ಮೆಟಾದಿಂದ ಗೇಟ್ಪಾಸ್ ಪಡೆದ ಉದ್ಯೋಗಿ ಹೊರಟಿದ್ದು ಸುದೀರ್ಘ ಪ್ರವಾಸ
ಸಾಂದರ್ಭಿಕ ಚಿತ್ರ.
ನಮ್ಮ ದಿನನಿತ್ಯದ ಜಂಜಾಟದಲ್ಲಿ ಕುಟುಂಬದ ಜತೆ ಸಂತಸದ ಕ್ಷಣಗಳನ್ನು ಕಳೆಯುವುದನ್ನು ಸಾಮಾನ್ಯವಾಗಿ ನಾವು ಮರೆಯುತ್ತೇವೆ. ಆದರೆ ಉದ್ಯೋಗಕ್ಕೆ ಸೇರಿದ ಒಂದೇ ವರ್ಷದಲ್ಲಿ ಗೇಟ್ಪಾಸ್ ಪಡೆದ ಮೆಟಾ ಉದ್ಯೋಗಿಯೊಬ್ಬರು ತಮ್ಮನ್ನು ವಜಾಗೊಳಿಸಿದರೂ ತಲೆ ಕೆಡಿಸಿಕೊಂಡಿಲ್ಲ. ಉದ್ಯೋಗದಿಂದ ವಜಾ ಆದ ತಕ್ಷಣ ಮಗನ ಜತೆಗೆ 32 ದಿನಗಳ ಸುಧೀರ್ಘ ಪ್ರವಾಸಕ್ಕೆ ಮುಂದಾಗಿದ್ದಾರೆ. ಕಳೆದ ಕೆಲ ತಿಂಗಳುಗಳಲ್ಲಿ ಮೆಟಾ ಸಾವಿರಾರು ಮಂದಿಯನ್ನು ಮನೆಗೆ ಕಳುಹಿಸಿದ್ದು, ಉದ್ಯೋಗ ಶೋಧನಾ ಪ್ಲಾಟ್ಫಾರಂ ಲಿಂಕ್ಡಿನ್ನಲ್ಲಿ ತಮ್ಮ ಕಥೆಗಳನ್ನು ಹಂಚಿಕೊಂಡಿದ್ದಾರೆ.
ಉದ್ಯೋಗ ಅರಸುವ ಸಾಹಸಕ್ಕೆ ವಿರಾಮ ನೀಡಿ ತಿಂಗಳ ಕಾಲ ಮಗನ ಜತೆಗೆ ಪ್ರವಾಸ ಕೈಗೊಂಡದ್ದು, ತಮ್ಮ ಜೀವನದಲ್ಲಿ ಲವಲವಿಕೆ ಉಳಿಸಿಕೊಳ್ಳಲು ಹೇಗೆ ನೆರವಾಯಿತು ಎಂಬ ಕಥೆಯನ್ನು ಈ ಮಹಿಳೆ ಹಂಚಿಕೊಂಡಿದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲಿ ಪ್ರವಾಸ ಹೇಗೆ ಚಿಕಿತ್ಸಕ ಪರಿಣಾಮ ಬೀರಬಲ್ಲದು ಎನ್ನುವುದನ್ನು ಈ ಕಥಾನಕ ತೆರೆದಿಟ್ಟಿದೆ.
ಬದುಕಿನ ಏಳು ಬೀಳುಗಳನ್ನು ನಾವು ಹೇಗೆ ಎದುರಿಸುತ್ತೇವೆ ಎನ್ನುವುದು ಮುಖ್ಯ ಎಂಬ ಸ್ಫೂರ್ತಿದಾಯಕ ಮಾತಿನೊಂದಿಗೆ ಈ ಪೋಸ್ಟ್ ಆರಂಭವಾಗುತ್ತದೆ. ನಿರೀಕ್ಷೆಯಂತೆ ಬದುಕು ಸಾಗದಿದ್ದಾಗ ನಾನು ಹಾಗೂ ಮಗ ಈ ಬೇಸಿಗೆಯಲ್ಲಿ ಪ್ರವಾಸಕ್ಕೆ ನಿರ್ಧರಿಸಿದೆವು ಎಂದು ಹೇಳಿದ್ದಾರೆ. ಮೆಟಾ ಉದ್ಯೋಗಕ್ಕೆ ಸೇರಿ ಒಂದೇ ವರ್ಷದಲ್ಲಿ ಈ ಮಹಿಳೆ ಉದ್ಯೋಗ ಕಳೆದುಕೊಳ್ಳಬೇಕಾಯಿತು. ಮಗನಿಗೆ ಭುಜಕ್ಕೆ ಗಾಯವಾಗಿದ್ದು, ಬೇಸ್ಬಾಲ್ ತಂಡ ಸೇರುವ ಆಸೆಗೆ ತಣ್ಣೀರೆರಚಿತು.
"ಈ ಸಂದರ್ಭದಲ್ಲಿ ನಾವಿಬ್ಬರೂ ಈ ಕಠಿಣ ಪರಿಸ್ಥಿತಿ ಹಾಗೂ ಚಳಿಯನ್ನು ಪರಿಶ್ರಮದಿಂದ ಎದುರಿಸಿದೆವು. ಮತ್ತೆ ಕ್ಷಿಪ್ರವಾಗಿ ಹಳಿಗೆ ಮರಳುವುದು ನಮ್ಮ ಉದ್ದೇಶವಾಗಿತ್ತು. ನಾನು ಉದ್ಯೋಗ ಬೇಟೆಗೆ ಧುಮುಕಿದರೆ ಮಗ ಆಟಕ್ಕೆ ಮರಳುವ ಕ್ರಮಕ್ಕೆ ಮುಂದಾದ. ಈ ಹಂತದಲ್ಲಿ 32 ದಿನಗಳ ಪ್ರವಾಸ ಕೈಗೊಂಡು ಬೇಸ್ಬಾಲ್ಗಾಗಿ ಫ್ಲೋರಿಡಾ, ಜಾರ್ಜಿಯಾ ಮತ್ತು ಅಲ್ಬಾಮಾಗೆ ತೆರಳಿದೆವು" ಎಂದು ವಿವರಿಸಿದ್ದಾರೆ.