ಒಲಿದ ಸ್ವರಗಳು
ತುಮಕೂರು ಜಿಲ್ಲೆಯ ಪಾವಗಡದ ಕೃಷಿ ಕುಟುಂಬದ ಲುತ್ಫುಲ್ಲಾ ಕೆ. ಅತೀಕ್ 1991ರಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಐಎಎಸ್ಗೆ ಆಯ್ಕೆಯಾದವರು. ಮಂಗಳೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದ ಇವರು ಮಂಗಳೂರಿನ ಅಳಿಯನೂ ಹೌದು. ಕರ್ತವ್ಯ ನಿರ್ವಹಿಸಿದ ಎಲ್ಲೆಡೆ ಜನಪರ ಕಳಕಳಿಯ ದಕ್ಷ ಅಧಿಕಾರಿ ಎಂದು ಮನ್ನಣೆ ಗಳಿಸಿದವರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಧಾನ ಕಾರ್ಯದರ್ಶಿಯಾಗಿ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಜಂಟಿ ಕಾರ್ಯದರ್ಶಿಯಾಗಿ, ವಿಶ್ವ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರ ಹಿರಿಯ ಸಲಹೆಗಾರನಾಗಿ ಹಲವು ಪ್ರತಿಷ್ಠಿತ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ನ್ಯಾಯ ಒದಗಿಸಿದವರು. ಸದ್ಯ ರಾಜ್ಯದ ಮುಖ್ಯಮಂತ್ರಿಗಳ ಹಾಗೂ ವಿತ್ತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ. ಉತ್ತಮ ಕನ್ನಡ, ಉರ್ದು ಲೇಖಕರೂ ಆಗಿರುವ ಅತೀಕ್ ಇಲ್ಲಿ ಖ್ಯಾತ ಕವಿ ಫೈಝ್ ಅಹ್ಮದ್ ಫೈಝ್ ಅವರ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕಾವ್ಯದ ವಸ್ತು
ಉರಿದು ನಲುಗಿದ ಸಂಜೆ ಆರುತಿದೆ
ಚಂದ್ರನ ಕೊಳದಲಿ ತೊಳೆದು ಈಗ ಏಳುವುದು ರಾತ್ರಿ
ಆಸೆ ತುಂಬಿದ ನಯನಗಳ ಮಾತು ಕೇಳಲಾಗುವುದು
ಬಯಕೆ ತುಂಬಿದ ಈ ಕೈಗಳ ಮಿಲನ
ಆಗುವುದು ಅವಳ ಕೈಗಳೊಂದಿಗೆ
ಚೆಲುವೆಯ ಸೆರಗೊ, ಕೆನ್ನೆಗಳೊ, ಉಡುಪೊ,
ಯಾವುದು ಪ್ರಕೃತಿಯ ವರ್ಣರಂಜನೆಯ ಗುಟ್ಟು?
ಈಗಲೂ ಉರಿಯುತ್ತದೆಯೊ ಆ ದೀಪ
ಅವಳ ಕೂದಲ ದಟ್ಟ ನೆರಳಲಿ?
ಇಂದು ಪುನಃ ಹೃದಯ ರಂಜಿಸುವ ಚೆಲುವಿನ ಉತ್ಸವ
ಅವೇ ಸ್ವಪ್ನಾವಸ್ಥ ಕಣ್ಣುಗಳು, ಅದೇ ಕಣ್ಕಪ್ಪಿನ ಗೆರೆ
ಕೆನ್ನೆಯ ಬಣ್ಣದಲಿ ಅದೇ ಗಂಧದ ಪೊರೆ
ಚಂದನದ ಕೈಗಳ ಮೇಲೆ ಕೆಂಪು ಮೆಹಂದಿಯ ಬರಹ
ನನ್ನ ಚಿಂತನೆಗಳ, ಕಾವ್ಯದ ಪ್ರಪಂಚವೇ ಇದು
ಪ್ರಬಂಧದ ಜೀವವಿದು ಅರ್ಥದ ಸಾಕ್ಷಿ ಇದು
ಇಂದಿನವರೆಗೆ ಕಪ್ಪು ಕೆಂಪು ಶತಮಾನಗಳ ನೆರಳಲಿ
ಆದಮ-ಹವ್ವಾರ* ಮಕ್ಕಳ ಮೇಲೆ ಏನು ಜರುಗಿದೆ?
ಸಾವು ಬದುಕುಗಳ ನಿತ್ಯದ ಸಾಲುಗಾರಿಕೆಯಲ್ಲಿ
ನಮ್ಮ ಮೇಲೇನು ಜರುಗುವುದು?
ಪೂರ್ವಜರ ಮೇಲೇನು ಜರುಗಿದೆ?
ಈ ಹೊಳಪಿನ ನಗರಗಳ ಅಪಾರ ಜನಸಮೂಹ
ಬದುಕುವುದೇಕೆ ಕೇವಲ ಸಾಯುವ ನಿರೀಕ್ಷೆಯಲಿ?
ಚೆಲುವು ತುಳುಕುವ ಯುವತಿಯ ಮೈಯಂತೆ ಹೊಲಗಳು
ಬೆಳೆಯುತ್ತದೇಕೆ ಕೇವಲ ಹಸಿವು ಇವುಗಳಲಿ?
ಪ್ರತಿಯೊಂದು ದಿಕ್ಕಿನಲಿ ಮಾಟದ ಈ ಬಲಿಷ್ಠ ಗೋಡೆಗಳು
ಇವುಗಳಲಿ ಉರಿದು ಆರಿವೆ ಸಾವಿರಾರು ಯೌವನದ ದೀಪಗಳು
ಈ ಹೆಜ್ಜೆ ಹೆಜ್ಜೆಗೂ ಆ ಕನಸುಗಳ ಕಗ್ಗೊಲೆಯ ಬೀಡುಗಳು
ಇವುಗಳ ಭೀಕರತೆಯಿಂದ ಉರಿದಿವೆ ಸಾವಿರಾರು ಮನಸುಗಳು
ಈ ವಿಷಯಗಳೂ ಇವೆ, ಇಂತಹ ಅನೇಕ ವಸ್ತುಗಳಿವೆ
ಆದರೆ ಈ ತುಂಟಿಯ ಮೆಲ್ಲನೆ ತೆರೆಯುವ ತುಟಿಗಳು
ಅವಳ ಶರೀರದ ಹೃದಯ ಮೋಹಿಸುವ ತಿರುವುಗಳು
ನೀವೇ ಹೇಳಿ ಈ ರೀತಿಯ ಮಾಟಗಳೂ ಇವೆಯೆ?
ನನ್ನ ಕಾವ್ಯದ ವಸ್ತು ಇವುಗಳ ಹೊರತು ಬೇರಿಲ್ಲ
ಕವಿಯ ಮನಸ್ಸಿನ ನಾಡು ಇವುಗಳ ಹೊರತು ಬೇರಿಲ್ಲ.
ವಿಶ್ವದ ಮೊದಲನೆ ಮಾನವರು: ಆದಮ-ಪುರುಷರು, ಹವ್ವಾ-ಸ್ತ್ರೀ
೦೦೦೦೦೦೦೦೦೦
ನನ್ನ ಜೊತೆಗಾರ ನನ್ನ ಗೆಳೆಯನೆ
ನನಗೆ ಖಾತ್ರಿ ಇದ್ದರೆ ನನ್ನ ಜೊತೆಗಾರನೆ ನನ್ನ ಗೆಳೆಯನೆ
ನಿನ್ನ ಹೃದಯದ ದಣಿವು
ನಿನ್ನ ಕಣ್ಣುಗಳ ನಿರಾಶೆ
ನಿನ್ನ ಎದೆಯ ಉರಿ
ನನ್ನ ಪ್ರೀತಿಯಿಂದ ಅಳಿಯುವ ಖಾತ್ರಿ ಇದ್ದರೆ
ನನ್ನ ಸಮಾಧಾನದ ಮಾತುಗಳು
ನಿನ್ನ ಔಷಧಿ ಆಗುವುದಾದರೆ
ಕತ್ತಲು ಕವಿದ ನಿನ್ನ ಮನಸ್ಸು ಹೊಳೆಯುವುದಾದರೆ
ನಿನ್ನ ಹಣೆಯ ಅಪಮಾನದ ಗುರ್ತುಗಳು ಅಳಿಸುವುದಾದರೆ
ರೋಗಪೀಡಿತ ನಿನ್ನ ಯವ್ವನ ಗುಣವಾಗುವುದಾದರೆ
ಇದರ ಖಾತ್ರಿ ಇದ್ದರೆ ನನ್ನ ಸಹಚರ ನನ್ನ ಗೆಳೆಯನೆ
ಹಗಲು ಇರುಳು ನಿನ್ನ ರಂಜಿಸುವೆ
ಹಾಡುವೆ ಇಂಪು ಸಿಹಿ ಹಾಡು
ಜಲಪಾತಗಳ ವಸಂತಗಳ ಬನಗಳ ಹಾಡು
ಮುಂಜಾವಿನ ಆಗಮನದ ಚಂದ್ರನ ನಕ್ಷತ್ರಗಳ ಹಾಡು
ಪ್ರೀತಿ ಸೌಂದರ್ಯದ ಕತೆಗಳು ಹೇಳುವೆ
ಹೇಗೆ ತುಂಟ ಸುಂದರಿಯರ ಮಂಜಿನ ದೇಹಗಳು
ಬಿಸಿ ಕೈಗಳಲ್ಲಿ ಕರಗುತ್ತಿವೆ
ಹೇಗೆ ಮುಖದಲ್ಲಿ ನಿಂತ ನೋವಿನ ಗುರ್ತುಗಳು
ಇದ್ದಕ್ಕಿದ್ದ ಹಾಗೆ ಬದಲಿಸುತ್ತವೆ
ಹೇಗೆ ಪ್ರಿಯತಮನ ಕೆನ್ನೆಗಳ ಪ್ರತಿಬಿಂಬ
ಮಧುರ ಮದ್ಯದಲ್ಲಿ ಘಮಘಮಿಸುತ್ತಿದೆ
ಹೇಗೆ ಗುಲಾಬಿ ಕೊಂಬೆ ಬಗ್ಗುತ್ತದೆ ಮಾಲಿಯ ಮುಂದೆ
ಹೇಗೆ ರಾತ್ರಿಯ ಸಂಭ್ರಮ ವಿಜೃಂಭಿಸುತ್ತದೋ
ಹೀಗೆ ಹಾಡುತ್ತಿರುವೆ, ನಿನಗಾಗಿ ಹಾಡುತ್ತಿರುವೆ
ಹಾಡು ಹೆಣೆಯುತ್ತಿರುವೆ, ನಿನಗಾಗಿ ಕಾಯುತ್ತಿರುವೆ
ಆದರೆ ನನ್ನ ಹಾಡು ನಿನ್ನ ನೋವಿಗೆ ಪರಿಹಾರವಲ್ಲ
ಸಹಾನುಭೂತಿ ನೀಡಬಹುದು ರಾಗ, ಶುಶ್ರೂಷೆಯಾಗುವುದಿಲ್ಲ
ಮುಲಾಮಾಗಬಹುದು ಹಾಡು, ಮದ್ದಾಗುವುದಿಲ್ಲ
ನಿನ್ನ ದುಃಖದ ಶಮನಕ್ಕೆ ಮದ್ದು
ನನ್ನ ಬಳಿ ಇಲ್ಲ, ಯಾರ ಹತ್ತಿರವೂ ಇಲ್ಲ
ಆದರೆ ಹೌದು, ಅದು ನಿನ್ನ ಬಳಿ ಇದೆ, ನಿನ್ನ ಬಳಿ ಇದೆ
ನಿನ್ನ ಬಳಿಯೇ ಇದೆ. ನಿನ್ನ ಬಳಿಯೇ ಇದೆ.
000000000
ಸೆರೆಮನೆಯ ಒಂದು ಸಂಜೆ
ಸಂಜೆಯ ತಿರುವುಮುರುವು ನಕ್ಷತ್ರಗಳ ನಡುವೆ
ಮೆಟ್ಟಲಿಳಿಯುತಿದೆ ರಾತ್ರಿ
ಹತ್ತಿರದಿಂದ ಹಾಯುತಿದೆ ತಂಗಾಳಿ
ಪ್ರೀತಿಯ ಮಾತಂತೆ
ಸೆರೆಮನೆಯ ಅಂಗಳದ ಪರದೇಶಿ ವೃಕ್ಷಗಳು
ತಲೆಬಾಗಿ ತಲ್ಲೀನವಾಗಿ
ಆಕಾಶದ ಅಂಗಿಯ ಮೇಲೆ
ಕಲಾಕೃತಿಗಳನ್ನು ಬಿಡಿಸುತ್ತಿವೆ
ಮಾಳಿಗೆಯ ಹೆಗಲ ಮೇಲೆ ಹೊಳೆಯುತ್ತಿದೆ
ಕರುಣಾಮಯ ಚಂದ್ರನ ಚೆಲುವು
ಮಣ್ಣಲಿ ಬೆರೆತಿವೆ ಇಬ್ಬನಿಯ ತೊಟ್ಟುಗಳು
ಬೆಳಕಿನಲಿ ಕರಗಿದೆ ಆಕಾಶಗಳ ನೀಲಿ
ಹಸಿರು ಸಂದಿಗಳಲಿ ನೀಲಿ ನೆರಳುಗಳು
ಬಳುಕುತಿವೆ ಹೃದಯದಲಿ ಎದ್ದ
ವಿರಹದ ನೋವಿನ ಅಲೆಗಳಂತೆ
ಹೇಳುತ್ತದೆ ಹೃದಯಲಿ ಹುದುಗಿದ ವಿಚಾರ
ಇಷ್ಟು ಸಿಹಿ ಇದೆ ಜೀವನ ಈ ಕ್ಷಣ
ಹಿಂಸೆಯ ವಿಷ ಕರಗಿಸುವರು
ಸಫಲರಾಗರು ಇಂದು ಎಂದೂ
ಮಿಲನಭವನದ ದೀಪಗಳು ಆರಿಸಿದರೇನು
ಚಂದ್ರನನು ಆರಿಸಲಿ, ನೋಡೋಣ
00000
ನಿರೀಕ್ಷೆ
ಕಾಯುತ್ತಿದ್ದೇನೆ ರಾತ್ರಿ ಹಗಲು, ನೀ ಬರುವುದಿಲ್ಲ
ವಸಂತದ ನಿರೀಕ್ಷೆಯೇ ಈಗಲೂ ಬದುಕಿನ ಗುರಿಯಾಗಿದೆ
ನನ್ನ ಕಲ್ಪನೆಗಳ ಜಗತ್ತು ಈಗಲೂ ದುಃಖಿತವಾಗಿದೆ.
ನನ್ನ ನೋವಿನ ಹೊಣೆ ಹೊತ್ತ ನಿನ್ನ ಬಯಕೆ
ಈಗಲೂ ನೆಲೆಸುತ್ತಿದೆ ನನ್ನ ಏಕಾಂತದಲಿ
ಉದ್ದವಾದ ರಾತ್ರಿಗಳು ಉದ್ದವಾಗಿವೆ ಈಗಲೂ
ನಿನ್ನ ದರ್ಶನ ಬಯಸುತಿವೆ ದುಃಖಿತ ಕಣ್ಣುಗಳು
ಚಲುವಿನ ವಸಂತದ ಮೇಲೆ ಹಿಂಸೆಯ
ನಿರ್ಬಂಧಗಳು ಎಂದಿನವರೆಗೆ
ಚಂಚಲ ತಾಳ್ಮೆಯ ಪರೀಕ್ಷೆ ಎಂದಿನವರೆಗೆ
ನಿನ್ನಾಣೆ ಅನುಭವಿಸಿದ್ದೇನೆ ಅಪಾರ ನೋವುಗಳ
ತಾಳ್ಮೆ ಸಂಯಮದ ಜಂಬ ಸುಳ್ಳಾಗಿದೆ ಬಾ
ಕಳವಳಿಸುತಿದೆ ಮನಸು, ಸೋತು ಹೋಗಿದ್ದೇನೆ
00000
ಯೋಚನೆ
ಏಕೆ ನಾನು ಸಂತೋಷವಾಗಿಲ್ಲ
ಏಕೆ ಸುಮ್ಮನಿರುತ್ತೇನೆ
ಬಿಡಿ ನನ್ನ ಕಥೆ
ನಾ ಹೇಗಿದ್ದರೂ ಸರಿ ಇದ್ದೇನೆ
ದುಃಖಿತವಾದರೇನು ನನ್ನ ಮನಸ್ಸು
ದುಃಖಿತ ಪ್ರಪಂಚವೆಲ್ಲ
ನನ್ನದೂ ಅಲ್ಲ ನಿನ್ನದೂ ಅಲ್ಲ
ಈ ನೋವು ನಮ್ಮೆಲ್ಲರ ಆಸ್ತಿ
ನನ್ನವಳಾದರೂ ನೀನು
ಇರುವುದು ಹೀಗೆ ಜಗದ ನೋವು
ಪಾಪದ ಗಂಟು ದೌರ್ಜನ್ಯದ ಹಿಡಿತ
ಹರಿಯುವುದಿಲ್ಲ ನಾವು ನುಡಿದರೆ
ನೋವು ಸದಾ ಮಾರಕ
ನನ್ನದಿರಲಿ ಇನ್ನಾರದೋ ಇರಲಿ
ಅಳುವುದು ಗೋಳಾಡುವುದು
ಏನಿದ್ದರೂ ನಮ್ಮದೆ ಏನಿದ್ದರೂ ನಮ್ಮದೆ
ನಮ್ಮದಾಗಿಸಿಕೊಳ್ಳೋಣ ಜಗದ ನೋವನು
ನಂತರ ಹಾಕಿಕೊಳ್ಳೋಣ ಯೋಜನೆ
ನಂತರ ಸುಖದ ಕನಸು ಕಾಣೋಣ
ನನಸಾಗಿಸೋಣ ಕನಸುಗಳ
ನಿಶ್ಚಿಂತ ಶ್ರೀಮಂತರು
ಏಕೆ ಸಂತೋಷವಾಗಿರುತ್ತಾರೆ
ಹಂಚಿಕೊಳ್ಳೋಣ ಅವರ ಸುಖವನು
ಅಲ್ಲವೆ, ಅವರೂ ನಮ್ಮಂತೆ
ನಾ ಒಪ್ಪುತ್ತೇನೆ ಯುದ್ಧ ಕಠಿಣ
ಒಡೆಯುವವು ತಲೆಗಳು ಸುರಿಯುವುದು ರಕ್ತ
ಹರಿಯುವುದು ದುಃಖ ರಕ್ತದೊಂದಿಗೆ
ಇರಲಾರೆವು ನಾವು ಇರಲಾರದು ದುಃಖ
00000000
ದುಃಖಿಸದಿರು ದುಃಖಿಸದಿರು
ನೋವು ನಿಲ್ಲುವುದು, ದುಃಖಿಸದಿರು ದುಃಖಿಸದಿರು
ಗೆಳೆಯರು ಮರಳಿ ಬರುವರು, ಹೃದಯ ನಿಲ್ಲುವುದು
ದುಃಖಿಸದಿರು ದುಃಖಿಸದಿರು
ಗಾಯ ಆರುವುದು
ದುಃಖಿಸದಿರು ದುಃಖಸದಿರು
ಹಗಲು ಹೊರಬರುವುದು
ದುಃಖಿಸದಿರು ದುಃಖಸದಿರು
ಮೋಡ ತೆರೆಯುವುದು, ರಾತ್ರಿ ಉರುಳುವುದು
ದುಃಖಿಸದಿರು ದುಃಖಿಸದಿರು
ಋತು ಬದಲಿಸುವುದು
ದುಃಖಿಸದರು ದುಃಖಿಸದಿರು
00000000
ನಿನ್ನ ಸಾಗರ ಕಣ್ಣಲಿ
ಈ ಬಿಸಿಲಿನ ಅಂಚು, ಉರುಳಿದ ಸಂಜೆ
ಎರಡೂ ಕಾಲಗಳ ಮಿಲನ
ರಾತ್ರಿಯು ಅಲ್ಲ ಹಗಲೂ ಅಲ್ಲ
ಇಂದು ಅಲ್ಲ ನಾಳೆಯು ಅಲ್ಲ
ಕ್ಷಣದಲಿ ಅಮರ ಕ್ಷಣದಲ್ಲಿ ಹೊಗೆ
ಈ ಬಿಸಿಲಿನ ಅಂಚಿನಲಿ
ಒಂದೆರಡು ಕ್ಷಣ
ತುಟಿಗಳ ಕಂಪನ
ತೋಳುಗಳ ನಡುಗು
ನಮ್ಮ ಈ ಮಿಲನ, ನಿಜವಲ್ಲ ಸುಳ್ಳಲ್ಲ
ದುಃಖಿಸುವಿಯೇಕೆ ದೋಷಿಸುವಿಯೇಕೆ
ಸುಳ್ಳು ಹೇಳುವುದೇಕೆ
ನಿನ್ನ ಸಾಗರ ಕಣ್ಣಲಿ
ಈ ಸಂಜೆಯ ಸೂರ್ಯ ಮುಳುಗಿದಾಗ
ಸುಖದಿಂದ ಮಲುಗುವರು ಮನೆಮಠದವರು
ಮತ್ತು ದಾರಿಹೋಕ ತನ್ನ ಹಾದಿ ಹಿಡಿಯುವನು.