‘ಸೆಂಟರ್ ಫಾರ್ ಕೌಂಟರಿಂಗ್ ಡಿಜಿಟಲ್ ಹೇಟ್’ ವಿರುದ್ಧ ನ್ಯಾಯಾಲಯದ ಕದ ತಟ್ಟಿದ ಟ್ವಿಟರ್ ಮಾತೃ ಸಂಸ್ಥೆ
Screengrab | twitter
ಹೊಸದಿಲ್ಲಿ: ಟ್ವಿಟರ್ ಮಾತೃ ಸಂಸ್ಥೆಯಾಗಿರುವ X ಕಾರ್ಪ್, ಲಾಭೋದ್ದೇಶರಹಿತ ಸಂಸ್ಥೆಯಾಗಿರುವ ಸೆಂಟರ್ ಫಾರ್ ಕೌಂಟರಿಂಗ್ ಡಿಜಿಟಲ್ ಹೇಟ್ ವಿರುದ್ಧ ನ್ಯಾಯಾಲಯದ ಕದ ತಟ್ಟಿದೆ ಹಾಗೂ ಈ ಸಂಸ್ಥೆಯು ಉದ್ದೇಶಪೂರ್ವಕವಾಗಿ ಟ್ವಿಟರ್ಗೆ ಹಾನಿಯೆಸಗುತ್ತಿದೆ ಎಂದು ಆರೋಪಿಸಿದೆ.
ಕಾನೂನು ಮೊರೆ ಹೋಗಿರುವ ಕುರಿತು X ಕಾರ್ಪ್ ತನ್ನ ಬ್ಲಾಗ್ ಪೋಸ್ಟ್ ಒಂದರಲ್ಲಿ ಬರೆದುಕೊಂಡಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ ಎಂದು ಸೆಂಟರ್ ಫಾರ್ ಕೌಂಟರಿಂಗ್ ಡಿಜಿಟಲ್ ಹೇಟ್ ವಿರುದ್ಧ ಆರೋಪಿಸಲಾಗಿದೆ. ಈ ಪ್ರಕರಣವನ್ನು ಕ್ಯಾಲಿಫೋರ್ನಿಯಾದ ಉತ್ತರ ಜಿಲ್ಲೆಯ ಫೆಡರಲ್ ಕೋರ್ಟಿನಲ್ಲಿ ದಾಖಲಿಸಲಾಗಿದೆ.
ಟ್ವಿಟರ್ ಮತ್ತದರ ಡಿಜಿಟಲ್ ಜಾಹೀರಾತು ವ್ಯವಹಾರಕ್ಕೆ ಹಾನಿಯುಂಟು ಮಾಡುವ ಉದ್ದೇಶದೊಂದಿಗೆ ಆಧಾರರಹಿತ ಆರೋಪಗಳನ್ನು ಸಂಸ್ಥೆ ಮಾಡಿದೆ ಎಂದು ಆ ಸಂಸ್ಥೆಗೆ ಕಾರ್ಪ್ ಜುಲೈ 20ರಂದು ಬರೆದ ಪತ್ರದಲ್ಲಿ ಹೇಳಲಾಗಿದೆ.
ಟ್ವಿಟರ್ನಲ್ಲಿ ದ್ವೇಷದ ಭಾಷಣಗಳನ್ನು ಪರಾಮರ್ಶಿಸಿ ಸಂಸ್ಥೆಯು ಜೂನ್ ತಿಂಗಳಿನಲ್ಲಿ ಎಂಟು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿತ್ತು. “ದ್ವೇಷದ” ಪೋಸ್ಟ್ಗಳನ್ನು ಮಾಡಿರುವ ಹೊರತಾಗಿಯೂ 100 ಟ್ವಿಟರ್ ಬ್ಲೂ ಖಾತೆಗಳ ಪೈಕಿ ಶೇ99ರಷ್ಟು ಖಾತೆಗಳ ಮೇಲೆ ಕ್ರಮಕೈಗೊಂಡಿಲ್ಲ ಎಂದು ಒಂದು ವರದಿ ಹೇಳಿತ್ತು.
ಆದರೆ ಇದು ಸುಳ್ಳು, ತಪ್ಪು ದಾರಿಗೆಳೆಯುವಂತಹ ವರದಿ ಹಾಗೂ ಸರಿಯಾದ ಅಧ್ಯಯನ ವಿಧಾನಗಳನ್ನು ಅಳವಡಿಸಿಕೊಳ್ಳಲಾಗಿಲ್ಲ ಎಂದು ಟ್ವಿಟರ್ ಹೇಳಿತ್ತು.
ಈ ಸಂಸ್ಥೆಗೆ ಟ್ವಿಟರ್ನ ಎದುರಾಳಿಗಳು ಅಥವಾ ದುರುದ್ದೇಶ ಹೊಂದಿದ ವಿದೇಶಿ ಸರ್ಕಾರಗಳು ಅನುದಾನ ಒದಗಿಸುತ್ತಿವೆ ಎಂದು ಟ್ವಿಟರ್ ಹೇಳಿದೆ.
ಟ್ವಿಟ್ಟರ್ ಮಾತೃ ಸಂಸ್ಥೆಯ ಕ್ರಮವನ್ನು ಟೀಕಿಸಿರುವ ಸೆಂಟರ್ ಫಾರ್ ಕೌಂಟರಿಂಗ್ ಡಿಜಿಟಲ್ ಹೇಟ್ ಇದರ ಅಧಿಕಾರಿ ಇಮ್ರಾನ್ ಅಹ್ಮದ್ “ಪ್ರಾಮಾಣಿಕ ಟೀಕೆ ಮತ್ತು ಸ್ವತಂತ್ರ ಅಧ್ಯಯನವನ್ನು ಹತ್ತಿಕ್ಕುವ ಯತ್ನವನ್ನು ಎಲಾನ್ ಮಸ್ಕ್ ತಮ್ಮ ಕ್ರಮಗಳ ಮೂಲಕ ಮಾಡುತ್ತಿದ್ದಾರೆ,” ಎಂದು ಆರೋಪಿಸಿದ್ದಾರೆ.