ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ವೇಳಾಪಟ್ಟಿ ಪ್ರಕಟ: ಅ.15ರಂದು ಭಾರತ-ಪಾಕಿಸ್ತಾನ ಮುಖಾಮುಖಿ
ಮುಂಬೈ : ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಆರಂಭಕ್ಕೆ ಸರಿಯಾಗಿ 100 ದಿನಗಳು ಬಾಕಿ ಇರುವಂತೆಯೇ ಕ್ರಿಕೆಟ್ ವಿಶ್ವಕಪ್-2023ರ ವೇಳಾಪಟ್ಟಿಯನ್ನು ಐಸಿಸಿ ಮಂಗಳವಾರ ಪ್ರಕಟಿಸಿದೆ.
ವೇಳಾಪಟ್ಟಿಯ ಪ್ರಕಾರ ಐಸಿಸಿ ವಿಶ್ವಕಪ್ ಟೂರ್ನಿಯು ಭಾರತದ ಆತಿಥ್ಯದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 19ರ ತ ನಕ ನಡೆಯಲಿದೆ.
ರೌಂಡ್ ರಾಬಿನ್ ಮಾದರಿಯಲ್ಲಿ ಟೂರ್ನಮೆಂಟ್ ನಡೆಯಲಿದೆ. ನ.15ರಂದು ಮುಂಬೈನಲ್ಲಿ ಮೊದಲ ಸೆಮಿಫೈನಲ್ , ನ.16ರಂದು ಕೋಲ್ಕತಾದಲ್ಲಿ 2ನೇ ಸೆಮಿ ಫೈನಲ್ ನಡೆಯಲಿದೆ.
ಫೈನಲ್ ಪಂದ್ಯ ವು ನ.19ರಂದು ಅಹಮದಾಬಾದ್ ನಲ್ಲಿ ನಡೆಯಲಿದೆ,.
ಭಾರತವು ಅ.8ರಂದು ಚೆನ್ನೈ ನಲ್ಲಿ ಆಸ್ಟ್ರೇಲಿಯ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ. ಅ.15ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಅಹಮದಾಬಾದ್ ನಲ್ಲಿ ಎದುರಿಸಲಿದೆ.
ಮೆಗಾ ಈವೆಂಟ್ ನಲ್ಲಿ ಒಟ್ಟು 10 ತಂಡಗಳು ಭಾಗವಹಿಸಲಿವೆ. ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಮೂಲಕ ಒಟ್ಟು ಎಂಟು ತಂಡಗಳು ಈಗಾಗಲೇ ಅರ್ಹತೆ ಪಡೆದಿದ್ದು, ಎರಡು ತಂಡಗಳು ಇನ್ನೂ ನಿರ್ಧಾರವಾಗಿಲ್ಲ. ಜುಲೈ 9 ರಂದು ಝಿಂಬಾಬ್ವೆಯಲ್ಲಿ ಮುಕ್ತಾಯವಾಗುವ ಕ್ವಾಲಿಫೈಯರ್ ಪಂದ್ಯಾವಳಿಯ ಕೊನೆಯಲ್ಲಿ ಅಂತಿಮ ಎರಡು ಸ್ಥಾನಗಳನ್ನು ನಿರ್ಧರಿಸಲಾಗುತ್ತದೆ.
ಪ್ರತಿ ತಂಡವು ಇತರ 9 ತಂಡಗಳೊಂದಿಗೆ ರೌಂಡ್-ರಾಬಿನ್ ಮಾದರಿಯಲ್ಲಿ ಆಡಲಿದ್ದು, ಅಗ್ರ ನಾಲ್ಕು ತಂಡಗಳು ಸೆಮಿ-ಫೈನಲ್ ಗೆ ಅರ್ಹತೆ ಪಡೆಯುತ್ತವೆ.
ಕಳೆದ ಆವೃತ್ತಿಯ ಫೈನಲಿಸ್ಟ್ ಗಳಾದ ಇಂಗ್ಲೆಂಡ್ ಮತ್ತು ನ್ಯೂಝಿಲ್ಯಾಂಡ್ ಆರಂಭಿಕ ಪಂದ್ಯವನ್ನು ಆಡಲಿವೆ. ಆದರೆ ಲೀಗ್ ಹಂತದಲ್ಲಿ ಕೆಲವು ರೋಚಕ ಪಂದ್ಯಗಳು ನಡೆಯುವ ಸಾಧ್ಯತೆಯಿದೆ..
ರೌಂಡ್-ರಾಬಿನ್ ಹಂತದಲ್ಲಿ ಇಂಡೋ-ಪಾಕ್ ಮುಖಾಮುಖಿಯು ಅತ್ಯಂತ ಮಹತ್ವದ್ದಾಗಿದೆ. ಅಕ್ಟೋಬರ್ 13 ರಂದು ಲಕ್ನೋದಲ್ಲಿ ದಕ್ಷಿಣ ಆಫ್ರಿಕಾದೊಂದಿಗೆ ಆಸ್ಟ್ರೇಲಿಯಾದ ಮುಖಾಮುಖಿಯೂ ಮಹತ್ವದ ಪಂದ್ಯವಾಗಿದೆ
2023ರ ವಿಶ್ವಕಪ್ ಗೆ ಭಾರತ ತಂಡದ ವೇಳಾಪಟ್ಟಿ:
ಭಾರತ vs ಆಸ್ಟ್ರೇಲಿಯ, ಅಕ್ಟೋಬರ್ 8, ಚೆನ್ನೈ
ಭಾರತ vs ಅಫ್ಘಾನಿಸ್ತಾನ , ಅಕ್ಟೋಬರ್ 11, ಹೊಸದಿಲ್ಲಿ
ಭಾರತ vs ಪಾಕಿಸ್ತಾನ , ಅಕ್ಟೋಬರ್ 15, ಅಹಮದಾಬಾದ್
ಭಾರತ vs ಬಾಂಗ್ಲಾದೇಶ, ಅಕ್ಟೋಬರ್ 19, ಪುಣೆ
ಭಾರತ vs ನ್ಯೂಝಿಲ್ಯಾಂಡ್ , ಅಕ್ಟೋಬರ್ 22, ಧರ್ಮಶಾಲಾ
ಭಾರತ vs ಇಂಗ್ಲೆಂಡ್, ಅಕ್ಟೋಬರ್ 29, ಲಕ್ನೋ
ಭಾರತ vs ಕ್ವಾಲಿಫೈಯರ್-2, ನವೆಂಬರ್ 2, ಮುಂಬೈ
ಭಾರತ vs ದಕ್ಷಿಣ ಆಫ್ರಿಕಾ, ನವೆಂಬರ್ 5, ಕೋಲ್ಕತ್ತಾ
ಭಾರತ vs ಕ್ವಾಲಿಫೈಯರ್-1 , ನವೆಂಬರ್ 11, ಬೆಂಗಳೂರು.