ತೆಲಂಗಾಣ ಚುನಾವಣೆ: ಕಾಂಗ್ರೆಸ್ 2ನೇ ಪಟ್ಟಿಯಲ್ಲಿ ಕಾಣಿಸಿಕೊಂಡ ಅಝರುದ್ದೀನ್
Photo: twitter.com/azharflicks
ಹೈದರಾಬಾದ್: ಭಾರತದ ಮಾಜಿ ಕ್ರಿಕೆಟ್ ತಾರೆ ಮುಹಮ್ಮದ್ ಅಝರುದ್ದೀನ್, ತೆಲಂಗಾಣ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ನವೆಂಬರ್ 30ರಂದು ನಡೆಯುವ ಚುನಾವಣೆಗೆ ಪಕ್ಷದಿಂದ ಸ್ಪರ್ಧಿಸುವ 45 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಶುಕ್ರವಾರ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಕ್ರಾಂತಿಗೀತೆಗಳ ಖ್ಯಾತಿಯ ಗದ್ದರ್ ಅವರ ಪುತ್ರಿ ಜಿ.ವಿ.ವೆನ್ನೇಲಾ ಮತ್ತು ಮಾಜಿ ಸಂಸದ ಯಷ್ಕಿ ಗೌಡ, ಮೊನ್ನಮ್ ಪ್ರಭಾಕರ ಮತ್ತು ಪೊಂಗುಲೇಟಿ ಶ್ರೀನಿವಾಸ ರೆಡ್ಡಿ ಸೇರಿದ್ದಾರೆ.
ಬಿಜೆಪಿ ತೊರೆದು ಎರಡು ದಿನ ಹಿಂದಷ್ಟೇ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದ ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ ಈ ಹಿಂದೆ ಪ್ರತಿನಿಧಿಸುತ್ತಿದ್ದ ಮುನುಗೋಡೆ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ತಮ್ಮ ಶಾಸಕತ್ವಕ್ಕೆ ರಾಜೀನಾಮೆ ನೀಡಿದ್ದ ಅವರು, ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋಲು ಕಂಡಿದ್ದರು.
ಈ ಹಿಂದೆ ಉತ್ತರಪ್ರದೇಶದ ಮೊರಾದಾಬಾದ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಮುಹಮ್ಮದ್ ಅಝರುದ್ದೀನ್, ಹೈದರಾಬಾದ್ ನ ಪಾಶ್ ಜ್ಯುಬಿಲಿ ಹಿಲಕ್ಸ್ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಮಾಜಿ ಸಂಸದರಾದ ಮಧು ಯಸ್ಖಿಗೌಡ್ ಮತ್ತು ಪೊನ್ನಂ ಪ್ರಭಾಕರ್ ಅವರು ಕ್ರಮವಾಗಿ ಹೈದರಾಬಾದ್ ನ ಎಲ್.ಬಿ.ನಗರ ಮತ್ತು ಸಿದ್ದಿಪೇಟೆ ಜಿಲ್ಲೆಯ ಹುಸ್ನಾಬಾದ್ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ. ಗದ್ದರ್ ಪುತ್ರಿ ವೆನ್ನೇಲಾ ಇದೇ ಮೊದಲ ಬಾರಿಗೆ ಸಿಕಂದರಾಬಾದ್ ಕಂಟೋನ್ಮೆಂಟ್ ಮೀಸಲು ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ.
ಆಡಳಿತಾರೂಢ ಬಿಆರ್ ಎಸ್ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಸಚಿವ ತುಮ್ಮಲ ನಾಗೇಶ್ವರ ರಾವ್, ಖಮ್ಮಮ್ ಕ್ಷೇತ್ರದಿಂದ, ಮಾಜಿ ಸಂಸದ ಪೊಂಗುಲೇಟಿ ಶ್ರೀನಿವಾಸರೆಡ್ಡಿ, ಪಲೈರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷ 100 ಮಂದಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಪಡಿಸಿದೆ.