುಸ್ತಕ ಬೆಳಕು ಚೆಲ್ಲಿದೆ.
ಎಲ್ಫಿನ್‌ಸ್ಟೋನ್ ಸ್ಥಾಪಿಸಿದ ಕಾಲೇಜಿನಲ್ಲಿ ಆಂಗ್ಲ ವಿದ್ಯಾಭ್ಯಾಸ ಮಾಡಿದ ಹೊಸ ತಲೆಮಾರು ಬಾಲ್ಯವಿವಾಹ ನಿಷೇಧ, ವಿಧವಾ ವಿವಾಹ ಪ್ರೋತ್ಸಾಹ, ಪತ್ರಿಕೆಗಳ ಪ್ರಕಟಣೆ, ಸಾಹಿತ್ಯ ಕೃಷಿ ಪ್ರಾರಂಭಿಸಿದರು. ಇವರಲ್ಲಿಯೇ ವಿಭಿನ್ನವಾಗಿ ಆಲೋಚಿಸಿದ ಜ್ಯೋತಿರಾವ್ ಫುಲೆ ಶಿಕ್ಷಣದಿಂದಲೇ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಾಧ್ಯವೆಂದು ದೃಢವಾಗಿ ನಂಬಿ ಶಾಲೆಗಳನ್ನು ತೆರೆದರು, ಕೆಳವರ್ಗಗಳನ್ನು ಅಕ್ಷರ ಜಗತ್ತಿಗೆ ಕರೆತಂದರು, ಸತ್ಯಶೋಧಕ ಸಮಾಜ ಸ್ಥಾಪಿಸಿ ಮೂಢನಂಬಿಕೆಗಳ ವಿರುದ್ಧ ಹೋರಾಡಿದರು.
ಮಹಿಳಾ ಶಿಕ್ಷಣ, ದಕ್ಷಿಣ ಫಂಡ್ ನಿಧಿಯ ಬಳಕೆಯ ವಿಸ್ತರಣೆ, ಸತ್ಯಶೋಧಕ ಸಮಾಜದ ಚಟುವಟಿಕೆಗಳ ವಿರುದ್ಧ ಸುದ್ದಿಗಳನ್ನು ಪ್ರಕಟಿಸುತ್ತ, ಶಾಹೂ ಮಹಾರಾಜರ ವ್ಯಕ್ತಿತ್ವಕ್ಕೂ ಹಾನಿ ಮಾಡಲು ಪ್ರಯತ್ನಿಸಿದ ಬಾಲಗಂಗಾಧರ ತಿಲಕ್ ಅವರ ಕೇಸರಿ, ಮರಾಠಾ ಪತ್ರಿಕೆಗಳ ನಿಲುವನ್ನು ಕೃತಿ ವಿಮರ್ಶೆಗೆ ಒಡ್ಡಿದೆ.
ಆಧುನಿಕ ಭಾರತ ನಿರ್ಮಾಣಕ್ಕೆ ಸಾಮಾಜಿಕ ಹೋರಾಟದಲ್ಲಿ ಮೊದಲ ಹೆಜ್ಜೆ ಇರಿಸಿದ ಧೀರೋದಾತ್ತ ಮಹಿಳೆ ಸಾವಿತ್ರಿಬಾಯಿ ಮಹಿಳೆಯರು, ದಮನಿತರು, ಬಹುಜನರ ಹಕ್ಕುಗಳಿಗೆ ಧ್ವನಿಯಾದಳು. ಶಿಕ್ಷಕಿಯಾಗಿ,ಬರಹಗಾರ್ತಿಯಾಗಿ ಸಾಧನೆಗೈದ ಈ ಅಕ್ಷರದ ಅವ್ವ ಎದುರಿಸಿದ ಸಾಮಾಜಿಕ ಕಿರುಕುಳ ಅಷ್ಟಿಷ್ಟಲ್ಲ.ಈಕೆ ದಲಿತರಿಗೆ ಅಕ್ಷರ ಕಲಿಸುವುದನ್ನು ಸಹಿಸದ ಶಕ್ತಿಗಳು ಸಾವಿತ್ರಿಬಾಯಿಯ ಮೇಲೆ ಸೆಗಣಿಯ ನೀರು, ಕೆಸರು ಎರಚಿದರು,ದಾರಿಯಲ್ಲಿಯೇ ಬೈಗುಳಗಳ ಸುರಿಮಳೆಗೈದರೂ ಕೂಡ ಧೃತಿಗೆಡದೇ ದೃಢ ಹೆಜ್ಜೆಗಳನ್ನಿಟ್ಟ ಸಾವಿತ್ರಿಬಾಯಿ ‘‘ನನ್ನ ಸಹೋದರಿಯರಿಗೆ ವಿದ್ಯೆ ಕಲಿಸುವ ಪವಿತ್ರ ಕಾರ್ಯ ಮಾಡುತ್ತಿದ್ದೇನೆ. ನನ್ನ ಮೇಲೆ ಎರಚುವ ರಾಡಿ, ಸೆಗಣಿ, ಎಸೆಯುವ ಕಲ್ಲುಗಳನ್ನು ಹೂವುಗಳೆಂದು ಭಾವಿಸುತ್ತೇನೆ’’ ಎಂದು ಸ್ವತಃ ಬರೆದುಕೊಂಡಿರುವ ಅಂಶಗಳು, ಈ ಕೃತಿಯ ಮೂಲ ಆಶಯಕ್ಕೆ ದಿಕ್ಸೂಚಿಯಂತಿವೆ.
ತನ್ನ ಮನೆಯ ಸೇದು ಬಾವಿಯ ನೀರಿನ ಉಪಯೋಗದ ಹಕ್ಕನ್ನು ಸಾವಿತ್ರಿಬಾಯಿ ದಲಿತರಿಗೆ ಮುಕ್ತವಾಗಿ ಕೊಟ್ಟಿದ್ದು, ಬಾಲ್ಯವಿವಾಹ ತಡೆ, ಭ್ರೂಣ ಹತ್ಯಾ ನಿರೋಧಕ ಕೇಂದ್ರ ಸ್ಥಾಪನೆ, ವಿಧವೆಯರ ಮಕ್ಕಳಿಗೆ ಆಶ್ರಯ, ಶಿರೋಮುಂಡನ ವಿರೋಧಿ ಹೋರಾಟ, ಅಂತರ್ ಜಾತೀಯ ವಿವಾಹಗಳಂತಹ ಸಾಮಾಜಿಕ ಸ್ವಾಸ್ಥ್ಯ ಹೆಚ್ಚಿಸುವ ಕಾರ್ಯಗಳನ್ನು ಚಳವಳಿಯಾಗಿ ಮುನ್ನಡೆಸಿದ ಸಾವಿತ್ರಿಬಾಯಿ ಹಾಗೂ ಜ್ಯೋತಿ ಬಾ ಫುಲೆ ದಂಪತಿಯ ಹೋರಾಟದ ಬದುಕಿಗೆ ನೆರವಾದ ಅವರ ಅನೇಕ ಸಮಕಾಲೀನರು, ಹಿರಿಯರ ಬಗೆಗೂ ಕೃತಿ ಮಾಹಿತಿ ನೀಡುತ್ತದೆ.
ಸರಳ, ನಿರಾಡಂಬರದ ಬದುಕಿನ ಮೂಲಕವೇ ಬೆಳಕು ಚೆಲ್ಲಿದ ಸಾವಿತ್ರಿಬಾಯಿಯ ಒಡನಾಡಿಗಳು ಹಾಗೂ ಶಿಷ್ಯೆಯಂದಿರಾದ ಸುಗುಣಾಬಾಯಿ, ಮೊದಲ ಮುಸ್ಲಿಮ್ ಶಿಕ್ಷಕಿ ಫಾತಿಮಾ ಶೇಕ್, ಸರಸ್ವತಿ ರಮಾಬಾಯಿ, ಆಧುನಿಕ ಪದ್ಧತಿಯ ಮೊದಲ ವೈದ್ಯೆ ಆನಂದಿಬಾಯಿ ಜೋಷಿ, ರಮಾಬಾಯಿ ರಾನಡೆ, ತಾರಾಬಾಯಿ ಶಿಂದೆ, ಮುಕ್ತಾಬಾಯಿ, ಸಿಂತಿಯಾ ಫರಾರೆ, ಚಿಮಣಾಬಾಯಿ ಮೊದ ಲಾದ ಮಹಿಳಾ ಶಿರೋಮಣಿಗಳು ತಮ್ಮನ್ನು ಸುಟ್ಟುಕೊಂಡು ಅಕ್ಷರದ ಹಣತೆ ಹಚ್ಚಲು ಮಾಡಿದ ಹೋರಾಟವನ್ನು ಕೃತಿ ದಾಖಲಿಸಿದೆ.
ಸಾವಿತ್ರಿಬಾಯಿಯ ಪತ್ರಗಳು, ಕವಿತೆ, ದಲಿತ ಬಾಲಕಿಯ ಪ್ರತಿಭಟನೆ, ಜೀವನದ ಘಟನಾವಳಿಗಳು, ಕೃತಿಗಳು, ಸ್ಥಾಪಿಸಿದ ಪಾಠಶಾಲೆಗಳ ಮಾಹಿತಿಯೂ ಕೂಡ ಅಡಕವಾಗಿರುವುದು ಕೃತಿಯ ಮೌಲ್ಯ ಹೆಚ್ಚಿಸಿದೆ. ತೆಲುಗು ನಾಡಿನೊಂದಿಗೆ ಸಾವಿತ್ರಿಬಾಯಿ ಹೊಂದಿರುವ ನಂಟಿನ ಸೂಕ್ಷ್ಮ ಸಂಪರ್ಕಗಳೊಂದಿಗೆ ಪ್ರಾರಂಭವಾಗುವ ಕೃತಿಯು ಅವರ ಒಟ್ಟು ಹೋರಾಟವನ್ನು ಯಾವುದೇ ಚೌಕಟ್ಟಿಗೆ ಸೀಮಿತಗೊಳಿಸದೇ ಇಡಿಯಾಗಿ ಓದುಗರಿಗೆ ಒದಗಿಸಿದೆ.