2022- 23ರಲ್ಲಿ ಕಂಪೆನಿ ತೊರೆದ 41,000 ಕ್ಕೂ ಅಧಿಕ ರಿಯಲನ್ಸ್ ಜಿಯೊ ಉದ್ಯೋಗಿಗಳು
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ | Photo: PTI
ಹೊಸದಿಲ್ಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್)ನ ರೀಟೇಲ್ ಮತ್ತು ಟೆಲಿಕಾಂ ವಿಭಾಗಗಳಲ್ಲಿ ಬಹಳಷ್ಟು ಮಂದಿ ಉದ್ಯೋಗಿಗಳು ಕಂಪನಿ ತೊರೆಯುತ್ತಿದ್ದಾರೆ. 2022-23ರಲ್ಲಿ ಈ ಸಂಖ್ಯೆ ಹೆಚ್ಚುತ್ತಲೇ ಇರುವುದು ಕಂಡುಬಂದಿದೆ. ಜಿಯೊ ಕಂಪನಿಯಿಂದ 41 ಸಾವಿರ ಉದ್ಯೋಗಿಗಳು ಮತ್ತು ರಿಲಯನ್ಸ್ ರಿಟೇಲ್ನಿಂದ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಹೊರ ನಡೆದಿದ್ದಾರೆ. ಈ ಉದ್ಯಮ ಸಮೂಹದ ವಾರ್ಷಿಕ ವರದಿಯ ಪ್ರಕಾರ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೊರ ಹೋಗುವವರ ಸಂಖ್ಯೆ ಶೇಕಡ 64.8ರಷ್ಟು ಹೆಚ್ಚಿದೆ.
Live Mint ಹಂಚಿಕೊಂಡಿರುವ ವಿವರಗಳ ಪ್ರಕಾರ, ಈ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಪ್ರಮುಖ ಕಾರಣವೆಂದರೆ ಆರ್ಐಎಲ್ ಹಲವು ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿರುವುದರಿಂದ ಉಂಟಾಗಿರುವ ಕಾರ್ಯಾಚರಣೆಯಲ್ಲಿನ ಪುನರಾವರ್ತನೆ ಹಾಗೂ ಎರಡು ಬಾರಿ ಹೆಸರು ನೋಂದಣಿಯಾಗಿರುವುದು. ಹೊಸ ಹೊಣೆಗಾರಿಕೆ ಬಯಸಿ ಕೆಲ ಉದ್ಯೋಗಿಗಳು ಕಂಪನಿಯನ್ನು ತ್ಯಜಿಸಿದ್ದರೆ, ನೇಮಕಾತಿ ಉತ್ತುಂಗದಲ್ಲಿದ್ದ ಅವಧಿಯಲ್ಲಿ ಬೇರೆ ಕಂಪನಿಗೆ ಸೇರ್ಪಡೆಯಾಗುವ ಸಲುವಾಗಿ ಹೊರ ನಡೆದಿದ್ದಾರೆ.
ಒಟ್ಟಾರೆ 2023ನೇ ಹಣಕಾಸು ವರ್ಷದಲ್ಲಿ 1,67,391 ಆರ್ಐಎಲ್ ಉದ್ಯೋಗಿಗಳು ಕಂಪನಿ ತೊರೆಯಲು ನಿರ್ಧರಿಸಿದ್ದಾರೆ. ಇದರಲ್ಲಿ 1,19,229 ಮಂದಿ ರಿಟೇಲ್ ವಿಭಾಗದಿಂದ ಹಾಗೂ 41,818 ಮಂದಿ ಜಿಯೋದಿಂದ ನಿರ್ಗಮಿಸಿದ್ದಾರೆ. ಈ ಪೈಕಿ ಬಹುತೇಕ ಮಂದಿ ಕಿರಿಯ ಅಥವಾ ಮಧ್ಯಮ ವ್ಯವಸ್ಥಾಪನಾ ಹಂತದವರು ಎಂದು ಉನ್ನತ ಮೂಲಗಳು ಹೇಳಿವೆ.
ಒಂದೆಡೆ ಸಾಕಷ್ಟು ಉದ್ಯೋಗಿಗಳು ಹೊರಹೋಗುತ್ತಿದ್ದರೆ ಈ ಅವಧಿಯಲ್ಲಿ ಕಂಪನಿ 2,62,558 ಮಂದಿಯನ್ನು ಹೊಸದಾಗಿ ತನ್ನ ವಿವಿಧ ವ್ಯವಹಾರಗಳಿಗೆ ನೇಮಿಸಿಕೊಂಡಿದೆ. ಮಿತವ್ಯಯ ಸಾಧಿಸುವ ಮತ್ತು ನಿರೀಕ್ಷಿತ ಕಾರ್ಯಕ್ಷಮತೆ ಇಲ್ಲದ ಉದ್ಯೋಗಿಗಳನ್ನು ಹೊರ ಕಳುಹಿಸುವ ಮೂಲಕ ಮಿತ ವೆಚ್ಚ ಸಾಧಿಸುವ ಆರ್ಐಎಲ್ ಕಾರ್ಯತಂತ್ರದ ಭಾಗ ಇದು ಎಂದು ಈ ವರದಿ ಹೇಳಿದೆ.
ಕಳೆದ ಮೇ ತಿಂಗಳಲ್ಲಿ ಆರ್ಐಎಲ್ನ ಇ-ಕಾಮರ್ಸ್ ಪ್ಲಾಟ್ಫಾರಂ ಜಿಯೊಮಾರ್ಟ್ ವೆಚ್ಚ ಕಡಿತಗೊಳಿಸುವ ಕ್ರಮವಾಗಿ 1000 ಉದ್ಯೋಗಿಗಳನ್ನು ಮನೆಗೆ ಕಳುಹಿಸಿತ್ತು.