ಅಮ್ಮಾ... ನನ್ನ ಹೆಸರು ಬರೆದಿಡು
ಝೆಯ್ನಾ ಅಝ್ಝಮ್
ಕನ್ನಡಕ್ಕೆ: ಹುಸ್ನ ಖದೀಜ
ಅಮ್ಮಾ... ನನ್ನ ಕಾಲಿನಲ್ಲಿ ನನ್ನ ಹೆಸರು ಬರೆದಿಡು
ಆ ಕಪ್ಪು ಪರ್ಮನೆಂಟ್ ಮಾರ್ಕರ್ ಪೆನ್ನಲ್ಲೇ ನನ್ನ ಹೆಸರು ಬರೆದಿಡು
ಒದ್ದೆಯಾದರೂ ಅದರ ಇಂಕು ಹರಡುವುದಿಲ್ಲ
ಬೆಂಕಿ ತಾಗಿದಾಗ ಅದರಲ್ಲಿ ಬರೆದಿದ್ದು ಕರಗಿ ಹೋಗುವುದಿಲ್ಲ
ಅಮ್ಮಾ... ನನ್ನ ಕಾಲಿನಲ್ಲಿ ನನ್ನ ಹೆಸರು ಬರೆದಿಡು
ಆದಷ್ಟು ಸ್ಪಷ್ಟವಾಗಿ, ದಪ್ಪವಾಗಿ ನನ್ನ ಹೆಸರು ಬರೆದಿಡು
ನನ್ನ ಹೆಸರು ಬರೆವಾಗ ಅದಕ್ಕೆ ನಿನ್ನ ಅಲಂಕಾರವನ್ನೂ ಸೇರಿಸು
ನಾನು ನಿದ್ದೆಗೆ ಜಾರುವಾಗ ನಿನ್ನ ಕೈಬರಹ ನೋಡಿ ಸಮಾಧಾನವಾಗುತ್ತೇನೆ
ಅಮ್ಮಾ... ನನ್ನ ಕಾಲಿನಲ್ಲಿ ನನ್ನ ಹೆಸರು ಬರೆದಿಡು
ನನ್ನ ತಮ್ಮಂದಿರು, ತಂಗಿಯಂದಿರ ಕಾಲಲ್ಲೂ ಅವರ ಹೆಸರು ಬರೆದಿಡು
ಆ ರೀತಿ ನಾವೆಲ್ಲರೂ ಒಂದಾಗಿರುತ್ತೇವೆ
ಆ ರೀತಿ ನಾವೆಲ್ಲರೂ ನಿನ್ನ ಮಕ್ಕಳಾಗಿ ಗುರುತಿಸಲ್ಪಡುತ್ತೇವೆ
ಅಮ್ಮಾ... ನನ್ನ ಕಾಲಿನಲ್ಲಿ ನನ್ನ ಹೆಸರು ಬರೆದಿಡು
ನಿನ್ನ ಮತ್ತು ಅಪ್ಪನ ಕಾಲಲ್ಲೂ ನಿಮ್ಮ ಹೆಸರನ್ನು ಬರೆದಿಡು
ನಮ್ಮೆಲ್ಲರನ್ನೂ ಒಂದೇ ಕುಟುಂಬವಾಗಿ ನೆನಪಿಸಲಿ
ಅಮ್ಮಾ... ನನ್ನ ಕಾಲಿನಲ್ಲಿ ನನ್ನ ಹೆಸರು ಬರೆದಿಡು
ಯಾವುದೇ ಸಂಖ್ಯೆಯನ್ನು ಬರೆದಿಡಬೇಡ
ನನ್ನ ಹುಟ್ಟಿದ ದಿನ, ಮನೆಯ ಸಂಖ್ಯೆ ಬರೆಯಬೇಡ
ಈ ಜಗತ್ತು ನನ್ನನ್ನು ಇನ್ನೊಂದು ಸಂಖ್ಯೆಯಾಗಿ ಪಟ್ಟಿ ಮಾಡೋದು ಬೇಡ
ನನಗೊಂದು ಹೆಸರಿದೆ, ನಾನೊಂದು ಸಂಖ್ಯೆ ಅಲ್ಲ
ಅಮ್ಮಾ... ನನ್ನ ಕಾಲಿನಲ್ಲಿ ನನ್ನ ಹೆಸರು ಬರೆದಿಡು
ನಮ್ಮ ಮನೆ ಮೇಲೆ ಬಾಂಬು ಬಿದ್ದಾಗ
ಮನೆಯ ಗೋಡೆಗಳು ನಮ್ಮ ಬುರುಡೆಯನ್ನೂ,
ಮೂಳೆಗಳನ್ನೂ ಪುಡಿಪುಡಿ ಮಾಡಿದಾಗ
ನಮಗೆ ಓಡಿ ಹೋಗಲು ಸ್ಥಳವೇ ಇರಲಿಲ್ಲ ಎಂದು
ನಮ್ಮ ಕಾಲುಗಳು ನಮ್ಮ ಕತೆ ಹೇಳಲಿವೆ
(ಗಾಝಾದಲ್ಲಿ ಇಸ್ರೇಲ್ ದಾಳಿಯಿಂದ ತಾವು ಅಥವಾ ತಮ್ಮ ಮಕ್ಕಳು ಕೊಲ್ಲಲ್ಪಟ್ಟರೆ ಗುರುತು ಸಿಗಲು ಹೆತ್ತವರು ತಮ್ಮ ಮಕ್ಕಳ ಕಾಲಿನ ಮೇಲೆ ಅವರ ಹೆಸರು ಬರೆದಿಡಲು ಪ್ರಾರಂಭಿಸಿದಾಗ ಬರೆದ ಸಾಲುಗಳು)