ಎಚ್ಚರಿಕೆ.. ನಕಲಿ ಆ್ಯಂಡ್ರಾಯ್ಡ್ ಚಾಟ್ ಆ್ಯಪ್ ಬಳಸಿ ವಾಟ್ಸ್ ಆ್ಯಪ್ ಮಾಹಿತಿ ಕದಿಯುವವರಿದ್ದಾರೆ !
ಹ್ಯಾಕರ್‍ಗಳು ದಕ್ಷಿಣ ಏಷ್ಯಾದ ವಾಟ್ಸಪ್ ಬಳಕೆದಾರರನ್ನು ಗುರಿಯಾಗಿಸಿಕೊಂಡು, ಸೇಫ್ ಚಾಟ್ ಹೆಸರಿನ ಆ್ಯಂಡ್ರಾಯ್ಡ್ ಚಾಟಿಂಗ್ ಆ್ಯಪ್ ಬಳಸಿ ವಾಟ್ಸ್ ಆ್ಯಪ್ ಚಾಟ್ ಮಾಹಿತಿಗೆ ನೇರವಾಗಿ ಕನ್ನ ಹಾಕುತ್ತಿರುವ ಅಂಶ ಇದೀಗ ಬೆಳಕಿಗೆ ಬಂದಿದೆ. ಸೈಫರ್ಮಾ ಎಂಬ ಸೈಬರ್ ಭದ್ರತಾ ಸಂಸ್ಥೆಯ ಸಂಶೋಧಕರು ಇದನ್ನು ಬಹಿರಂಗಪಡಿಸಿದ್ದು, ಅತ್ಯಾಧುನಿಕ ಆ್ಯಂಡ್ರಾಯ್ಡ್ ಮಾಲ್‍ವೇರ್ ಬಳಸಿ ದಕ್ಷಿಣ ಏಷ್ಯಾ ವಾಟ್ಸಪ್ ಬಳಕೆದಾರರನ್ನು ಗುರಿ ಮಾಡಿದ್ದಾಗಿ ಹೇಳಿದ್ದಾರೆ.
ಈ ಮಾಲ್‍ವೇರ್ ನಕಲಿ ಚಾಟಿಂಗ್ ಅಪ್ಲಿಕೇಶನ್ ಆಗಿದ್ದು, ಹ್ಯಾಕರ್‍ಗಳು ಇದನ್ನು ವಾಟ್ಸಪ್ ಮೂಲಕ ಪಸರಿಸುತ್ತಿದ್ದಾರೆ.
"ನಮ್ಮ ಆರಂಭಿಕ ತಾಂತ್ರಿಕ ವಿಶ್ಲೇಷಣೆಯಿಂದ, ಎಪಿಟಿ ಬಹಮುತ್ ಎಂಬ ಸಂಸ್ಥೆ ಈ ದಾಳಿಯ ಹಿಂದಿದೆ" ಎಂದು ಸೈಫರ್ಮಾ ಹೇಳಿದೆ. ಈ ಹಿಂದೆ ಗೂಗಲ್‍ಪ್ಲೇ ಸ್ಟೋರ್ ಮೂಲಕ ವಿತರಣೆಯಾದ 'ಡೂನಾಟ್' ಹೆಸರಿನ ಮಾಲ್‍ವೇರ್‍ನ ಲಕ್ಷಣಗಳನ್ನು ಈ ಮಾಲ್‍ವೇರ್ ಹೊಂದಿದೆ. ಆದಾಗ್ಯೂ ಹೆಚ್ಚಿನ ಅನುಮತಿಗಳನ್ನು ಕೇಳುವುದರಿಂದ ಈ ಹೊಸ ಮಾಲ್‍ವೇರ್ ಹೆಚ್ಚು ಅಪಾಯಕಾರಿ ಎಂದು ಸ್ಪಷ್ಟಪಡಿಸಿದೆ.
ಈ ಆ್ಯಪ್ ಹೆಚ್ಚಿನ ಸ್ಪೈವೇರ್ ಕಾರ್ಯಗಳನ್ನು ಮಾಡಲು ಶಕ್ತವಾಗಿದೆ. ಇದು ಕವರ್‍ಲಮ್‍ನ ಪ್ರಬೇಧ ಎಂದು ಶಂಕಿಸಲಾಗಿದ್ದು, ಇದು ಟೆಲಿಗ್ರಾಂ, ಸಿಗ್ನಲ್, ವಾಟ್ಸ್ ಆ್ಯಪ್, ವೈಬರ್ ಮತ್ತು ಫೇಸ್‍ಬುಕ್ ಮೆಸೆಂಜರ್‍ನಂಥ ಆ್ಯಪ್‍ಗಳಿಂದ ಮಾಹಿತಿ ಕದಿಯುವ ಸಾಮಥ್ರ್ಯ ಹೊಂದಿದೆ.