ಮಹಾರಾಷ್ಟ್ರ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕಾರ
ಬಿಜೆಪಿ-ಶಿವಸೇನೆ ಮೈತ್ರಿ ಸರಕಾರ ಸೇರಿದ ಎನ್ಸಿಪಿ ನಾಯಕ
ಮುಂಬೈ,ಜು.2: ಮಹಾರಾಷ್ಟ್ರ ರಾಜಕೀಯದಲ್ಲಿ ರವಿವಾರ ಸಂಭವಿಸಿದ ದಿಢೀರ್ ಬೆಳವಣಿಗೆಯೊಂದರಲ್ಲಿ ಎನ್ಸಿಪಿ ನಾಯಕ ಅಜಿತ್ ಪವಾರ್ ತನ್ನ ಬೆಂಬಲಿಗ ಶಾಸಕರೊಂದಿಗೆ ಬಿಜೆಪಿ-ಶಿವಸೇನಾ ಮೈತ್ರಿಕೂಟವನ್ನು ಸೇರಿದ್ದಾರೆ. ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರ ಪಕ್ಷದ 8 ಮಂದಿ ಶಾಸಕರು ಕೂಡಾ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಹಾರಾಷ್ಟ್ರ ಸಂಪುಟದಲ್ಲಿ ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿ ಹುದ್ದೆಯನ್ನು ಬಿಜೆಪಿಯ ದೇವೇಂದ್ರ ಫಡ್ನವೀಸ್ ಜೊತೆ ಹಂಚಿಕೊಳ್ಳಲಿದ್ದಾರೆ.
ಹಿರಿಯ ನಾಯಕರಾದ ಛಗನ್ ಭುಜಬಲ್, ಧನಂಜಯ ಮುಂಢೆ ಹಾಗೂ ದಿಲೀಪ್ ವಾಲ್ಸೆ ಪಾಟೀಲ್ ಸೇರಿಂತೆ ಎನ್ಸಿಪಿಯ ಇತರ ಎಂಟು ಮಂದಿ ಶಾಸಕರು ಕೂಡಾ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ರಾಜಭವನದಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಎನ್ಸಿಪಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದ ಪ್ರಫುಲ್ ಪಟೇಲ್,ಛಗನ್ ಭುಜಬಲ್,ದಿಲೀಪ ವಾಲ್ಸೆ ಪಾಟೀಲ್,ಹಸನ್ ಮುಷ್ರಿಫ್,ರಾಮರಾಜೆ ನಿಂಬಾಳ್ಕರ್,ಧನಂಜಯ ಮುಂಡೆ,ಅದಿತಿ ತಟ್ಕರೆ,ಸಂಜಯ ಬನ್ಸೋಡೆ, ಧರ್ಮರಾವ ಬಾಬಾ ಅತ್ರಂ ಮತ್ತು ಅನಿಲ ಭಾಯಿದಾಸ್ ಪಾಟೀಲ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಮಾಣವಚನದ ಆನಂತರ ಮುಂಬೈಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಜಿತ್ ಪವಾರ್, ಬಿಜೆಪಿ-ಶಿವಸೇನಾ ಮೈತ್ರಿಕೂಟವನ್ನು ಸೇರಿರುವುದನ್ನು ಸಮರ್ಥಿಸಿಕೊಂಡರು.‘‘ ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ದೇಶವು ವಿಕಾಸ ಹೊಂದುತ್ತಿದೆ. ಮೋದಿ ಅವರು ವಿದೇಶಗಳಲ್ಲಿಯೂ ಜನಪ್ರಿಯರಾಗಿದ್ದಾರೆ. ಅವರ ನಾಯಕತ್ವವನ್ನು ಪ್ರತಿಯೊಬ್ಬರೂ ಬೆಂಬಲಿಸುತ್ತಿದ್ದಾರೆ ಹಾಗೂ ಶ್ಲಾಘಿಸುತ್ತಿದ್ದಾರೆ. ಬಿಜೆಪಿಯೊಂದಿಗೆ ಕೈಜೋಡಿಸಿ ಮುಂಬರುವ ಲೋಕಸಭಾ ಚುನಾವಣೆ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ನಾವು ಎದುರಿಸಲಿದ್ದೇವೆ’’ ಎಂದವರು ಹೇಳಿದರು.
ಮಹಾರಾಷ್ಟ್ರ ವಿಧಾನಸಭೆಯ ಪ್ರತಿಪಕ್ಶ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡುವ ತನ್ನ ಇಚ್ಠೆಯನ್ನು ಪ್ರಕಟಿಸಿದ ಕೆಲವೇ ದಿನಗಳ ಬಳಿಕ ಅಜಿತ್ ಅವರು ಈ ನಡೆ ಇರಿಸಿದ್ದಾರೆ.
ಮಹಾರಾಷ್ಟ್ರದ 53 ಎನ್ಸಿಪಿ ಶಾಸಕರ ಪೈಕಿ ಅಜಿತ್ ಪವಾರ್ ಅವರು ತನಗೆ 40 ಶಾಸಕರ ಬೆಂಬಲವಿರುವುದಾಗಿ ಘೋಷಿಸಿದ್ದಾರೆ. ಪಕ್ಷಾಂತರ ವಿರೋಧಿ ಕಾನೂನಿನ ನಿಯಮಾವಳಿಗಳಿಂದ ಪಾರಾಗಲು ಅಗತ್ಯವಿರುವ ಸಂಖ್ಯೆಗಿಂತ ನಾಲ್ಕು ಅಧಿಕ ಶಾಸಕರನ್ನು ಅವರು ಹೊಂದಿದಂತಾಗಿದೆ.
‘‘ ಎನ್ಸಿಪಿಯ ಎಲ್ಲಾ ಶಾಸಕರು ನನ್ನ ಜೊತೆಗಿದ್ದಾರೆ. ಒಂದು ಪಕ್ಷವಾಗಿ ನಾವಿಲ್ಲಿಗೆ ಬಂದಿದ್ದೇವೆ. ಈ ಬಗ್ಗೆ ನಮ್ಮ ಹಿರಿರಿಗೂ ಮಾಹಿತಿ ನೀಡಿದ್ದೇವೆ. ಬಹುತೇಕಮಂದಿ, ಪ್ರಜಾಪ್ರಭುತ್ವಕ್ಕೆ ಮಹತ್ವವನ್ನು ನೀಡಿದ್ದಾರೆ. ನಮ್ಮ ಪಕ್ಷವು 40 ವರ್ಷಗಳಷ್ಟು ಹಳೆಯದಾಗಿದ್ದು ಯುವನಾಯಕತ್ವವು ಮುಂದೆಬರಬೇಕಾಗಿದೆ ’’ ಎಂದು ಅಜಿತ್ ಪವಾರ್ ತಿಳಿಸಿದ್ದಾರೆ.
ಪ್ರಸಕ್ತ ಮಹಾರಾಷ್ಟ್ರ ಸಂಪುಟದಲ್ಲಿ ಮುಖ್ಯಮಂತ್ರಿ, ಇಬ್ಬರು ಉಪಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ಹಾಗೂ ಶಿವಸೇನಾ (ಶಿಂಧೆ) ಮತ್ತು ಎನ್ಸಿಪಿ ಬಣದ ತಲಾ 9 ಮಂದಿ ಸಚಿವರಿದ್ದಾರೆ ಮಹಾರಾಷ್ಟ್ರ ಸಂಪುಟವು ಗರಿಷ್ಠ 42 ಮಂದಿ ಸದಸ್ಯರನ್ನು ಹೊಂದಬಹುದಾಗಿದೆ.
ಬಿಜೆಪಿ -ಮಹಾರಾಷ್ಟ್ರ ಮೈತ್ರಿಕೂಟಕ್ಕೆ ಅಜಿತ್ ಪವಾರ್ ಅವರ ಸೇರ್ಪಡೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಸ್ವಾಗತಿಸಿದ್ದಾರೆ. ‘ಈಗ ನಾವು ಓರ್ವ ಮುಖ್ಯಮಂತ್ರಿ ಮತ್ತು ಇಬ್ಬರು ಉಪಮುಖ್ಯಮಂತ್ರಿಗಳನ್ನು ಹೊಂದಿದ್ದೇವೆ. ಡಬಲ್ ಇಂಜಿನ್ ಸರಕಾರ ಈಗ ಟ್ರಿಪಲ್ ಇಂಜಿನ್ ಸರಕಾರವಾಗಿದೆ. ಮಹಾರಾಷ್ಟ್ರದ ಅಭಿವೃದ್ಧಿಗಾಗಿ ನಾನು ಅಜಿತ ಪವಾರ್ ಮತ್ತು ಅವರ ನಾಯಕರನ್ನು ಸ್ವಾಗತಿಸುತ್ತೇನೆ. ಅಜಿತ ಪವಾರ್ ಅವರ ಅನುಭವ ನಮಗೆ ನೆರವಾಗಲಿದೆ ’ ಎಂದು ಶಿಂಧೆ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಶಿಂಧೆ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಮುನ್ನ ಅಜಿತ್ ಪವಾರ್ ಅವರು ತನ್ನ ಪಕ್ಷದ ಕೆಲವು ನಾಯಕರು ಹಾಗೂ ಶಾಸಕರನ್ನು ಮುಂಬೈನಲ್ಲಿರುವ ತನ್ನ ಅಧಿಕೃತ ನಿವಾಸದಲ್ಲಿ ಭೇಟಿಯಾಗಿದ್ದರು. ಆದರೆ ಎನ್ಸಿಪಿ ವರಿಷ್ಠ ಶರದ್ ಪವಾರ್ ಅವರಿಗೆ ಅರಿವಿರಲಿಲ್ಲ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶರದ್ ಪವಾರ್ ಅವರು ‘‘ ಈ ಸಭೆಯನ್ನು ಯಾಕೆ ಕರೆಯಲಾಗಿತ್ತಂಬುದು ನನಗೆ ತಿಳಿದಿಲ. ಪ್ರತಿಪಕ್ಷದ ನಾಯಕನಾಗಿರುವುದರಿಂದ ಅವರಿಗೆ ಶಾಸಕರ ಸಭೆ ಕರೆಯಲು ಹಕ್ಕಿದೆ. ಅದನ್ನು ಅವರು ನಿಯಮಿತವಾಗಿ ಮಾಡುತ್ತಿರುತ್ತಾರೆ. ಈ ಸಬೆಯ ಬಗ್ಗೆ ಹೆಚ್ಚಿನ ವಿವರಗಲು ತನಗೆ ತಿಳಿದಿಲ್ಲವೆಂದವರು ಹೇಳಿದ್ದಾರೆ.
ಎನ್ಸಿಪಿಯ ಹಿರಿಯ ನಾಯಕ ಚಗನ್ ಭುಜಬಲ್ ಹಾಗೂ ಪಕ್ಷದ ಕಾರ್ಯಕಾರಿ ಅಧ್ಯಕ್ಷೆ ಸುಪ್ರಿಯಾ ಸುಲೆ ಅವರು ಕೂಡಾ ಅಜಿತ್ಪವಾರ್ ನಡೆಸಿದ ಸಭೆಯಲ್ಲಿ ಭಾಗವಹಿಸಿದ್ದರೆನ್ನಲಾಗಿದೆ. ಆದರೆ ಎನ್ಸಿಪಿ ರಾಜ್ಯಾಧ್ಯಕ್ಷ ಜಯತ್ ಪಾಟೀಲ್ ಸಭೆಯಲ್ಲಿ ಭಾಗವಹಿಸಿರಲಿಲ್ಲ.
ಅಜಿತ್ ಪವಾರ್ ಹಾಗೂ ಅವರ ಬೆಂಬಲಿಗ ಶಾಸಕರ ಬಂಡಾಯದೊಂದಿಗೆ, ಎನ್ಸಿಪಿ ವಿಭಜನೆಯ ಹಾದಿ ಹಿಡಿದಿದೆ. ಒಂದು ತಿಂಗಳ ಹಿಂದೆ ಎನ್ಸಿಪಿ ಅಧ್ಯಕ್ಷ ಶರದ್ಪವಾರ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆನಂತರ ಸ್ವಪಕ್ಷೀಯರ ಒತ್ತಡದಿಂದಾಗಿ ರಾಜೀನಾಮೆ ನಿರ್ಧಾರವನ್ನು ವಾಪಸ್ ಪಡೆದಿದ್ದರು.
ಶರದ್ ಪವಾರ್ ತನ್ನ ಪುತ್ರಿ ಸುಪ್ರಿಯಾ ಸುಳೆ ಅವರನ್ನು ಎನ್ಸಿಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಪದೋನ್ನತಿಗೊಳಿಸುವ ಮೂಲಕ ಅಜಿತ ಪವಾರಗೆ ಆಘಾತವನ್ನು ನೀಡಿದ್ದರು. ರಾಜ್ಯ ವಿಧಾನಸಭೆಯಲ್ಲಿ ವಿಪಕ್ಷ ನಾಯಕನಾಗಿ ಮುಂದುವರಿಯಲು ತಾನು ಬಯಸುವುದಿಲ್ಲ ಎಂದು ಅಜಿತ್ ಪವಾರ್ ಇತ್ತೀಚಿಗೆ ಹೇಳಿದ್ದರು.
ಅಘಾಡಿಯನ್ನು ಒಡೆದ ಬಿಜೆಪಿ
ಎನ್ಸಿಪಿಯ ಹಿರಿಯ ನಾಯಕ ಅಜಿತ ಪವಾರ್ ಅವರು ರವಿವಾರ ಪಕ್ಷದ ಇತರ ಹಲವು ಶಾಸಕರೊಂದಿಗೆ ಮಹಾರಾಷ್ಟ್ರ ಸರಕಾರದಲ್ಲಿ ಸೇರ್ಪಡೆಗೊಂಡಿದ್ದಾರೆ.
ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿರುವ ಅಜಿತ್ ಬಿಜೆಪಿಯ ದೇವೇಂದ್ರ ಫಡ್ನವೀಸ್ ಜೊತೆಗೆ ಹುದ್ದೆಯನ್ನು ಹಂಚಿಕೊಳ್ಳಲಿದ್ದಾರೆ. ಎನ್ಸಿಪಿಯ 53 ಶಾಸಕರ ಪೈಕಿ 40ಕ್ಕೂ ಅಧಿಕ ಶಾಸಕರ ಬೆಂಬಲವನ್ನು ತಾನು ಹೊಂದಿದ್ದೇನೆ ಎಂದು ಹೇಳಿಕೊಂಡಿರುವ ಅಜಿತ್ ಪವಾರ್ ಅವರ ನಡೆಯಿಂದ ಕಳೆದ 24 ವರ್ಷಗಳಿಂದಲೂ ಹಲವಾರು ಸವಾಲುಗಳನ್ನು ಎದುರಿಸಿ ಎನ್ಸಿಪಿಯನ್ನು ಮುನ್ನಡೆಸಿಕೊಂಡು ಬಂದಿರುವ ಪಕ್ಷದ ಸ್ಥಾಪಕ ಶರದ ಪವಾರ್ ತೀರ ಮುಜುಗರಕ್ಕೆ ಒಳಗಾಗಿದ್ದಾರೆ. ತನ್ನ ಸೋದರನ ಪುತ್ರ ಒಂದು ದಿನ ತನ್ನ ಬುಡಕ್ಕೇ ನೀರು ಕಾಯಿಸುತ್ತಾನೆ ಎಂದು ಅವರು ಕನಸುಮನಸಿನಲ್ಲಿಯೂ ಎಣಿಸಿರಲಿಲ್ಲ.
ಮಹಾರಾಷ್ಟ್ರ ಸಂಪುಟವು ಶೀಘ್ರವೇ ವಿಸ್ತರಣೆಗೊಳ್ಳಲಿದೆ ಎಂದು ಫಡ್ನವೀಸ್ ಶುಕ್ರವಾರವಷ್ಟೇ ಹೇಳಿದ್ದರು. ಮುಖ್ಯಮಂತ್ರಿ ಏಕನಾಥ ಶಿಂದೆ ಅವರೂ ಇತ್ತೀಚಿಗೆ ದಿಲ್ಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದರು.
ಆದರೂ ಮೈತ್ರಿಕೂಟಕ್ಕೆ ಅಜಿತ್ ಪವಾರ್ ಬೆಂಬಲಿಗರ ಸೇರ್ಪಡೆಗೆ ಮುಖ್ಯಮಂತ್ರಿ ಸುಶೀಲ್ ಕುಮಾರ್ಶಿಂಧೆ ಆಂತರಿಕವಾಗಿ ವಿರೋಧಿಸುತ್ತಿದ್ದಾರೆನ್ನಲಾಗಿದೆ. ಅಜಿತ್ ಪವಾರ್ ಅವರು ಎನ್ಸಿಪಿ ಶಾಸಕರ ಗುಂಪಿನೊಂದಿಗೆ ಸೇರ್ಪಡೆಗೊಂಡರೆ ತಾನು ಸರಕಾರದಿಂದ ಹೊರನಡೆಯುವುದಾಗಿ ಇದೇ ಶಿಂದೆ ಕಳೆದ ಎಪ್ರಿಲ್ನಲ್ಲಿ ಬೆದರಿಕೆಯೊಡ್ಡಿದ್ದರು ಎನ್ನುವುದು ಇಲ್ಲಿ ಗಮನಾರ್ಹವಾಗಿದೆ.