ಎನ್ ಡಿಎ, ಇಂಡಿಯಾ ಮೈತ್ರಿಕೂಟದ ಹೆಡೆಮುರಿ ಕಟ್ಟಿದ ನಾಲ್ಕು ವರ್ಷ ಹಳೆಯ ಪಕ್ಷ!
ಜೋರಾಂ ಪೀಪಲ್ಸ್ ಪಾರ್ಟಿ ಮುಖ್ಯಸ್ಥ ಲಾಲ್ಡುಹೋಮಾ (PTI)
ಗುವಾಹತಿ: ಮಿಜೋರಾಂ ನ 8.5 ಲಕ್ಷ ಪ್ರಬಲ ಮತದಾರರು ರಾಜ್ಯ ಸ್ಥಾಪನೆಯಾದ ಬಳಿಕ ಇದುವರೆಗೆ ಅಧಿಕಾರದಲ್ಲಿದ್ದ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ ಕಾಂಗ್ರೆಸ್ ಹಾಗೂ ಎನ್ ಡಿಎ ಮೈತ್ರಿಕೂಟಕ್ಕೆ ನಿರ್ಗಮನದ ಹಾದಿ ತೋರಿಸಿದ್ದಾರೆ. 40 ಸದಸ್ಯ ಬಲದ ವಿಧಾನಸಭೆಯಲ್ಲಿ ಕೇವಲ ನಾಲ್ಕು ವರ್ಷ ಹಳೆಯ ಪಕ್ಷವಾದ ಝೋರಂ ಪೀಪಲ್ಸ್ ಮೂವ್ ಮೆಂಟ್ ಗೆ ಮೂರನೇ ಎರಡರಷ್ಟು ಬಹುಮತ ನೀಡಿ ಅಚ್ಚರಿ ಮೂಡಿಸಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಲಾಲ್ಡ್ ಹೋಮಾ ಅವರ ಈ ನೂತನ ಪಕ್ಷ ನಾಲ್ಕು ವರ್ಷದ ಹಿಂದೆ ನೋಂದಾಯಿತ ರಾಜಕೀಯ ಪಕ್ಷವೂ ಆಗಿರಲಿಲ್ಲ ಎನ್ನುವುದು ಗಮನಾರ್ಹ.
ಪಕ್ಷದ ನೇತಾರ ಲಾಲ್ಡುಹೋಮಾ ಸೆರ್ಚಿಪ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರೆ, ಮುಖ್ಯಮಂತ್ರಿ ಝೋರಂಥಾಂಗ ಐಜ್ವಾಲ್ ಪೂರ್ವ-1 ಕ್ಷೇತ್ರದಿಂದ ಝೆಡ್ ಪಿಎಂನ ಲಾಲ್ತನ್ ಸಾಂಗ ವಿರುದ್ಧ 2011 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಜೋರಂಥಾಂಗಾ ಅವರಿಗೆ ಮುನ್ನ ಕಾಂಗ್ರೆಸ್ ನ ಲಾಲ್ ಥಾನಾವ್ಲಾ ಮಾತ್ರ 36 ವರ್ಷ ಕಾಲ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು.
ಎಂಎನ್ಎಫ್ ಪದಚ್ಯುತಿಯೊಂದಿಗೆ ಝೋರಾಂಥಾಂಗಾ ಯುಗ ಅಂತ್ಯವಾಗಿದ್ದು, ಕಾಂಗ್ರೆಸ್ ಏಕೈಕ ಸ್ಥಾನ ಗೆಲ್ಲಲು ಸಾಧ್ಯವಾಗಿದ್ದು, ಎರಡು ಸ್ಥಾನಗಳನ್ನು ಗೆದ್ದ ಬಿಜೆಪಿ ಬಳಿಕ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಎಂಎನ್ಎಫ್ 10 ಸ್ಥಾನಗಳಿಗೆ ತೃಪ್ತಿಪಟ್ಟಿದ್ದು, 2018ರಲ್ಲಿ ಗಳಿಸಿದ ಸ್ಥಾನಗಳ ಪೈಕಿ 17ನ್ನು ಕಳೆದುಕೊಂಡಿದೆ. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನಾಲ್ಕು ಸ್ಥಾನ ಗೆದ್ದಿತ್ತು.
ಗೆಲುವು ಸಾಧಿಸಿದ ತಕ್ಷಣ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಆಕಾಂಕ್ಷಿ ಲಾಲ್ಡುಹೋಮಾ, ತಮ್ಮ ಪಕ್ಷ ಎನ್ ಡಿಎ ಅಥವಾ ಇಂಡಿಯಾ ಮೈತ್ರಿಕೂಟದ ಪಕ್ಷವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ದೆಹಲಿಯಿಂದ ನಮ್ಮ ಮೇಲೆ ಸವಾರಿ ಮಾಡುವುದು ಬೇಕಿಲ್ಲ. ಕೇಂದ್ರ ಸರ್ಕಾರದ ಜತೆಗಿನ ನಮ್ಮ ಸಂಬಂಧ ವಿಷಯಾಧರಿತವಾಗಿರುತ್ತದೆ ಎಂದು ಹೇಳಿದ್ದಾರೆ.