ಬ್ರಿಟನ್ ಚುನಾವಣೆ : ಫೆಲೆಸ್ತೀನ್ ಪರ ಐದು ಪಕ್ಷೇತರ ಅಭ್ಯರ್ಥಿಗಳಿಗೆ ಗೆಲುವು
PC : NDTV
ಬ್ರಿಟನ್ ಚುನಾವಣೆಯಲ್ಲಿ ಲೇಬರ್ ಪಕ್ಷದ ಮಾಜಿ ನಾಯಕ ಜೆರೆಮಿ ಕೊರ್ಬಿನ್ ಸೇರಿದಂತೆ ಫೆಲೆಸ್ತೀನ್ ಪರ ನಿಲುವಿರುವ ಐದು ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದಾರೆ. ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಹೀನಾಯವಾಗಿ ಸೋತಿದೆ. ಲೇಬರ್ ಪಕ್ಷ ಪ್ರಚಂಡ ಜಯ ದಾಖಲಿಸಿದೆ. ಪ್ರಧಾನಿ ರಿಷಿ ಸುನಾಕ್ ರಾಜೀನಾಮೆ ನೀಡಿದ್ದಾರೆ.
ಗಾಝಾ ಮೇಲಿನ ಇಸ್ರೇಲ್ನ ಆಕ್ರಮಣವು ಈ ಬಾರಿ ಯುನೈಟೆಡ್ ಕಿಂಗ್ಡಂ ಸಾರ್ವತ್ರಿಕ ಚುನಾವಣೆಯ ಪ್ರಮುಖ ವಿಷಯಗಳಲ್ಲಿ ಒಂದಾಗಿತ್ತು. ಲೀಸ್ಟರ್ ಸೌತ್ನಲ್ಲಿ ಶೌಕತ್ ಆದಮ್, ಬರ್ಮಿಂಗ್ಹ್ಯಾಮ್ ಪೆರ್ರಿ ಬಾರ್ನಲ್ಲಿ ಅಯ್ಯೂಬ್ ಖಾನ್, ಬ್ಲಾಕ್ಬರ್ನ್ನಲ್ಲಿ ಅದ್ನಾನ್ ಹುಸೇನ್ ಮತ್ತು ಡ್ಯೂಸ್ಬರಿ ಮತ್ತು ಬ್ಯಾಟ್ಲಿಯಲ್ಲಿ ಇಕ್ಬಾಲ್ ಮೊಹಮ್ಮದ್ ಗೆದ್ದ ಇತರ ನಾಲ್ಕು ಫೆಲೆಸ್ತೀನ್ ಪರ ಪಕ್ಷೇತರ ಅಭ್ಯರ್ಥಿಗಳು.
ಇದಲ್ಲದೇ ಹಲವು ಫೆಲೆಸ್ತೀನ್ ಪರ ಪಕ್ಷೇತರ ಅಭ್ಯರ್ಥಿಗಳು ಕಠಿಣ ಸ್ಪರ್ಧೆ ನೀಡಿದ್ದಾರೆ. ಇಲ್ಫೋರ್ಡ್ ನಾರ್ತ್ನ ಸ್ವತಂತ್ರ ಅಭ್ಯರ್ಥಿ ಲೀನ್ನೆ ಮುಹಮದ್ 32.2% ಮತಗಳನ್ನು ಗಳಿಸಿ ಎರಡು ಪ್ರಮುಖ ಪಕ್ಷಗಳ ಪ್ರಾಬಲ್ಯಕ್ಕೆ ಸವಾಲು ಹಾಕಿದ್ದರು. 528 ಮತಗಳ ಅಲ್ಪ ಅಂತರದಿಂದ ಅವರು ಸೋಲನುಭವಿಸಬೇಕಾಯಿತು.
ಚುನಾವಣೆಯಲ್ಲಿ ಸೋತ ಕನ್ಸರ್ವೇಟಿವ್ ಪಕ್ಷ ಮತ್ತು ಗೆದ್ದ ಲೇಬರ್ - ಎರಡೂ ಪಕ್ಷಗಳು ಗಾಝಾದಲ್ಲಿನ ಯುದ್ಧ ನಿಲ್ಲಬೇಕೆಂದು ಆಗ್ರಹಿಸಿದ್ದರು. ಹಾಗಿದ್ದೂ ತನ್ನನ್ನು ರಕ್ಷಿಸಿಕೊಳ್ಳುವ ಹಕ್ಕು ಇಸ್ರೇಲ್ಗೆ ಇದೆ ಎನ್ನುತ್ತಲೂ ಇದ್ದರು. ದೇಶಾದ್ಯಂತ ಫೆಲೆಸ್ತೀನ್ ಪರ ಮತ್ತು ಯುದ್ಧ ವಿರೋಧಿ ಮತದಾರರನ್ನು ಇದು ಕೆರಳಿಸಿತ್ತು.
ಮುಂದಿನ ಪ್ರಧಾನಿಯಾಗಲಿರುವ ಲೇಬರ್ ನಾಯಕ ಕೀರ್ ಸ್ಟಾರ್ಮರ್ ಅವರು ತಮ್ಮ ಹೋಲ್ಬೋರ್ನ್ ಮತ್ತು ಸೇಂಟ್ ಪ್ಯಾನ್ಕ್ರಾಸ್ನಲ್ಲಿನ ಮತದಾನ ಕೇಂದ್ರದಲ್ಲಿ "ಫ್ರೀ ಫೆಲೆಸ್ತೀನ್ " ಎಂಬ ಘೋಷಣೆಗಳನ್ನು ಎದುರಿಸಬೇಕಾಗಿ ಬಂದಿತ್ತು. ತಮ್ಮ ಕ್ಷೇತ್ರವನ್ನು ಗೆದ್ದ ಬಳಿಕವವೂ ಮತ ಎಣಿಕೆ ಕೇಂದ್ರದಲ್ಲಿ ಅವರು ಘೋಷಣೆಗಳನ್ನು ಎದುರಿಸಬೇಕಾಗಿ ಬಂದಿತ್ತು. ಲೇಬರ್ ಪಕ್ಷ 650 ಸಂಸದೀಯ ಸ್ಥಾನಗಳಲ್ಲಿ 410 ಸ್ಥಾನಗಳನ್ನು ಗೆಲ್ಲುವ ಮೂಲಕ ಆ ಪಕ್ಷದ ನಾಯಕ ಸ್ಟಾರ್ಮರ್ ಅವರು ಪ್ರಧಾನಿಯಾಗಲಿದ್ದಾರೆ.
ರಿಷಿ ಸುನಕ್ ನೇತೃತ್ವದ ಕನ್ಸರ್ವೇಟಿವ್ ಅಭ್ಯರ್ಥಿಗಳು ಕೇವಲ 119 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಅಲ್ಲದೆ, ಕೇಂದ್ರೀಯ ಲಿಬರಲ್ ಡೆಮಾಕ್ರಟ್ಗಳು 71 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಲೇಬರ್ ಪಕ್ಷವು ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸುವುದರಲ್ಲಿ ಯಶಸ್ವಿಯಾದರೂ, ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ನರಮೇಧದ ಬಗ್ಗೆ ಅವರ ದ್ವಂದ್ವ ನಿಲುವಿನ ಕಾರಣದಿಂದಾಗಿ ಹಲವೆಡೆ ದೊಡ್ಡ ಮಟ್ಟದ ಮತ ನಷ್ಟವನ್ನು ಅನುಭವಿಸಬೇಕಾಗಿದೆ. ಪ್ರಬಲ ಲೇಬರ್ ಹಾಗು ಕನ್ಸರ್ವೇಟಿವ್ ಗಳ ಜಿದ್ದಾಜಿದ್ದಿಯಲ್ಲೂ ಐದು ಪಕ್ಷೇತರ ಫೆಲೆಸ್ತೀನ್ ಪರ ಅಭ್ಯರ್ಥಿಗಳು ಗೆದ್ದಿದ್ದರೆ ಹಲವರು ಹಾಲಿ ಪ್ರತಿನಿಧಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಿದರು.
ಗಾಝಾವನ್ನು ಸರ್ವನಾಶ ಮಾಡಿರುವ ಇಸ್ರೇಲ್ನ ಆಕ್ರಮಣವನ್ನು ಕೀರ್ ಸ್ಟಾರ್ಮರ್ ಬೆಂಬಲಿಸಿದ್ದರು. ಜನರಿಂದ ತೀವ್ರ ಆಕ್ರೋಶ ವ್ಯಕ್ತವಾಗಿ, ಹಿನ್ನಡೆ ಎದುರಿಸಿದ ನಂತರ, ಲೇಬರ್ ಪಕ್ಷವು ತನ್ನ ನಿಲುವನ್ನು ಮರುಪರಿಶೀಲಿಸಬೇಕಾಯಿತು. ಲೇಬರ್ ನಾಯಕರಲ್ಲಿ ಹಲವರು ಸ್ಟಾರ್ಮರ್ ಇಸ್ರೇಲ್ ನ ಗಾಝಾ ಆಕ್ರಮಣವನ್ನು ಬೆಂಬಲಿಸುವುದಿಲ್ಲ ಎಂದು ಹೇಳ ಬೇಕಾಯಿತು. ಆದರೂ ಕೀರ್ ಸ್ಟಾರ್ಮರ್ ಅವರ ಈವರೆಗಿನ ರಾಜಕೀಯ ನಿಲುವುಗಳನ್ನು ನೋಡಿದರೆ ಅವರು ಇಸ್ರೇಲ್ ಬೆಂಬಲಿಗರೇ ಹೊರತು ಫೆಲೆಸ್ತೀನ್ ಹಕ್ಕುಗಳಿಗಾಗಿ ಧ್ವನಿ ಎತ್ತುವವರಲ್ಲ ಎಂಬುದು ಅವರ ವಿಶ್ಲೇಷಕರು ಹಾಗು ಟೀಕಾಕಾರರ ಸ್ಪಷ್ಟ ಅಭಿಪ್ರಾಯ.
ಅದೇನೇ ಇದ್ದರೂ, ಬ್ರಿಟಿಷ್ ಜನರಲ್ಲಿ ಹೆಚ್ಚಿನವರು ಫೆಲೆಸ್ತೀನಿಯನ್ ಜನರೊಂದಿಗೆ ಬೇಷರತ್ತಾಗಿ ನಿಲ್ಲುವ ಅಭ್ಯರ್ಥಿಗಳಿಗೆ ಮತ ಹಾಕಲು ನಿರ್ಧರಿಸಿ ಅವರ ಗೆಲುವು ಖಚಿತ ಪಡಿಸಿದರು. ಫೆಲೆಸ್ತೀನ್ ಪರ ಅಭ್ಯರ್ಥಿಗಳು ಗೆದ್ದು ಕೊಂಡ ಸೀಟುಗಳು ಲೇಬರ್ ಭದ್ರಕೋಟೆಗಳಾಗಿದ್ದವು ಎಂಬುದೂ ವಿಶೇಷ.