ಸಮ್ಮಿಶ್ರ ಸರಕಾರಕ್ಕೆ ಅಜಿತ್ ಪವಾರ್ ಪ್ರವೇಶ: ಏಕನಾಥ್ ಶಿಂಧೆ ಬೆಂಬಲಿಸುವ ಶಿವಸೇನೆ ಶಾಸಕರಲ್ಲಿ ತೀವ್ರ ಅಸಮಾಧಾನ
ಪಕ್ಷದೊಳಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದ ಉದಯ ಸಾವಂತ್
ಮುಂಬೈ: ಮಹಾರಾಷ್ಟ್ರದ ಆಡಳಿತ ರೂಢ ಸಮ್ಮಿಶ್ರ ಸರಕಾರಕ್ಕೆ ಅಜಿತ್ ಪವಾರ್ ಪ್ರವೇಶ ಏಕನಾಥ್ ಶಿಂಧೆ ಅವರನ್ನು ಬೆಂಬಲಿಸುವ ಶಿವಸೇನೆ ಶಾಸಕರಲ್ಲಿ ತೀವ್ರ ಅಸಮಾಧಾನವನ್ನು ಉಂಟು ಮಾಡಿದೆ. ಮುಖ್ಯಮಂತ್ರಿ ಶಿಂಧೆ ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಬುಧವಾರ ಸಂಜೆ ತಮ್ಮ ಅಧಿಕೃತ ನಿವಾಸದಲ್ಲಿ ತುರ್ತು ಪಕ್ಷದ ಸಭೆಯನ್ನು ಕರೆದಿದ್ದರು.
ಶಿವಸೇನಾ ಸಂಸ್ಥಾಪಕ ಬಾಳ್ ಠಾಕ್ರೆ ಅವರು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದೊಂದಿಗೆ ಎಂದಿಗೂ ಸಂಬಂಧ ಹೊಂದಲು ಬಯಸಿರಲಿಲ್ಲ ಎಂದು ಶಾಸಕರು ಮೈತ್ರಿಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉದ್ಧವ್ ಠಾಕ್ರೆ ಅವರು ತಮ್ಮ ತಂದೆಯ ಸಿದ್ಧಾಂತದಿಂದ ವಿಮುಖರಾಗಿದ್ದಾರೆ ಎಂದು ಆರೋಪಿಸಿ ಶಿವಸೇನೆಯನ್ನು ವಿಭಜಿಸಿದ ಶಿಂಧೆ ಅವರಿಗೆ ಈಗಿನ ಬೆಳವಣಿಗೆ ಅಹಿತಕರವಾಗಿದೆ. ಶರದ್ ಪವಾರ್ ಅವರ ಪಕ್ಷ ಮತ್ತು ಕಾಂಗ್ರೆಸ್ ಜೊತೆಗಿನ ಮೈತ್ರಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಶಿಂಧೆ ಬಂಡೇಳಲು ಕಾರಣವಾಗಿತ್ತು.
ಶಿವಸೇನೆಯ ಉದ್ಧವ್ ಠಾಕ್ರೆ ಬಣ ಸೋಮವಾರ, ಶಿಂಧೆ ಅವರ ಹಿಂದಿನ ಹೇಳಿಕೆಗಳ ವೀಡಿಯೊವನ್ನು ಟ್ವೀಟ್ ಮಾಡಿತು, ಅದಕ್ಕೆ "ನೀವು ಈಗ ಏನು ಹೇಳುತ್ತೀರಿ?" ಎಂದು ಕೇಳಿತ್ತು.
ಎನ್ಸಿಪಿ ಪ್ರವೇಶದ ನಂತರ ಸಚಿವ ಸ್ಥಾನ ಕುಗ್ಗುತ್ತಿರುವ ಬಗ್ಗೆಯೂ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯು 288 ಸದಸ್ಯರನ್ನು ಒಳಗೊಂಡಿರುವುದರಿಂದ, ಸರಕಾರ ಹೊಂದಬಹುದಾದ ಗರಿಷ್ಠ ಮಂತ್ರಿಗಳ ಸಂಖ್ಯೆ 43. ಶಿವಸೇನೆ-ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದಾಗ 20 ಮಂತ್ರಿಗಳಿದ್ದರು ಹಾಗೂ 23 ಸ್ಥಾನ ಖಾಲಿಯಿತ್ತು ಇದೀಗ ಒಂಬತ್ತು ಮಂತ್ರಿಗಳೊಂದಿಗೆ ಎನ್ಸಿಪಿ ಸೇರ್ಪಡೆಯಾದ ನಂತರ ಈಗ ಒಟ್ಟು ಮಂತ್ರಿಗಳು 29ಕ್ಕೆ ಏರಿಕೆಯಾಗಿದ್ದು 14 ಸ್ಥಾನ ಖಾಲಿ ಉಳಿದಿದೆ. ಈ 14 ಖಾಲಿ ಸ್ಥಾನಗಳು ವಿಸ್ತರಣೆ ನಡೆಯುವಾಗ ಮೂರು ಪಕ್ಷಗಳಲ್ಲಿ ವಿಭಜನೆಯಾಗಲಿವೆ. ಶಿಂಧೆ, ಫಡ್ನವೀಸ್ ಹಾಗೂ ಪವಾರ್ ಮೈತ್ರಿಕೂಟಕ್ಕೆ ಇದು ಕಷ್ಟದ ಕೆಲಸವಾಗಲಿದೆ.
"ಎನ್ಸಿಪಿ ಮೈತ್ರಿ ಸರಕಾರಕ್ಕೆ ಸೇರಿದ ನಂತರ ಬಿಜೆಪಿ ಮತ್ತು ಶಿವಸೇನೆಯಿಂದ ಸಚಿವ ಸ್ಥಾನದ ಆಕಾಂಕ್ಷಿಗಳ ವ್ಯಾಪ್ತಿಯು ಕಡಿಮೆಯಾಗಿದೆ. ಇದು ಕೆಲವು ಶಾಸಕರನ್ನು ಅಸಮಾಧಾನಗೊಳಿಸಿದೆ. ಇದು ಮುಖ್ಯಮಂತ್ರಿಗೆ ತಿಳಿದಿದೆ" ಎಂದು ಶಿವಸೇನಾ ಸಂಸದ ಗಜಾನನ್ ಕೀರ್ತಿಕರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಉಲ್ಲೇಖಿಸಿದೆ.
ಸಭೆಯ ನಂತರ, ಪಕ್ಷದೊಳಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಹಿರಿಯ ನಾಯಕ ಉದಯ್ ಸಾಮಂತ್ ಹೇಳಿದರು. "ಮೂರೂ ಪಕ್ಷಗಳ ನಾಯಕರು ಒಟ್ಟಾಗಿ ಸರಕಾರ ನಡೆಸುತ್ತೇವೆ, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಂಘಟನೆಯನ್ನು ಬಲಪಡಿಸುವ ಬಗ್ಗೆ ಚರ್ಚೆ ನಡೆದಿದೆ. 2024 ರ ಚುನಾವಣೆಯನ್ನು ಶಿಂಧೇ-ಜಿ ನೇತೃತ್ವದಲ್ಲಿ ಎದುರಿಸಲಾಗುವುದು" ಎಂದು ಅವರು ಹೇಳಿದರು.
ಎನ್ ಸಿಪಿ ಬಗ್ಗೆ ನಮ್ಮ ನೀತಿ ಸ್ಪಷ್ಟವಾಗಿದೆ. ಎನ್ ಸಿಪಿ ದ್ರೋಹ ಮಾಡುವ ಪಕ್ಷ. ನಾವು ಅಧಿಕಾರದಲ್ಲಿದ್ದರೂ ಎನ್ಸಿಪಿಯೊಂದಿಗೆ ಇರುವುದಿಲ್ಲ ಎಂದು ಶಿಂಧೆ ಸೇನಾ ಬಣದ ವಕ್ತಾರ ಸಂಜಯ್ ಶಿರ್ಸತ್ ಎಪ್ರಿಲ್ 19 ರಂದು ಸುದ್ದಿಗಾರರಿಗೆ ತಿಳಿಸಿದ್ದರು.
ನಾವು ಯಾವಾಗಲೂ ಶರದ್ ಪವಾರ್ ವಿರುದ್ಧ ಇರುತ್ತೇವೆ. ಇಂದೂ ಕೂಡ ಶರದ್ ಪವಾರ್ ವಿರುದ್ಧ ಇದ್ದೇವೆ ಎಂದು ಸಂಜಯ್ ಶಿರ್ಸತ್ ಪುನರುಚ್ಚರಿಸಿದ್ದಾರೆ.
ಪಕ್ಷೇತರರು ಹಾಗೂ ಶಿಂಧೆ ಅವರನ್ನು ಬೆಂಬಲಿಸುವ ಸಣ್ಣ ಪಕ್ಷಗಳ ಗುಂಪನ್ನು ಮುನ್ನಡೆಸುತ್ತಿರುವ ಪ್ರಹಾರ್ ಜನಶಕ್ತಿ ಪಕ್ಷದ ಸಂಸ್ಥಾಪಕ ಹಾಗೂ ಶಾಸಕ ಬಚ್ಚು ಕಡು ಅವರು ಎನ್ಸಿಪಿ ಸೇರ್ಪಡೆಯ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಕಳೆದ ವರ್ಷ ಬಂಡಾಯವೆದ್ದಿದ್ದ ಶಿಂಧೆ ಹಾಗೂ ಇತರ 15 ಶಾಸಕರು ಅನರ್ಹವಾಗುವ ಸಾಧ್ಯತೆಯ ಇರುವಾಗ ಅಜಿತ್ ಪವಾರ್ ಅವರ ಪ್ರವೇಶವು ಅವರಲ್ಲಿ ಸಾಕಷ್ಟು ಆತಂಕವನ್ನು ಉಂಟುಮಾಡಿದೆ.