ಬಂಟ್ವಾಳದ ಅಕ್ರಮ ಸಕ್ರಮ ಸಮಿತಿಯಿಂದ ಭ್ರಷ್ಟಾಚಾರ ಆರೋಪ
2018-2023ರವರೆಗೆ ನಿಯಮ ಉಲ್ಲಂಘಿಸಿ ಭೂ ಮಂಜೂರಾತಿ ತನಿಖೆಗೆ ಆಗ್ರಹ
ಮಂಗಳೂರು, ಜು. 27: ಬಂಟ್ವಾಳ ತಾಲೂಕು ಭೂ ಸಕ್ರಮಿಕರಣ (ಅಕ್ರಮ- ಸಕ್ರಮ)ಸಮಿತಿಯು 2018ರಿಂದ 2023ರವರೆಗೆ ಭೂಕಂದಾಯ ನಿಯಮಗಳನ್ನು ಉಲ್ಲಂಘಿಸಿ ಭೂ ಮಂಜೂರಾತಿ ಮಾಡುವ ಮೂಲಕ ಅಕ್ರಮಗಳನ್ನು ನಡೆಸಿದ್ದು, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಪದ್ಮನಾಭ ಸಾವಂತ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದ ಅವರು, ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕುಮ್ಕಿ ಮಿತಿಯಲ್ಲಿ ಇರುವ ಜಾಗ ಮಂಜೂರಾತಿಗೆ ಅವಕಾಶವಿಲ್ಲ. ಬಂಟಾಳದ ಅಕ್ರಮ ಸಕ್ರಮ ಸಮಿತಿಯು 2018ರಿಂದ 2023ರ ಅವಧಿಯಲ್ಲಿ ಸಾರ್ವಜನಿಕ ಮತ ಓಲೈಕೆಗಾಗಿ ನಿಯಮಾವಳಿ ಉಲ್ಲಂಘಿಸಿ ಅರ್ಜಿದಾರರಿಗೆ ಮಂಜೂರಾತಿ ಮಾಡಿದೆ. ಅರಣ್ಯ ವ್ಯಾಪ್ತಿಗೆ ಒಳಪಟ್ಟ ಜಾಗವ್ನನು ಕೂಡಾ ಕಂದಾಯ ಅಧಿಕಾರಿಗಳ ಮೇಲೆ ರಾಜಕೀಯ ಒತ್ತಡ ಹೇರಿ ಮಂಜೂರು ಮಾಡಿದ್ದು, ಡಿಸಿ ಮನ್ನಾ ಹಾಗೂ ಗೋಮಾಳ ಜಮೀನನ್ನು ಸುಳ್ಳು ವರದಿ ತಯಾರಿಸಿ ಮಂಜೂರು ಮಾಡಿದೆ ಎಂದರು.
ಬಂಟ್ವಾಳದ ಕುಕ್ಕಿಪಾಡಿ ಗ್ರಾ.ಪಂ. ವ್ಯಾಪ್ತಿಯ ಸ. ನಂ. 204ರಲ್ಲಿದ್ದ ಗೋಮಾಳ ಭೂಮಿಯು ದಿಶಾಂಕ್ ಆ್ಯಪ್ ನಲ್ಲಿ ಸ.ನಂ. 96/19 ಎಂದು ಮೇಲ್ನೋಟಕ್ಕೆ ಕಂಡು ಬರುವಂತೆ ಅತಿಕ್ರಮಣ ಮಾಡಲಾಗಿದೆ. ಅದೇ ಗ್ರಾ.ಪಂ. ವ್ಯಾಪ್ತಿಯಲ್ಲಿ ಬಡವರ ನಿವೇಶನಕ್ಕೆ ಕಾಯ್ದಿರಿಸಿದ ಭೂಮಿಯನ್ನು ಅಲ್ಲಿನ ಗ್ರಾ.ಪಂ. ಸದಸ್ಯೆ ಅಕ್ರಮ ಸಕ್ರಮದಡಿ ಅತಿಕ್ರಮಿಸಿಕೊಂಡಿದ್ದಾರೆ. ಅಕ್ರಮ ಸಕ್ರಮ ಸಿತಿಇಯ ಆದೇಶವು ಭೂ ಕಂದಾಯ ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆ ಎಂದು ತಿಳಿದಿದ್ದರೂ ಈ ಜಮೀನುಗಳ ಪರವಾಗಿ ಪಹಣಿ ಪತ್ರಿಕೆಗಳ ಖಾತಾ ಬದಲಾವಣೆಯ ದಂಧೆ ಕೂಡಾ ಕಂದಾಯ ಕಚೇರಿಯಲ್ಲಿ ನಡೆದಿರುವುದು ಕಂಡು ಬಂದಿದೆ. ಸರಕಾರ ಅತಿಕ್ರಮಣ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಸರಕಾರದ ಭೂಮಿಯನ್ನು ಮರು ಸರಕಾರಕ್ಕೆ ಹಸ್ತಾಂತರಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕುಕ್ಕಿಪಾಡಿ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಸೀತಾರಾಮ ಶಾಂತಿ ಕಂಬಲದೋಡಿ, ಬಂಟ್ವಾಳ ಬ್ಲಾಕ್ ಕಾರ್ಮಿಕ ಘಟಕದ ಅಧ್ಯಕ್ಷರಾದ ಮನೋಹರ್ ಕುಲಾಲ್ ನೇರಂಬೋಡು ಉಪಸ್ಥಿತರಿದ್ದರು.