ಛತ್ತೀಸ್ ಗಢ: ರೈಲ್ವೇ ವಿದ್ಯುತ್ ಲೈನ್ ಸಂಪರ್ಕಕ್ಕೆ ಬಂದ ಟ್ರಕ್ ಅಗ್ನಿಗಾಹುತಿ
ಫೋಟೋ: Twitter@NDTV
ಶಕ್ತಿ(ಛತ್ತೀಸ್ ಗಢ): ಸಕ್ರೇಲಿ ಗೇಟ್ ಬಳಿ ಹೈಟೆನ್ಷನ್ ರೈಲ್ವೇ ವಿದ್ಯುತ್ ಲೈನ್ ಗೆ ಸ್ಪರ್ಶಿಸಿದ ತಂತಿ ತುಂಬಿದ್ದ ಟ್ರಕ್ ಭಾರೀ ಬೆಂಕಿಗೆ ತುತ್ತಾದ ಘಟನೆ ಶುಕ್ರವಾರ ರಾತ್ರಿ 11.30ರ ಸುಮಾರಿಗೆ ಸಂಭವಿಸಿದ್ದು, ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.
"ಸಕ್ರೇಲಿ ಗೇಟ್ ಬಳಿ ರೈಲ್ವೇ ವಿದ್ಯುತ್ ತಂತಿಯ ಸಂಪರ್ಕಕ್ಕೆ ಬಂದ ನಂತರ ತಂತಿ ತುಂಬಿದ್ದ ಟ್ರಕ್ ಗೆ ಬೆಂಕಿ ಹೊತ್ತಿಕೊಂಡಿತು. ರಾತ್ರಿ 11:30 ಕ್ಕೆ ಘಟನೆ ನಡೆದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಅಗ್ನಿಶಾಮಕ ದಳದ ಸಹಾಯದಿಂದ ಬೆಂಕಿಯನ್ನು ನಂದಿಸಲಾಯಿತು'' ಎಂದು ಘಟನೆಯ ಕುರಿತು ಮಾತನಾಡಿದ ಬರದ್ವಾರ ಟೌನ್ ಇನ್ಸ್ ಪೆಕ್ಟರ್ ರಾಜೇಶ್ ಚಂದ್ರವಂಶಿ ತಿಳಿಸಿದರು.
ಛತ್ತೀಸ್ ಗಢದ ಶಕ್ತಿ ಜಿಲ್ಲೆಯ ಬರದ್ವಾರ ರೈಲು ನಿಲ್ದಾಣದ ಬಳಿಯ ಸಕ್ರೆಲಿ ಗೇಟ್ನಲ್ಲಿ ಈ ಘಟನೆ ನಡೆದಿದೆ. ಓವರ್ ಲೋಡ್ ಮಾಡಿದ ಟ್ರಕ್ ವೊಂದು ರೈಲ್ವೆಯ OHE (ಓವರ್ ಹೆಡ್ ಉಪಕರಣ) ತಂತಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದರಿಂದಾಗಿ ಟ್ರಕ್ ಗೆ ಬೆಂಕಿ ಹತ್ತಿಕೊಂಡಿತು.
ಅಪಘಾತದಿಂದಾಗಿ, ರೈಲ್ವೆ ಹಳಿ (ಮುಂಬೈ ಹೌರಾ ರೈಲು ಮಾರ್ಗ) ಹಾಗೂ ರಾಷ್ಟ್ರೀಯ ಹೆದ್ದಾರಿ 49ರಲ್ಲಿ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿತ್ತು. ಬೆಂಕಿ ನಂದಿಸಿ ಜೆಸಿಬಿ ವಾಹನದ ಮೂಲಕ ಲಾರಿ ಎಳೆದೊಯ್ದ ಬಳಿಕವೇ ಎಲ್ಲವನ್ನೂ ತೆರವುಗೊಳಿಸಲಾಯಿತು.