ದ.ಕ.ಜಿಲ್ಲೆಯಲ್ಲಿ ಸಂಭ್ರಮದ ‘ಈದುಲ್ ಅಝ್ಹಾ’ ಆಚರಣೆ
ಮಂಗಳೂರು, ಜೂ.29: ದ.ಕ.ಜಿಲ್ಲೆಯಲ್ಲಿ ಇಂದು ಮುಂಜಾನೆಯಿಂದಲೇ ಅತ್ಯಂತ ಸಡಗರ, ಸಂಭ್ರಮದಿಂದ ‘ಈದುಲ್ ಅಝ್ಹಾ’ (ಬಕ್ರೀದ್ ಹಬ್ಬ) ಆಚರಿಸಲಾಗುತ್ತಿದೆ.
ಜಿಲ್ಲೆಯ ಮುಸ್ಲಿಮರು ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಝ್ ನಿರ್ವಹಿಸಿ, ಈದ್ ಖುತ್ಬಾ ಮತ್ತು ಪ್ರವಚನ ಆಲಿಸಿ, ಈದ್ ಸಂದೇಶ ಸ್ವೀಕರಿಸುವುದು ಮತ್ತು ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುತ್ತಿರುವುದು ಕಂಡು ಬಂತು.
ಮಂಗಳೂರಿನ ಬಾವುಟಗುಡ್ಡೆ ಈದ್ಗಾ ಮಸ್ಜಿದ್, ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್, ಪಂಪ್ ವೆಲ್ನ ಮಸ್ಜಿದುತ್ತಖ್ವಾ, ಹಂಪನಕಟ್ಟೆಯ ಮಸ್ಜಿದುನ್ನೂರ್, ಸ್ಟೇಟ್ಬ್ಯಾಂಕ್ನ ಇಬ್ರಾಹೀಂ ಖಲೀಲ್ ಮಸ್ಜಿದ್, ಕಂಕನಾಡಿ ರಹ್ಮಾನಿಯಾ ಜುಮಾ ಮಸ್ಜಿದ್, ನಗರದ ವಾಸ್ಲೇನ್ ಇಹ್ಸಾನ್ ಮಸ್ಜಿದ್, ಪಾಂಡೇಶ್ವರ ಪೊಲೀಸ್ ಲೇನ್ನ ಫೌಝಿಯಾ ಜುಮಾ ಮಸ್ಜಿದ್, ಬಂದರ್ ಕಚ್ಚೀ ಮೇಮನ್ ಜುಮಾ ಮಸ್ಜಿದ್, ಬಂದರ್ ಕಂದುಕ ಬದ್ರಿಯಾ ಜುಮಾ ಮಸ್ಜಿದ್, ಬೋಳಾರ ಮುಹಿಯುದ್ದೀನ್ ಜುಮಾ ಮಸ್ಜಿದ್, ಕುದ್ರೋಳಿ ಜಾಮೀಯಾ ಜುಮಾ ಮಸ್ಜಿದ್, ಬಿಕರ್ನಕಟ್ಟೆ ಅಹಸನುಲ್ ಮಸಾಜೀದ್ ಸಹಿತ ಜಿಲ್ಲೆಯ ಜುಮಾ ಮಸ್ಜಿದ್ ಮತ್ತು ಈದ್ಗಾಗಳಲ್ಲಿ ನಮಾಝ್ ಹಾಗೂ ಖುತ್ಬಾ ನೆರವೇರಿಸಲಾಯಿತು.
ಎಳೆಯ ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಹೊಸ ಬಟ್ಟೆಬರೆ ಧರಿಸಿ, ಅತ್ತರ್ ಹಚ್ಚಿ, ನಾನಾ ಬಗೆಯ ತಿಂಡಿ-ತಿನಿಸು ತಿಂದು ಹಬ್ಬವನ್ನು ಅತ್ಯಂತ ಶ್ರದ್ಧೆಯಿಂದ ಸಂಭ್ರಮಿಸಿದರು.
ಈದ್ ನಮಾಝ್-ಖುತ್ಬಾದ ಬಳಿಕ ದಫನ ಭೂಮಿಗೆ ತೆರಳಿ ಅಗಲಿದ ಕುಟುಂಬದ ಸದಸ್ಯರ ಮಗ್ಫಿರತ್ಗಾಗಿ ಪ್ರಾರ್ಥಿಸಿದರು. ಬಳಿಕ ಕುಟುಂಬಸ್ಥರು, ಸ್ನೇಹಿತರು, ಸಮೀಪದ ನಿವಾಸಿಗಳ ಮನೆಗೆ ತೆರಳಿ ಈದ್ ಶುಭಾಶಯ ಸಲ್ಲಿಸುತ್ತಿದ್ದಾರೆ.