ಭಾರತದ ಮೂರು ಶ್ರೀಮಂತ ಕುಟುಂಬಗಳ ಒಟ್ಟು ಆಸ್ತಿ ಮೌಲ್ಯ ಸಿಂಗಾಪುರದ ಜಿಡಿಪಿಯಷ್ಟು!
ಮುಕೇಶ್ ಅಂಬಾನಿ (PTI) | ಕುಮಾರ ಮಂಗಲಂ ಬಿರ್ಲಾ (wiki/Kumar_Mangalam_Birla)
ಮುಂಬೈ: ಭಾರತದ ಮೂರು ಅತ್ಯಂತ ಶ್ರೀಮಂತ ಕುಟುಂಬಗಳ ಒಟ್ಟು ಆಸ್ತಿಯ ಮೌಲ್ಯ ಸುಮಾರು 460 ಶತಕೋಟಿ ಡಾಲರ್ ಆಗಿದ್ದು, ಒಟ್ಟು ಸೇರಿಸಿದರೆ ಸಿಂಗಾಪುರ ಆರ್ಥಿಕತೆಯ ವಾರ್ಷಿಕ ಆದಾಯ (ಜಿಡಿಪಿ)ಯಷ್ಟಾಗುತ್ತದೆ!
ಬಕ್ರ್ಲೇಸ್ ಪ್ರೈವೇಟ್ ಕ್ಲೈಂಟ್ಸ್ ಹರೂನ್ ಇಂಡಿಯಾದ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಅಂಬಾನಿ ಕುಟುಂಬದ ಆಸ್ತಿ ಮೌಲ್ಯ 25.8 ಲಕ್ಷ ಕೋಟಿ ರೂಪಾಯಿ (309 ಶತಕೋಟಿ ಡಾಲರ್). ಒಟ್ಟು 7.1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ನೀರಜ್ ಬಜಾಜ್ ಕುಟುಂಬ ಎರಡನೇ ಸ್ಥಾನದಲ್ಲಿದ್ದರೆ, ಕುಮಾರ ಮಂಗಲಮ್ ಬಿರ್ಲಾ ಒಡೆತನದ ಬಿರ್ಲಾ ಕುಟುಂಬ 5.4 ಲಕ್ಷ ಕೋಟಿ ರೂಪಾಯಿಯೊಂದಿಗೆ ಮೂರನೇ ಸ್ಥಾನದಲ್ಲಿದೆ.
ಅದಾನಿ ಕುಟುಂಬ ಮೊದಲ ಪೀಳಿಗೆಯ ಉದ್ಯಮಿಗಳಾಗಿರುವುದರಿಂದ ಈ ಪಟ್ಟಿಯಲ್ಲಿ ಅವರನ್ನು ಸೇರಿಸಿಲ್ಲ. ಮೊದಲ ಪೀಳಿಗೆಯ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಅದಾನಿ ಸಮೂಹ 15.4 ಲಕ್ಷ ಕೋಟಿ ರೂಪಾಯಿಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಒಡೆತನದ ಪೂನಾವಾಲಾ ಕುಟುಂಬ 2.4 ಲಕ್ಷ ಕೋಟಿ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿದೆ. ಡೀವೀಸ್ ಲ್ಯಾಬೋರೇಟರಿ ನಿರ್ವಹಿಸುತ್ತಿರುವ ಡಿವಿ ಕುಟುಂಬ 91200 ಕೋಟಿ ರೂಪಾಯಿಯೊಂದಿಗೆ ಮೂರನೇ ಸ್ಥಾನದಲ್ಲಿದೆ.
ಉದ್ಯಮ ಕುಟುಂಬಗಳು ಒಟ್ಟು 1.3 ಟ್ರಿಲಿಯನ್ ಡಾಲರ್ ಮೌಲ್ಯದ ಆಸ್ತಿಗಳನ್ನು ಹೊಂದಿದ್ದು, ಇದು ಸ್ವಿಡ್ಜರ್ಲೆಂಡ್ ಮತ್ತು ಯುಎಇಯ ಒಟ್ಟು ಜಿಡಿಪಿಗಿಂತ ಅಧಿಕ. ಈ ಪಟ್ಟಿಯಲ್ಲಿ ಅರ್ಹತೆ ಪಡೆಯಲು ಆ ಕುಂಟುಬ ಕನಿಷ್ಠ 2700 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರಬೇಕು. ಒಟ್ಟು 124 ಕುಟುಂಬಗಳು ಈ ಪಟ್ಟಿಯಲ್ಲಿದ್ದು, ಕನಿಷ್ಠ 100 ಕೋಟಿ ಡಾಲರ್ ಸಂಪಸತ್ತು ಹೊಂದಿವೆ.