48 ಗಂಟೆಗಳಲ್ಲಿ ಉದ್ಯೋಗಕ್ಕಾಗಿ 3000 ಅರ್ಜಿ: ನಿರುದ್ಯೋಗ ತೀವ್ರತೆ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಬೆಂಗಳೂರಿನ ನವೋದ್ಯಮಿ
ಬೆಂಗಳೂರು: ಬೆಂಗಳೂರು ಮೂಲದ ತಂತ್ರಜ್ಞಾನ ಸಂಬಂಧಿತ ಸ್ಟಾರ್ಟ್‌ಅಪ್ ಸ್ಥಾಪಕರೊಬ್ಬರು ಖಾಲಿ ಹುದ್ದೆಗಳಿಗಾಗಿ ಆನ್‌ಲೈನ್ ಅರ್ಜಿಯನ್ನು ಆಹ್ವಾನಿಸಿದ ಕೇವಲ 48 ಗಂಟೆಯೊಳಗೆ ಸುಮಾರು 3,000 ಅರ್ಜಿಗಳನ್ನು ಸ್ವೀಕರಿಸಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ಕಂಪನಿಯ ವೆಬ್‌ಸೈಟ್ ನಲ್ಲಿ ಉದ್ಯೋಗಾವಕಾಶ ಪ್ರಕಟಣೆ ಹೊರಡಿಸಿದ ಕೇವಲ 48 ಗಂಟೆಗಳಲ್ಲಿ 3,000ದಷ್ಟು ದೊಡ್ಡ ಸಂಖ್ಯೆಯ ಅರ್ಜಿಗಳನ್ನು ತಮ್ಮ ಕಂಪನಿ ಸ್ವೀಕರಿಸಿದೆ ಎಂಬ ಸಂಗತಿಯನ್ನು ಸ್ಪ್ರಿಂಗ್‌ವರ್ಕ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಹಿರಂಗ ಪಡಿಸಿದ್ದಾರೆ.
ಸ್ಪ್ರಿಂಗ್‌ವರ್ಕ್ ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾರ್ತಿಕ್ ಮಂದವಿಲ್ಲೆ ಈ ಪರಿಸ್ಥಿತಿಯ ಕುರಿತು ಅಚ್ಚರಿ ವ್ಯಕ್ತಪಡಿಸಿದ್ದು, ಉದ್ಯೋಗ ಮಾರುಕಟ್ಟೆ ಸ್ಥಿತಿಯ ಕುರಿತು ಪ್ರಶ್ನೆ ಎತ್ತಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ದೇಶಾದ್ಯಂತ ಹಲವಾರು ತಂತ್ರಜ್ಞಾನ ಕಂಪನಿಗಳು ಉದ್ಯೋಗ ಕಡಿತ ಮಾಡಿರುವುದರಿಂದ ಸಾವಿರಾರು ಮಂದಿ ಉದ್ಯೋಗರಹಿತರಾಗಿದ್ದಾರೆ. ಇತ್ತೀಚೆಗೆ ಉದ್ಯೋಗ ಕಡಿತ ಮಾಡಿದ ಜನಪ್ರಿಯ ತಂತ್ರಜ್ಞಾನ ಕಂಪನಿಗಳ ಪೈಕಿ ಅಮೆಝಾನ್, ಮೆಟಾ, ಗೂಗಲ್ ಹಾಗೂ ಟ್ವಿಟರ್‌ನಂತಹ ಹಲವು ಕಂಪನಿಗಳು ಸೇರಿವೆ.
ಉದ್ಯೋಗಕ್ಕಾಗಿ ಅರ್ಜಿಗಳ ಸಲ್ಲಿಕೆಯು ಅಸಹಜವಾಗಿದೆಯೆ? ಎಂಬ ಪ್ರಶ್ನೆಗೆ ಉತ್ತರಿಸಿರುವ ಮಂದವಿಲ್ಲೆ, ತಿಂಗಳಡೀ ಅರ್ಜಿಗಳ ಸುರಿಮಳೆಯಾಗುತ್ತಿದೆ. ವಾಸ್ತವವಾಗಿ, ಕಂಪನಿಯು ಈವರೆಗೆ 12,500ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದೆ. ನಮ್ಮ ಉದ್ಯೋಗಾವಕಾಶಗಳ ಕುರಿತು ವ್ಯಕ್ತವಾಗುತ್ತಿರುವ ಈ ಭಾರಿ ಆಸಕ್ತಿಯು, ಅದರ ಹಿಂದಿನ ಬಲವಾದ ಕಾರಣಗಳ ಕುರಿತು ಪ್ರಶ್ನೆಯನ್ನು ಮೂಡಿಸಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಟ್ವಿಟರ್ ಬಳಕೆದಾರರೊಬ್ಬರು, ಇಷ್ಟು ದೊಡ್ಡ ಮಟ್ಟದ ಆಸಕ್ತಿಗೆ ಕಾರಣ ಸ್ಪ್ರಿಂಗ್‌ವರ್ಕ್ಸ್ ಸಂಸ್ಥೆಯು ಜಾಹೀರಾತು ನೀಡಿರುವಾಗ ಮನೆಯಲ್ಲೇ ಕೆಲಸ ಮಾಡಬಹುದು ಎಂದು ನಮೂದಿಸಿದೆ. ಹುದ್ದೆಯ ಪಟ್ಟಿಯ ಹಿಂದೆ 'permanent remote' ಎಂಬ ಪದ ಸೇರ್ಪಡೆ ಮಾಡಿರುವುದರಿಂದ ಇಷ್ಟು ದೊಡ್ಡ ಮಟ್ಟದ ಅಭ್ಯರ್ಥಿಗಳನ್ನು ಆಕರ್ಷಿಸಲು ಸಾಧ್ಯವಾಗಿರಬಹುದು. ಒಂದು ವೇಳೆ ಹುದ್ದೆಗಳನ್ನು ಕಚೇರಿಯಿಂದಲೇ ನಿರ್ವಹಿಸಬೇಕು ಎಂದು ಜಾಹೀರಾತು ನೀಡಿದ್ದರೆ ಎಷ್ಟು ಅರ್ಜಿಗಳು ಸಲ್ಲಿಕೆಯಾಗುತ್ತಿದ್ದವು ಎಂಬುದು ನೋಡಬೇಕಾಗಿತ್ತು ಎಂದು ಹೇಳಿದ್ದಾರೆ.
ಸದ್ಯ ಸುಮಾರು 200 ಉದ್ಯೋಗಿಗಳನ್ನು ಸ್ಪ್ರಿಂಗ್‌ವರ್ಕ್ಸ್ ನೇಮಿಸಿಕೊಳ್ಳುತ್ತಿದೆ