ಚಾಮರಾಜನಗರ: ಜಮೀನು ಕಾಯುತ್ತಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ
ಚಾಮರಾಜನಗರ: ಜಮೀನು ಕಾಯುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಚಿರತೆಯೊಂದು ದಾಳಿ ಮಾಡಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮೋಡಳ್ಳಿ ಸಮೀಪದ ಕಂಚಗಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.
ನಂಜಪ್ಪ ಎಂಬವರು ಚಿರತೆ ದಾಳಿಗೊಳಗಾದ ವ್ಯಕ್ತಿ. ಜೋಳದ ಫಸಲು ಕಾವಲಿಗಾಗಿ ಜಮೀನಿಗೆ ತೆರಳಿದ್ದ ನಂಜಪ್ಪ ಅವರು ಫೋನಿನಲ್ಲಿ ಮಾತಾಡಿಕೊಂಡು ಮಲಗಿದ್ದರು. ರಾತ್ರಿ 9 ಗಂಟೆ ಸಮಯದಲ್ಲಿ ಗುಡಿಸಲಿಗೆ ನುಗ್ಗಿದ ಚಿರತೆ ನಂಜಪ್ಪ ಮೇಲೆ ಬಿದ್ದು ತೋಳಿಗೆ ಪರಚಿದೆ. ಬೆಕ್ಕು ಇರಬೇಕೆಂದು ಭಾವಿಸಿ ಹೊದಿಕೆಯ ಸಮೇತ ಬಿಸಾಡಿದ ಬಳಿಕ ಹೊರಗೆ ಬಿದ್ದಾಗ ಅದು ಚಿರತೆ ಎಂದು ಗೊತ್ತಾಗಿದೆ. ಕೂಡಲೇ ದೊಣ್ಣೆ ಹಿಡಿದು ಬೆದರಿಸಿದಾಗ ಓಡಿ ಹೋಗಿದೆ. ಸದ್ಯ ಅವರು ಪ್ರಾಣಾಪಾಯದಿಂದ ಪಾರಾಗಿದ್ದು ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸೋಮವಾರ ರಾತ್ರಿ ಕಗ್ಗಲಿಗುಂದಿ ಗ್ರಾಮದಲ್ಲಿ ಬಾಲಕಿಯೊಬ್ಬಳ ಮೇಲೆ ದಾಳಿ ನಡೆಸಿದ್ದ ಚಿರತೆ ಇದೇ ಇರಬೇಕು ಎಂದು ಗ್ರಾಮಸಸ್ಥರು ಶಂಕಿಸಿದ್ದಾರೆ.
ಕಗ್ಗಲಿಗುಂದಿ ಗ್ರಾಮಸ್ಥರು ಆತಂಕದ ಸಮಯದಲ್ಲಿರುವಾಗಲೇ ಕಂಚಗಳ್ಳಿ ಗ್ರಾಮದಲ್ಲಿ ಈ ಘಟನೆ ಸಂಭವಿಸಿರುವುದು ಮೋಡಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಸ್ಥರನ್ನು ಮತ್ತಷ್ಟು ಆತಂಕಕ್ಕೀಡಾಗುವಂತೆ ಮಾಡಿದೆ.
ಅರಣ್ಯ ಇಲಾಖೆ ಶೀಘ್ರವಾಗಿ ಚಿರತೆಯನ್ನು ಹಿಡಿದು ಬೇರೆಡೆ ಬಿಡಬೇಕು ಎಂದು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.