ಮಾರುಕಟ್ಟೆಗೆ ಲಗ್ಗೆಯಿಟ್ಟ ಐಫೋನ್ 16 ಸರಣಿಯ ಸ್ಮಾರ್ಟ್ಫೋನ್ಗಳು: ದರಗಳು ಹೇಗಿವೆ? ಇಲ್ಲಿದೆ ಮಾಹಿತಿ…
Photo credit: apple.com
ಹೊಸದಿಲ್ಲಿ: ಆ್ಯಪಲ್ ಕಂಪನಿ ಐಫೋನ್ 16 ಸರಣಿಯ ಪ್ರೀಮಿಯಂ ಸ್ಮಾರ್ಟ್ಫೋನ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಮೇಡ್-ಇನ್-ಇಂಡಿಯಾ ಐಫೋನ್ 16 ಸರಣಿಯು ಪ್ರಪಂಚದಾದ್ಯಂತ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.
ಕ್ಯಾಲಿಫೋರ್ನಿಯಾದ ಆ್ಯಪಲ್ ಪಾರ್ಕ್ನಲ್ಲಿರುವ ಸ್ಟೀವ್ ಜಾಬ್ಸ್ ಥಿಯೇಟರ್ನಲ್ಲಿ ʼಇಟ್ಸ್ ಗ್ಲೋಟೈಮ್ʼ ಎಂಬ ವಾರ್ಷಿಕ ಕಾರ್ಯಕ್ರಮದಲ್ಲಿ ಕಂಪನಿಯು ತನ್ನ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಐಫೋನ್ 16 ಸರಣಿಯು ವಿನ್ಯಾಸ, ಕ್ಯಾಮೆರಾ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ ಆಧುನಿಕ ತಂತ್ರಜ್ಞಾನದ ಹಾರ್ಡ್ವೇರ್ಗಳನ್ನು ಬಳಸಲಾಗಿದೆ. ಉತ್ತಮ ಕಾರ್ಯಕ್ಷಮತೆಗಾಗಿ ಎಲ್ಲಾ ಮಾದರಿಗಳು ಹೊಸ A18 ಪ್ರೊ ಚಿಪ್ಸೆಟ್ ನ್ನು ಒಳಗೊಂಡಿರುತ್ತವೆ.
ಐಫೋನ್ –16 ಸರಣಿಯಲ್ಲಿ ಐಫೋನ್ 16, ಐಫೋನ್ 16 ಪ್ಲಸ್, ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಎಂಬ ನಾಲ್ಕು ಮಾದರಿಗಳನ್ನು ಪರಿಚಯಿಸಲಾಗಿದೆ.
(Photo: apple.com)
ಜೆಪಿ ಮೋರ್ಗಾನ್ ವರದಿಯ ಪ್ರಕಾರ, ಆ್ಯಪಲ್ ಕಂಪನಿ 2025ರ ವೇಳೆಗೆ ತನ್ನ ಐಫೋನ್ ಉತ್ಪಾದನೆಯ 25%ವನ್ನು ಭಾರತಕ್ಕೆ ವರ್ಗಾಯಿಸಲು ಯೋಜಿಸಿದೆ.
ಐಫೋನ್ –16 ವಿಶೇಷತೆಗಳು
ಐಫೋನ್ 16 ಸ್ಮಾರ್ಟ್ಫೋನ್ 6.1 ಇಂಚಿನ ಪರದೆಯನ್ನು ಹೊಂದಿದೆ. 16 ಪ್ಲಸ್ ಆವೃತ್ತಿಯು 6.7 XDR OLED ಪ್ಯಾನಲ್ ಹೊಂದಿರಲಿದ್ದು ಪಿಕ್ಸೆಲ್ ಸಾಂದ್ರತೆ 460 ಪಿಪಿಐ ಹಾಗೂ 60Hz ರಿಫ್ರೆಶ್ ರೇಟ್ ಇದೆ.
ಫೋನ್ನ ಹೊರ ಕವಚವು ಏರೋಸ್ಪೇಸ್ ಗುಣಮಟ್ಟದ ಅಲ್ಯೂಮಿನಿಯಂನಿಂದ ಸಿದ್ಧಪಡಿಸಲಾಗಿದೆ. ಈ ಮೊದಲು ಪೋನ್ ಕ್ಯಾಮೆರಾವನ್ನು ಲಂಬವಾಗಿ ಜೋಡಿಸಲಾಗುತ್ತಿತ್ತು. ಆದರೆ ಈ ಬಾರಿ ಕ್ಯಾಮೆರಾದ ವಿನ್ಯಾಸವನ್ನು ಆ್ಯಪಲ್ ಬದಲಿಸಿದೆ.
ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಅನುಕ್ರಮವಾಗಿ 6.3 ಇಂಚು ಮತ್ತು 6.9 ಇಂಚಿನ ದೊಡ್ಡ ಪರದೆಯನ್ನು ಹೊಂದಿರಲಿದೆ.
ಗುಣಮಟ್ಟದ ಚಿತ್ರ ಹಾಗೂ ವಿಡಿಯೊ ಚಿತ್ರೀಕರಣದ ದೃಷ್ಟಿಯಿಂದ ಪ್ರೊ ಮಾದರಿಯ ಫೋನ್ಗಳ ಕ್ಯಾಮೆರಾಗಳ ಹಾರ್ಡ್ವೇರ್, ಸೆನ್ಸರ್ಗಳು ಬೇರೆಯೇ ಆಗಿವೆ.
ಐಫೋನ್ 16 ಮತ್ತು 16 ಪ್ಲಸ್ ಸ್ಮಾರ್ಟ್ಫೋನ್ನಲ್ಲಿ ಆ್ಯಕ್ಷನ್ ಬಟನ್ ಗಳು ಕೂಡ ಅಳವಡಿಕೆ ಮಾಡಲಾಗಿದೆ. ಕ್ಯಾಮೆರಾ, ಫ್ಲ್ಯಾಶ್ಲೈಟ್ ಅಥವಾ ಆ್ಯಪ್ಗಳನ್ನು ತ್ವರಿತವಾಗಿ ತೆರೆಯಬಹುದು, ರಿಂಗ್ ಮತ್ತು ಸೈಲೆಂಟ್ ಮೋಡ್ ನಡುವೆ ಬದಲಾಯಿಸಬಹುದು.
(Photo: apple.com)
ಐಫೋನ್ 16 ಮತ್ತು 16 ಪ್ಲಸ್ ಎರಡೂ ಸ್ಮಾರ್ಟ್ಫೋನ್ಗಳು ಕಪ್ಪು, ಬಿಳಿ, ಗುಲಾಬಿ, ಟೀಲ್ ಮತ್ತು ಅಲ್ಟ್ರಾಮರೀನ್ ಬಣ್ಣಗಳಲ್ಲಿ ದೊರೆಯುತ್ತವೆ. ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಸ್ಮಾರ್ಟ್ಫೋನ್ಗಳು ಕಪ್ಪು, ಬಿಳಿ ಸೇರಿದಂತೆ ಐದು ಬಣ್ಣಗಳಲ್ಲಿ ಲಭ್ಯವಿದೆ.
ಐಫೋನ್ 16 ಮತ್ತು ಐಫೋನ್ 16 ಪ್ಲಸ್ ಸ್ಮಾರ್ಟ್ಫೋನ್ನಲ್ಲಿ 48 ಮೆಗಾಪಿಕ್ಸೆಲ್ ಪ್ರಧಾನ ಕ್ಯಾಮೆರಾದೊಂದಿಗೆ 12MP ಅಲ್ಟ್ರಾ ವೈಡ್ ಆ್ಯಂಗಲ್ ಸೆನ್ಸರ್ ಮತ್ತು 12MP ಸೆಲ್ಫಿ ಕ್ಯಾಮೆರಾ ಇದೆ. ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಸ್ಮಾರ್ಟ್ಫೋನ್ನಲ್ಲಿ 48 ಮೆಗಾಪಿಕ್ಸೆಲ್ ಪ್ರಧಾನ ಕ್ಯಾಮೆರಾದೊಂದಿಗೆ 12MP ಅಲ್ಟ್ರಾ ವೈಡ್ ಆ್ಯಂಗಲ್ ಸೆನ್ಸರ್ ಮತ್ತು 12MP ಸೆಲ್ಫಿ ಕ್ಯಾಮೆರಾವಿದೆ.
ಭಾರತದಲ್ಲಿ ಐಫೋನ್ –16 ಬೆಲೆ
ಐಫೋನ್ 16 ಸ್ಮಾರ್ಟ್ಫೋನ್ 128GB 79,900, ಐಫೋನ್ 16 ಸ್ಮಾರ್ಟ್ಫೋನ್ 256GB 89,999 ಮತ್ತು ಐಫೋನ್ 16 ಸ್ಮಾರ್ಟ್ಫೋನ್ 512GB ಬೆಲೆ 1,09,900ರೂ. ಇರಲಿದೆ.
ಭಾರತದಲ್ಲಿ ಐಫೋನ್ 16 ಪ್ರೋ(128GB) ಈಗ 1,19,900 ರಿಂದ ಪ್ರಾರಂಭವಾಗುತ್ತದೆ, ಆದರೆ ಐಫೋನ್ 16 ಪ್ರೋ ಮ್ಯಾಕ್ಸ್ (256GB) ಬೆಲೆ 1,44,900 ಆಗಿದೆ. 512GB ಬೆಲೆ 1,64, 999ರೂ, ಇದೆ.
ಕಳೆದ ವರ್ಷದ ಐಪೋನ್ 15 ಪ್ರೋ ಬೆಲೆಗಳಿಗಿಂತ ಇದು ಗಮನಾರ್ಹ ಇಳಿಕೆಯಾಗಿದೆ. ಈ ಮೊದಲು ಐಪೋನ್ 15 ಪ್ರೋವನ್ನು 1,34,990 ಮತ್ತು ಐಪೋನ್ 15 ಪ್ರೋ ಮ್ಯಾಕ್ಸ್ ಅನ್ನು 1,56,990ಕ್ಕೆ ಬಿಡುಗಡೆ ಮಾಡಲಾಗಿತ್ತು.