ತೆಲಂಗಾಣ: ರಸ್ತೆ ವಿಭಜಕಕ್ಕೆ ಕಾರು ಢಿಕ್ಕಿ; ಬಿಆರ್ ಎಸ್ ಶಾಸಕಿ ಮೃತ್ಯು
Photo: twitter.com/NDtv/TheSouthfirst
ಹೊಸದಿಲ್ಲಿ: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಭಾರತ್ ರಾಷ್ಟ್ರ ಸಮಿತಿ (ಬಿಆರ್ ಎಸ್) ಶಾಸಕಿ ಜಿ. ಲಾಸ್ಯ ನಂದಿತಾ(37) ಅವರು ಮೃತಪಟ್ಟ ಘಟನೆ ಹೈದರಾಬಾದ್ ಹೊರವಲಯದಲ್ಲಿರುವ ತೆಲಂಗಾಣದ ಸಂಗೆರಡ್ಡಿ ಜಿಲ್ಲೆಯ ಪಟಂಚೆರು ಹೊರವಲಯದ ರಸ್ತೆಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ.
ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನಂದಿತಾ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ವಾಹನದ ಚಾಲಕನಿಗೆ ಕೂಡ ಗಂಭೀರ ಗಾಯಗಳುಂಟಾಗಿದೆ ಎಂದು ತಿಳಿದು ಬಂದಿದೆ.
ಹತ್ತು ದಿನಗಳ ಹಿಂದೆಯಷ್ಟೇ ನರ್ಕಟಪಳ್ಳಿ ಎಂಬಲ್ಲಿ ನಡೆದ ಅಪಘಾತದಲ್ಲಿ ಶಾಸಕಿ ಪ್ರಾಣಾಪಾಯದಿಂದ ಪಾರಾಗಿದ್ದರು. ಫೆಬ್ರವರಿ 13 ರಂದು ನಂದಿತಾ ಅವರು ಮುಖ್ಯಮಂತ್ರಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ನಲಗೊಂಡಾಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿ ಆಕೆಯ ಹೋಂಗಾರ್ಡ್ ಮೃತಪಟ್ಟಿದ್ದರು.
ನಂದಿತಾ ಅವರು ಮೊದಲ ಬಾರಿ ಶಾಸಕಿಯಾಗಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಶಾಸಕಿಯಾಗಿ ಆಯ್ಕೆಯಾಗುವ ಮುನ್ನ ನಂದಿತಾ ಅವರು ಕಾವಡಿಗುಡ ಕಾರ್ಪೊರೇಟರ್ ಆಗಿದ್ದರು.