ಮಧ್ಯಪ್ರದೇಶ: ಮದ್ಯದ ಅಮಲಿನಲ್ಲಿ ಪತ್ನಿ ಮೇಲೆ ಗುಂಡು ಹಾರಿಸಿ ಕೊಂದ ಬಿಜೆಪಿ ಮುಖಂಡ
ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಮುಖಂಡನೊಬ್ಬ ಜಗಳವಾಡಿದ ನಂತರ ಮದ್ಯದ ಅಮಲಿನಲ್ಲಿ ತನ್ನ ಪತ್ನಿಯ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
"ನಗರದ ರಾತಿಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಸಾಯಿ ನಗರ ಕಾಲೋನಿಯಲ್ಲಿ ಮಂಗಳವಾರ ಮುಂಜಾನೆ 1 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ. ಮದ್ಯದ ಅಮಲಿನಲ್ಲಿದ್ದ ಬಿಜೆಪಿ ನಾಯಕ ರಾಜೇಂದ್ರ ಪಾಂಡೆ ಯಾವುದೋ ವಿಷಯದ ಮೇಲೆ ಹೆಂಡತಿಯೊಂದಿಗೆ ಜಗಳವಾಡಿದ್ದ. ಸಿಟ್ಟಿನ ಭರದಲ್ಲಿ ತನ್ನ ಹೆಂಡತಿಯ ಮೇಲೆ 12-ಬೋರ್ ಗನ್ನಿಂದ ಗುಂಡು ಹಾರಿಸಿದ್ದ. ಮಹಿಳೆ ಗಂಭೀರ ಗಾಯದಿಂದ ಮೃತಪಟ್ಟಿದ್ದಾಳೆ'' ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ (ಎಸಿಪಿ) ಚಂದ್ರಶೇಖರ್ ಪಾಂಡೆ ಎಎನ್ಐಗೆ ತಿಳಿಸಿದ್ದಾರೆ
ಘಟನೆ ನಡೆದಾಗ ಪಾಂಡೆಯ ಮಗಳು ಮತ್ತು ಅಳಿಯ ಕೂಡ ಮನೆಯಲ್ಲಿದ್ದರು. ಕೃತ್ಯ ಎಸಗಿದ ಬಳಿಕ ಆರೋಪಿ ರಾಜೇಂದ್ರ ಪಾಂಡೆ ಪರಾರಿಯಾಗಿದ್ದಾನೆ. ಆತನನ್ನು ಹಿಡಿಯಲು ಪೊಲೀಸ್ ತಂಡ ಶೋಧ ಕಾರ್ಯ ಆರಂಭಿಸಿದೆ ಎಂದರು.
"ಆರೋಪಿ ಪಾಂಡೆ ಈ ಹಿಂದೆ ಬಿಜೆಪಿಯ ಮಂಡಲ ಉಪಾಧ್ಯಕ್ಷನಾಗಿದ್ದ. ಆತ ಸದ್ಯ ಪಕ್ಷದಲ್ಲಿ ಯಾವ ಹುದ್ದೆಯಲ್ಲಿದ್ದ ಬಗ್ಗೆ ನಮಗೆ ಮಾಹಿತಿ ಇಲ್ಲ" ಎಂದು ಅಧಿಕಾರಿ ಹೇಳಿದ್ದಾರೆ.