ಏಕದಿನ ವಿಶ್ವಕಪ್ ಗೂ ಮುನ್ನ ಬಾಂಗ್ಲಾದೇಶದ ನಾಯಕ ತಮೀಮ್ ಇಕ್ಬಾಲ್ ದಿಢೀರ್ ನಿವೃತ್ತಿ

ತಮೀಮ್ ಇಕ್ಬಾಲ್ ಫೋಟೋ PTI
ಢಾಕಾ: ಬಾಂಗ್ಲಾದೇಶ ತನ್ನ ಏಕದಿನ ವಿಶ್ವಕಪ್ ಅಭಿಯಾನವನ್ನು ಭಾರತದಲ್ಲಿ ಆರಂಭಿಸುವ ಮೂರು ತಿಂಗಳ ಮೊದಲು ತಂಡದ ನಾಯಕ ತಮೀಮ್ ಇಕ್ಬಾಲ್ ಗುರುವಾರ ಅಂತರ್ ರಾಷ್ಟ್ರೀಯ ಕ್ರಿಕೆಟ್ ಗೆ ದಿಢೀರ್ ನಿವೃತ್ತಿ ಘೋಷಿಸಿ ಎಲ್ಲರನ್ನು ಅಚ್ಚರಿಗೊಳಿಸಿದರು.
ಢಾಕಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಮ್ಮ 16 ವರ್ಷಗಳ ಅಂತರ್ ರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸುವ ನಿರ್ಧಾರವನ್ನು ಪ್ರಕಟಿಸುವ ವೇಳೆ 34 ವರ್ಷ ವಯಸ್ಸಿನ ಇಕ್ಬಾಲ್ ಕಣ್ಣೀರು ಹಾಕಿದರು.
"ನಿನ್ನೆ ಅಫ್ಘಾನಿಸ್ತಾನ ವಿರುದ್ಧ ಪಂದ್ಯವು ನನ್ನ ಕೊನೆಯ ಅಂತರ್ ರಾಷ್ಟ್ರೀಯ ಪಂದ್ಯವಾಗಿದ್ದು, ನಾನು ಅಂತರ್ ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುತ್ತಿದ್ದೇನೆ" ಎಂದು ತಮೀಮ್ ಸುದ್ದಿಗಾರರಿಗೆ ತಿಳಿಸಿದರು.
2007ರಲ್ಲಿ ಝಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ ತಮೀಮ್, "ನಾನು ನನ್ನ ಕೈಲಾದಷ್ಟು ನೀಡಿದ್ದೇನೆ. ನನ್ನ ಕೈಲಾದ ಪ್ರಯತ್ನ ಮಾಡಿದ್ದೇನೆ. ಈ ಕ್ಷಣದಿಂದ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುತ್ತಿದ್ದೇನೆ’ ಎಂದು ತಿಳಿಸಿದರು.
ಅಕ್ಟೋಬರ್ 7 ರಂದು ಧರ್ಮಶಾಲಾದಲ್ಲಿ ಅಫ್ಘಾನಿಸ್ತಾನದ ವಿರುದ್ಧ ವಿಶ್ವಕಪ್ ಅಭಿಯಾನ ಆರಂಭಿಸುವ ಬಾಂಗ್ಲಾದೇಶ ತಂಡವನ್ನು ತಮೀಮ್ ನಿರ್ಗಮನದ ನಂತರ ಯಾರು ಮುನ್ನಡೆಸುತ್ತಾರೆ ಎಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ.
ಎಡಗೈ ಆರಂಭಿಕ ಆಟಗಾರ ತಮೀಮ್ ಅಂತರ್ ರಾಷ್ಟ್ರೀಯ ಕ್ರಿಕೆಟ್ ನಲ್ಲಿ 25 ಶತಕಗಳು ಸೇರಿದಂತೆ 15,000 ಪ್ಲಸ್ ರನ್ ಗಳಿಸಿದ್ದಾರೆ.
ಅವರು ಏಕದಿನ ಕ್ರಿಕೆಟ್ ನಲ್ಲಿ 8,313 ರನ್ ಗಳಿಸಿದ್ದು, ಇದು ಬಾಂಗ್ಲಾದೇಶದ ಬ್ಯಾಟ್ಸ್ ಮನ್ ಶ್ರೇಷ್ಠ ಸಾಧನೆಯಾಗಿದೆ. ಏಕದಿನ ಕ್ರಿಕೆಟ್ ನಲ್ಲಿ ಅವರು 14 ಶತಕಗಳನ್ನು ಗಳಿಸಿದ್ದು ಬಾಂಗ್ಲಾ ಪರ ಹೆಚ್ಚು ಶತಕಗಳನ್ನು ಗಳಸಿದ್ದಾರೆ.
ಚಟ್ಟೋಗ್ರಾಮ್ ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಬುಧವಾರ ನಡೆದ ಏಕದಿನ ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ತಮೀಮ್ 13 ರನ್ ಗಳಿಸಿದರು, ಅದು ಅವರ ಕೊನೆಯ ಅಂತರಾಷ್ಟ್ರೀಯ ಪಂದ್ವವಾಗಿ ಪರಿಣಮಿಸಿತು.