ಶಿಕ್ಷಕರಿಗೂ ಬೇಕಿದೆ ಕಾನೂನಿನ ರಕ್ಷಣೆ
Photo: freepik
ವೈದ್ಯರು ಮತ್ತು ರೋಗಿಗಳ ನಡುವಿನ ಸಂಬಂಧ ಅವಿನಾಭಾವವಾದುದು. ವೈದ್ಯ ವೃತ್ತಿಯನ್ನು ಜನರು ಸೇವೆ ಎಂದು ಕರೆಯುತ್ತಾ ಬಂದಿದ್ದಾರೆ. ಇಂದು ಆಸ್ಪತ್ರೆಗಳು ಬೃಹತ್ ಕಾರ್ಪೊರೇಟ್ ಸಂಸ್ಥೆಯಾಗಿ ಜನರನ್ನು ಲೂಟಿ ಮಾಡುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿವೆಯಾದರೂ, ವೈದ್ಯರು ಮತ್ತು ರೋಗಿಯ ನಡುವಿನ ಖಾಸಗಿ ಸಂಬಂಧದ ಗೌರವ ಇನ್ನೂ ಉಳಿದುಕೊಂಡಿದೆ. ವೈದ್ಯರನ್ನು ದೇವರಿಗೆ ಸಮಾನವೆಂದು ಬಗೆಯುವ ರೋಗಿಗಳು ಇನ್ನೂ ಸಮಾಜದಲ್ಲಿ ಇದ್ದಾರೆ. ಇಷ್ಟಾದರೂ ವೈದ್ಯರು ನಮ್ಮಂತೆಯೇ ಮನುಷ್ಯರು. ಅನೇಕ ಸಂದರ್ಭದಲ್ಲಿ ಅವರೂ ಎಡವುತ್ತಾರೆ. ಹಾಗೆ ಎಡವಿದ ಸಂದರ್ಭದಲ್ಲಿ ರೋಗಿಯ ಪ್ರಾಣಕ್ಕೆ ಅಪಾಯ ಎದುರಾಗಬಹುದು. ದೇವರಾಗಿದ್ದ ವೈದ್ಯರು ಒಂದೇ ಕ್ಷಣದಲ್ಲಿ ರೋಗಿಗಳ ಕುಟುಂಬದ ಪಾಲಿಗೆ ಕೊಲೆಗಟುಕರಂತೆ ಭಾಸವಾಗಬಹುದು. ಇಂತಹಸಂದರ್ಭದಲ್ಲಿ ರೋಗಿಗಳ ಕುಟುಂಬಗಳಿಂದ ವೈದ್ಯರ ಮೇಲೆ ದಾಳಿ ನಡೆದ ಉದಾಹರಣೆಗಳಿವೆ. ತಮ್ಮ ಮೇಲೆ ನಡೆಯುವ ದಾಳಿಗಳ ವಿರುದ್ಧ ವೈದ್ಯರು ಹಲವು ಬಾರಿ ಸಂಘಟಿತರಾಗಿ ಪ್ರತಿಭಟನೆ ನಡೆಸಿದ್ದಾರೆ. ಅವರ ಪ್ರತಿಭಟನೆಗಳಿಗೆ ಮಣಿದು ಸರಕಾರ ಅವರ ಪರವಾಗಿ ಅವರ ರಕ್ಷಣೆಗಾಗಿ ಕಠಿಣ ಕಾನೂನುಗಳನ್ನು ಜಾರಿಗೊಳಿಸಿದೆ. ವೈದ್ಯರ ಮೇಲೆ ಹಲ್ಲೆ ನಡೆಸುವುದು ಜಾಮೀನು ರಹಿತ ಅಪರಾಧ. ದೂರು ದಾಖಲಾಗಿ 30 ದಿನಗಳ ಒಳಗೆ ತನಿಖೆ ನಡೆಸಬೇಕಾಗುತ್ತದೆ. ಅಪರಾಧಿಗೆ ಕನಿಷ್ಠ 3 ತಿಂಗಳಿಂದ ಗರಿಷ್ಠ ಏಳು ವರ್ಷದವರೆಗೆ ಜೈಲಾಗಬಹುದು. ಐದು ಲಕ್ಷ ರೂ.ವರೆಗೆ ದಂಡವಿಧಿಸುವ ಅವಕಾಶವಿದೆ.
ವೈದ್ಯ-ರೋಗಿಗಳ ನಡುವಿನ ಸಂಬಂಧದಂತೆಯೇ ಗುರು-ಶಿಷ್ಯರ ಸಂಬಂಧಗಳನ್ನೂ ಸಮಾಜ ಗೌರವಪೂರ್ವಕವಾಗಿ ನೋಡುತ್ತಾ ಬಂದಿದೆ. ‘ಆಚಾರ್ಯ ದೇವೋಭವ’ ಎನ್ನುತ್ತದೆ ಭಾರತೀಯ ಸಂಸ್ಕೃತಿ. ಆದರೆ ಇತ್ತೀಚಿನ ದಿನಗಳಲ್ಲಿ ಈ ಗುರು-ಶಿಷ್ಯರ ಸಂಬಂಧಕ್ಕೆ ಹುಳಿ ಹಿಂಡುವ ಕೆಲಸವನ್ನು ರಾಜಕಾರಣಿಗಳು ಮಾಡುತ್ತಿದ್ದಾರೆ.ಒಂದೆಡೆ ಶಾಲಾ ಪಠ್ಯಗಳನ್ನು ರಾಜಕೀಯ ಪಕ್ಷಗಳು ತಮ್ಮ ಮೂಗಿನ ನೇರಕ್ಕೆ ತಿರುಚುತ್ತಿರುವುದು ಸುದ್ದಿಯಲ್ಲಿದೆ. ಇದೀಗ ಇದರ ಜೊತೆ ಜೊತೆಗೆ ಶಿಕ್ಷಕರು ಪಠ್ಯವನ್ನು ಹೇಗೆ ಕಲಿಸಬೇಕು, ಕಲಿಸಬಾರದು ಎನ್ನುವುದನ್ನು ಬೀದಿಯಲ್ಲಿರುವ ರೌಡಿಗಳು, ಗೂಂಡಾಗಳು ನಿರ್ಧರಿಸಲು ತೊಡಗಿದ್ದಾರೆ. ಶಾಲೆಗಳಿಗೆ ನುಗ್ಗಿ ಶಿಕ್ಷಕರು ಏನು ಕಲಿಸಬೇಕು ಕಲಿಸಬಾರದು ಎನ್ನುವುದನ್ನು ಆದೇಶಿಸುತ್ತಿದ್ದಾರೆ. ವಿದ್ಯಾರ್ಥಿಗಳನ್ನು ತಿದ್ದಿ ತೀಡಿ ಅವರನ್ನು ಯೋಗ್ಯ ಪ್ರಜೆಯಾಗಿ ರೂಪಿಸಬೇಕಾಗಿರುವ ಮಹತ್ತರ ಹೊಣೆಗಾರಿಕೆಯನ್ನು ಹೊತ್ತ ಶಿಕ್ಷಕರು ಇಂದು ತರಗತಿಯಲ್ಲಿ ಮುಕ್ತವಾಗಿ ಪಾಠ ಮಾಡುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳೇ ಶಿಕ್ಷಕರನ್ನು ತಿದ್ದುವ ಮಟ್ಟಕ್ಕೆ ಸಮಾಜ ಕೆಟ್ಟು ನಿಂತಿದೆ. ಇಂದು ವೈದ್ಯರಂತೆಯೇ ಶಿಕ್ಷಕರು ಕೂಡ ಕಾನೂನಿನ ರಕ್ಷಣೆಯ ಅಡಿಯಲ್ಲಿ ಪಾಠ ಬೋಧಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇತ್ತೀಚೆಗೆ ಮಂಗಳೂರಿನ ಖಾಸಗಿ ಹೈಸ್ಕೂಲೊಂದರಲ್ಲಿ ಶಿಕ್ಷಕರು ಪಾಠ ಮಾಡುವ ಸಂದರ್ಭದಲ್ಲಿ ಧರ್ಮವನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಸಂಘಪರಿವಾರಕ್ಕೆ ಸೇರಿದ್ದಾರೆ ಎನ್ನಲಾಗಿರುವ ಕೆಲವು ಗೂಂಡಾಗಳ ತಂಡ ಶಾಲಾ ಆವರಣದಲ್ಲಿ ದಾಂಧಲೆ ನಡೆಸಿದೆ. ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ. ರಾಮನ ಕುರಿತಂತೆ ಶಿಕ್ಷಕರು ಪಾಠದ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದಾರೆ ಎನ್ನುವುದು ಅವರ ಮೇಲಿರುವ ಆರೋಪ. ಇಷ್ಟಕ್ಕೂ ಅವರು ಪಾಠದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಏನನ್ನು ಹೇಳಿದ್ದಾರೆ ಎನ್ನುವುದರ ಬಗ್ಗೆ ಯಾವುದೇ ಸಾಕ್ಷ್ಯಗಳಿಲ್ಲ. ವಿದ್ಯಾರ್ಥಿಗಳ ಹೇಳಿಕೆಗಳಲ್ಲಿಯೂ ಸ್ಪಷ್ಟತೆಯಿಲ್ಲ. ಸ್ಥಳೀಯ ರಾಜಕೀಯ ಶಕ್ತಿಗಳು ವಿದ್ಯಾರ್ಥಿಗಳ ಬಾಯಿಯಲ್ಲಿ ಶಿಕ್ಷಕರ ವಿರುದ್ಧ ಹೇಳಿಕೆಗಳನ್ನು ನೀಡಿಸುತ್ತಿವೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ತಮಾಷೆಯೆಂದರೆ, ಶಾಲೆಯಲ್ಲಿ ಶಿಕ್ಷಕರೊಬ್ಬರು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಒಬ್ಬ ಮಹಿಳೆ ಮೊಬೈಲ್ನಲ್ಲಿ ದೂರು ಹೇಳುತ್ತಿರುವ ಆಡಿಯೋ ಒಂದು ವೈರಲ್ ಆಗಿದೆ. ಈ ದೂರನ್ನು ಆಕೆ ನೀಡುತ್ತಿರುವುದು ಕ್ರಿಮಿನಲ್ ಪ್ರಕರಣಗಳಿರುವ ಸಂಘಪರಿವಾರದ ಮುಖಂಡನಿಗೆ. ಆತನಿಗೂ ಶಿಕ್ಷಣಕ್ಕೂ ಏನು ಸಂಬಂಧ? ಒಂದು ಶಿಕ್ಷಣ ಸಂಸ್ಥೆಯ ಒಳಗೆ ನಡೆದಿರುವ ಪಾಠಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಕ್ರಿಮಿನಲ್ ಆರೋಪಿಯೊಬ್ಬನ ಬಳಿ ದೂರನ್ನು ಹೇಳುತ್ತಿರುವ ಆ ಮಹಿಳೆಯ ಮಾತುಗಳು ನಂಬಿಕೆಗೆ ಎಷ್ಟು ಅರ್ಹ? ಈ ಮೂಲಕ ತಮ್ಮ ಮಕ್ಕಳಿಗೆ ಏನನ್ನು ಹೇಗೆ ಕಲಿಸಬೇಕು ಎನ್ನುವ ತರಬೇತಿಯನ್ನು ಸಂಘಪರಿವಾರ ಕಾರ್ಯಕರ್ತರ ಮೂಲಕ ನೀಡಲು ಹೊರಟಿದ್ದಾರೆಯೆ? ಮೇಲ್ನೋಟಕ್ಕೆ ಇದೊಂದು ದುರುದ್ದೇಶಪೂರ್ವಕ ಆರೋಪ ಎನ್ನುವುದು ಗೊತ್ತಾಗಿ ಬಿಡುತ್ತದೆ. ಒಂದು ವೇಳೆ ಪೋಷಕರಿಗೆ ಶಿಕ್ಷಕರ ವರ್ತನೆಯ ಬಗ್ಗೆ ಆಕ್ಷೇಪಗಳಿದ್ದಿದ್ದರೆ ಅವರು ಖಂಡಿತವಾಗಿಯೂ ಅದನ್ನು ಗಂಭೀರವಾಗಿ ತೆಗೆದುಕೊಂಡು ಶಾಲಾ ಪ್ರಾಂಶುಪಾಲರಿಗೆ ತಿಳಿಸುತ್ತಿದ್ದರು. ಹಾಗೆಯೇ ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನವನ್ನು ಸೆಳೆಯುತ್ತಿದ್ದರು. ತಮ್ಮ ಮಕ್ಕಳ ಮೇಲೆ ಕಾಳಜಿಯಿರುವ ಯಾವ ಪೋಷಕರು ತಮ್ಮ ಮಕ್ಕಳು ಕಲಿಯುತ್ತಿರುವ ಶಿಕ್ಷಣ ಸಂಸ್ಥೆಯ ಮುಂದೆ ಸಂಘಪರಿವಾರದ ಕೆಲವು ಗೂಂಡಾಗಳನ್ನು ಕರೆತಂದು ನಿಲ್ಲಿಸುತ್ತಿರಲಿಲ್ಲ.
ತರಗತಿಗಳಲ್ಲಿ ಶಾಲೆಯ ಪಠ್ಯ ಪುಸ್ತಕಗಳನ್ನು ಮುಂದಿಟ್ಟುಕೊಂಡು ಸಮಾಜದ ಒಳ ಹೊರಗಿನ ವಿಷಯಗಳನ್ನು ಶಿಕ್ಷಕರು ಸಹಜವಾಗಿಯೇ ಚರ್ಚಿಸುತ್ತಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೂಡ ಶಿಕ್ಷಕರ ಜೊತೆಗೆ ಚರ್ಚೆಗಳನ್ನು ನಡೆಸಲು ಅವಕಾಶಗಳಿರುತ್ತವೆ. ರಾಮಾಯಣ-ಮಹಾಭಾರತ ಧಾರ್ಮಿಕ ಗ್ರಂಥಗಳಲ್ಲ. ಅವುಗಳು ಎರಡು ಮಹಾ ಕಾವ್ಯಗಳು. ಆ ಕಾರಣಕ್ಕಾಗಿಯೇ ಅವುಗಳಲ್ಲಿರುವ ಕತೆಗಳನ್ನು ಪಠ್ಯಗಳಲ್ಲಿ ಅಳವಡಿಸಲಾಗಿದೆ. ಈ ಪಠ್ಯಗಳನ್ನು ಬೋಧಿಸುವಾಗ ಆ ಗ್ರಂಥಗಳು ಪ್ರತಿಪಾದಿಸುವ ಮೌಲ್ಯಗಳನ್ನು ಶಿಕ್ಷಕರು ವಿವರವಾಗಿ ತೆರೆದಿಡಬೇಕಾಗುತ್ತದೆ. ರಾಮನ ವಚನಪಾಲನೆಯ ಬಗ್ಗೆ ಹೇಳುವಾಗ, ಸಮಾಜದ ವಚನಭ್ರಷ್ಟರನ್ನು ಶಿಕ್ಷಕರು ಸಹಜವಾಗಿಯೇ ಉಲ್ಲೇಖಿಸುತ್ತಾರೆ. ಸಾಮಾಜಿಕ ಸುಧಾರಕರ ಬಗ್ಗೆ ಬೋಧನೆಗಳನ್ನು ಮಾಡುವಾಗ ಸಹಜವಾಗಿಯೇ ಅವರು ಯಾವ ಕೆಡುಕುಗಳ ವಿರುದ್ಧ ಹೋರಾಡಿದರು ಎನ್ನುವುದನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕಾಗುತ್ತದೆ. ನಾರಾಯಣ ಗುರುಗಳು ಅಸ್ಪಶ್ಯತೆಯ ವಿರುದ್ಧ ಹೋರಾಟ ಮಾಡಿರುವುದನ್ನು ವಿದ್ಯಾರ್ಥಿಗಳಿಗೆ ವಿವರಿಸುವಾಗ ಸಹಜವಾಗಿಯೇ ಹಿಂದೂ ಧರ್ಮದೊಳಗಿರುವ ಜಾತೀಯತೆಯನ್ನು ಪ್ರಸ್ತಾಪಿಸಬೇಕಾಗುತ್ತದೆ. ‘‘ಕಲ್ಲ ನಾಗರ ಕಂಡರೆ ಹಾಲನೆರೆಯೆಂಬರು....’’ ಎನ್ನುವ ವಚನ ಪಠ್ಯದಲ್ಲಿದ್ದರೆ ಅದನ್ನು ಶಿಕ್ಷಕರು ಹೇಗೆ ಬೋಧಿಸಬೇಕು? ಈ ಸಂದರ್ಭದಲ್ಲಿ ಶಿಕ್ಷಕರು ಬಸವಣ್ಣ ಎತ್ತಿಹಿಡಿದ ವೈಚಾರಿಕತೆಯನ್ನು ಬೋಧಿಸಿದರೆ ವಿದ್ಯಾರ್ಥಿಗಳಿಗೆ ಅದು ತಮ್ಮ ಧರ್ಮದ ಅವಹೇಳನವಾಗಿ ಭಾಸವಾಗಬಹುದು. ಸ್ವಾಮಿ ವಿವೇಕಾನಂದರು ಪುರೋಹಿತಶಾಹಿ ವ್ಯವಸ್ಥೆಯ ವಿರುದ್ಧ ಟೀಕೆಗಳನ್ನು ಮಾಡಿದ್ದಾರೆ. ಹಾಗೆಯೇ ಅಂಬೇಡ್ಕರ್ ಕೂಡ ಜಾತಿ ಅಸಮಾನತೆಯ ವಿರುದ್ಧ ಧ್ವನಿಯೆತ್ತಿದ್ದಾರೆ. ಇವೆಲ್ಲವನ್ನು ಶಿಕ್ಷಕರು ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ವಿವರಿಸುವುದು ಹೇಗೆ? ಎಲ್ಲ ಧರ್ಮಗಳಲ್ಲೂ ಮೌಢ್ಯಗಳಿವೆ. ಸಮಾಜಕ್ಕೆ ಕಂಟಕವಾಗಿರುವ ಮೌಢ್ಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿ ಅವರಲ್ಲಿ ವೈಜ್ಞಾನಿಕ, ವೈಚಾರಿಕ ಪ್ರಜ್ಞೆಯನ್ನು ಮೂಡಿಸುವುದು ಶಿಕ್ಷಕರ ಕರ್ತವ್ಯವಾಗಿದೆ. ವಿಜ್ಞಾನದ ಬಗ್ಗೆ ಪಾಠ ಮಾಡುವಾಗ ಹಲವು ಮೌಢ್ಯಗಳ ವಿರುದ್ಧವೂ ಮಾತನಾಡುವುದು ಅನಿವಾರ್ಯವಾಗುತ್ತದೆ. ಇದನ್ನು ವಿದ್ಯಾರ್ಥಿಗಳು ತಪ್ಪು ತಿಳಿದುಕೊಂಡು ಪೋಷಕರ ಬಳಿ ‘ಧರ್ಮವನ್ನು ನಿಂದಿಸಿದ್ದಾರೆ’ ಎಂದು ದೂರು ಹೇಳಿದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳುವುದು ಎಷ್ಟು ಸರಿ? ಈ ಸಂದರ್ಭದಲ್ಲಿ ಸೂಕ್ಷ್ಮವನ್ನು ಅರ್ಥಮಾಡಿಕೊಂಡು ಪೋಷಕರು ನೇರವಾಗಿ ಶಿಕ್ಷಕರ ಜೊತೆಗೆ ಮಾತುಕತೆ ನಡೆಸಬೇಕು. ಒಂದು ವೇಳೆ ಶಿಕ್ಷಕರು ಪೂರ್ವಾಗ್ರಹ ಪೀಡಿತರಾಗಿ ಒಂದು ಧರ್ಮವನ್ನು ನಿಂದಿಸಿರುವುದು ನಿಜವೇ ಆಗಿದ್ದರೆ ಅದರ ವಿರುದ್ಧ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಇದೆ. ಯಾವ ಕಾರಣಕ್ಕೂ ಶಿಕ್ಷಣ ಸಂಸ್ಥೆಗಳ ಆವರಣಗಳಿಗೆ ಗೂಂಡಾಗಳು, ರಾಜಕೀಯ ಕಾರ್ಯಕರ್ತರು ಪ್ರವೇಶಿಸಲು ಪೋಷಕರು ಅವಕಾಶ ನೀಡಬಾರದು. ಅದರಿಂದ ಹೆಚ್ಚು ನಷ್ಟ ವಿದ್ಯಾರ್ಥಿಗಳಿಗೇ ಹೊರತು ಶಿಕ್ಷಣ ಸಂಸ್ಥೆಗಲ್ಲ.
ಇದೇ ಸಂದರ್ಭದಲ್ಲಿ ಪೂವಾಗ್ರಹ ಪೀಡಿತ, ಧರ್ಮಾಂಧ ಶಿಕ್ಷಕರು ಇಲ್ಲವೆಂದಿಲ್ಲ. ಇಸ್ರೋದಂತಹ ಸಂಸ್ಥೆಗಳೊಳಗೇ ಮೌಢ್ಯಗಳನ್ನು ಹರಡುವ ವಿಜ್ಞಾನಿಗಳಿರುವಾಗ, ಶಿಕ್ಷಣ ಸಂಸ್ಥೆಗಳಲ್ಲಿ ಜಾತೀಯತೆ, ಧರ್ಮಾಂಧತೆ, ರಾಜಕೀಯ ಪಕ್ಷಪಾತಿ ಶಿಕ್ಷಕರು ಸೇರಿಕೊಂಡರೆ ಅದರಲ್ಲಿ ಅಚ್ಚರಿಯಿಲ್ಲ. ಅಂತಹ ಶಿಕ್ಷಕರು ಕಂಡು ಬಂದಾಗ ಶಿಕ್ಷಣ ಇಲಾಖೆಗಳಿಗೆ ದೂರುಗಳನ್ನು ನೀಡಬಹುದು. ತೀರಾ ಅಗತ್ಯವಿದ್ದರೆ ಅವರ ವಿರುದ್ಧ ಪ್ರಕರಣಗಳನ್ನು ದಾಖಲಿಸಬಹುದು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಜೊತೆಗೆ ಯಾವ ಸಂಬಂಧವೂ ಇಲ್ಲದ ರಾಜಕೀಯ ಗೂಂಡಾಗಳು ಶಾಲಾ ಸಂಸ್ಥೆಗಳ ಆವರಣದಲ್ಲಿ ದಾಂಧಲೆ ನಡೆಸಲು ಮುಂದಾದರೆ ಶಿಕ್ಷಕರ ರಕ್ಷಣೆಗಾಗಿ ಕಾನೂನೊಂದನ್ನು ಜಾರಿಗೊಳಿಸುವ ಅಗತ್ಯವಿದೆ. ಇಲ್ಲದೆ ಇದ್ದರೆ ಮುಂದಿನ ದಿನಗಳಲ್ಲಿ ಶಿಕ್ಷಕರು ಕಾಟಾಚಾರಕ್ಕೆ ಪಾಠ ಮಾಡಿ ಕೈತೊಳೆದುಕೊಳ್ಳಬಹುದು. ವಿಜ್ಞಾನ ಪಾಠ ಮಾಡಲು ಶಿಕ್ಷಕರು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಬಹುದು. ಇದರಿಂದ ಮತ್ತೆ ನಷ್ಟ ಸಮಾಜಕ್ಕೇ. ಆದುದರಿಂದ, ಶಿಕ್ಷಕರ ಪಾಠಗಳ ಬಗ್ಗೆ ದೂರುಗಳು ಬಂದರೆ ಅದನ್ನು ನಿಭಾಯಿಸಲು ಶಿಕ್ಷಣ ಇಲಾಖೆಯೊಳಗೇ ಮಾರ್ಗದರ್ಶಿ ತಂಡವೊಂದು ರಚನೆಯಾಗಬೇಕು. ಒಂದು ವೇಳೆ ಶಿಕ್ಷಕರು ಪೂರ್ವಾಗ್ರಹ ಪೀಡಿತರಾಗಿ ಧರ್ಮ, ಜಾತಿ ನಿಂದನೆಗಳನ್ನು ಮಾಡಿದ್ದಾರಾದರೆ ಅದನ್ನು ತಂಡ ತನಿಖೆ ಮಾಡಿ ವರದಿ ನೀಡಬೇಕು. ಬಳಿಕ ಇಲಾಖೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇದರ ಹೊರತು, ಮೂರಕ್ಷರ ಕಲಿಯದ, ಪೋಲಿ ತಿರುಗುವ ಸಂಘಪರಿವಾರದ ಕಾರ್ಯಕರ್ತರ ಕೈಗೆ ಶಿಕ್ಷಕರನ್ನು ಒಪ್ಪಿಸುವಂತಾಗಬಾರದು. ಇಂತಹ ಜನರು ಶಾಲಾ ಆವರಣದೊಳಗೆ ಪ್ರವೇಶಿಸಲು ಪ್ರಯತ್ನಿಸಿದಾಗ ಪೋಷಕರೇ ಸಂಘಟಿತರಾಗಿ ಅದನ್ನು ವಿರೋಧಿಸಬೇಕು. ಆಗ ಮಾತ್ರ, ವಿದ್ಯಾರ್ಥಿಗಳಿಗೆ ಶಿಕ್ಷಕರಿಂದ ಯೋಗ್ಯ ಮಾರ್ಗದರ್ಶನ ಸಿಕ್ಕೀತು. ಆ ಮೂಲಕ ವಿದ್ಯಾರ್ಥಿಗಳು ಭವಿಷ್ಯದ ಸತ್ಪ್ರಜೆಗಳಾಗಿ ರೂಪುಕೊಳ್ಳಲು ಸಾಧ್ಯ.