ಹುಬ್ಬಳ್ಳಿ: ರೈಲ್ವೆ ಅಂಡರ್ ಪಾಸ್ ಗೆ ಅಳವಡಿಸಲಾಗಿದ್ದ ಬೃಹದಾಕಾರದ ಕಬ್ಬಿಣದ ದ್ವಾರ ಧರಾಶಾಹಿ; ತಪ್ಪಿದ ಅನಾಹುತ
ಹುಬ್ಬಳ್ಳಿ: ರೈಲ್ವೆ ಕೆಳ ಸೇತುವೆ ಬಳಿ ಬೃಹತ್ ವಾಹನಗಳ ಪ್ರವೇಶ ನಿರ್ಬಂಧಿಸುವ ದೃಷ್ಟಿಯಿಂದ ಅಳವಡಿಸಲಾಗಿದ್ದ ಬೃಹದಾಕಾರದ ಕಬ್ಬಿಣದ ದ್ವಾರ ಧರಾಶಾಹಿಯಾದ ಘಟನೆ ಹುಬ್ಬಳ್ಳಿ-ಗದಗ ಎನ್ಎಚ್-63 ರಸ್ತೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಕಳೆದ ಮೂರು ತಿಂಗಳ ಹಿಂದೆಯ ಷ್ಟೇ ಈ ರೀತಿಯ ದುರ್ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಆದರೂ ರೈಲ್ವೇ ಇಲಾಖೆಯ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನ ಸಂಚಾರ, ಬಸ್, ಕಾರು, ದ್ವಿಚಕ್ರ ವಾಹನಗಳ ಓಡಾಟದ ನಡುವೆಯೇ ತುಕ್ಕು ಹಿಡಿದ ಕಬ್ಬಿಣದ ದ್ವಾರ ತನ್ನಷ್ಟಕ್ಕೆ ನೆಲಕ್ಕುರುಳುತ್ತಿರುವುದು ಹಾಗೂ ದ್ವಿಚಕ್ರ ವಾಹನ ಸವಾರನೊಬ್ಬನು ಕೂದಲೆಳೆಯ ಅಂತರದಲ್ಲಿ ಪಾರಾಗುತ್ತಿರುವುದು ಸಿ ಸಿ ಟಿವಿ ದೃಶ್ಯಗಳಲ್ಲಿ ಕಾಣಬಹುದಾಗಿದೆ.
ಅತ್ಯಂತ ಜನದಟ್ಟಣೆಯ ಪ್ರದೇಶ ಹಾಗೂ ಹುಬ್ಬಳ್ಳಿ-ಗದಗ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ನಡೆದ ಬಹುದೊಡ್ಡ ಘಟನೆಯಿಂದ ಭೀತಿಗೊಳಗಾದ ಸಾರ್ವಜನಿಕರು ಈ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ರೈಲ್ವೇ ಇಲಾಖೆಯ ಅಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.