ಮಂಗಳೂರು: ಪಿಸ್ತೂಲ್, ಡ್ರಗ್ ಸಹಿತ 3 ಪೆಡ್ಲರ್ ಗಳ ಬಂಧನ; ಸಿಸಿಬಿ ಪೊಲೀಸರ ಕಾರ್ಯಾಚರಣೆ
ಮಂಗಳೂರು, ಜು. 21: ಡ್ರಗ್ಸ್ ಮುಕ್ತ ಮಂಗಳೂರು ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಮಂಗಳೂರು ನಗರ ಪೊಲೀಸರು ನಗರದಲ್ಲಿ ಎಂಡಿಎಂಎ ಮಾರಾಟ ಮಾಡುತ್ತಿದ್ದ ಮೂವರು ಕುಖ್ಯಾತ ಡ್ರಗ್ ಪೆಡ್ಲರ್ಗಳನ್ನು ಪಿಸ್ತೂಲ್ ಹಾಗೂ ಡ್ರಗ್ ಸಹಿತ ದಸ್ತಗಿರಿ ಮಾಡಿರುವ ಬಗ್ಗೆ ವರದಿಯಾಗಿದೆ.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಕುಲದೀಪ್ ಆರ್. ಜೈನ್, ಉಳ್ಳಾಲದ ತಲಪಾಡಿ ಗ್ರಾಮದ ಪಿಲಿಕೂರು ಎಂಬಲ್ಲಿ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎಯನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಘಟಕದ ಎಸಿಪಿ, ಪಿಎ ಹೆಗಡೆ ನೇತೃತ್ವದ ಸಿಸಿಬಿ ಪೊಲೀಸರು ದಾಳಿ ನಡೆಸಿ, ಬಂಟ್ವಾಳ ಫರಂಗಿಪೇಟೆಯ ಮುಹಮ್ಮದ್ ನಿಯಾಝ್ (28), ತಲಪಾಡಿ ಕೆ.ಸಿ ರೋಡ್ ನ ನಿಶಾದ್ (31), ಕಣ್ಣೂರಿನ ಮಹಮ್ಮದ್ ರಝೀನ್ (24) ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.
ಬಂಧಿತರಿಂದ 180 ಗ್ರಾಂ ತೂಕದ 9 ಲಕ್ಷರೂ. ವೌಲ್ಯದ ಎಂಡಿಎಂಎ, 2 ಮಾರುತಿ ಸ್ವಿಫ್ಟ್ ಕಾರುಗಳು, 4 ಮೊಬೈಲ್ ಫೋನ್ಗಳು, 22050 ರೂ. ನಗದು, ಪಿಸ್ತೂಲ್, ಸಜೀವ ಗುಂಡು, 2ಡ್ರಾಗನ್ ಚೂರಿಗಳು, ಡಿಜಿಟಲ್ ತೂಕದ ಮಾಪನ ಸೇರಿದಂತೆ 27.62 ಲಕ್ಷ ರೂ. ವೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳ್ಳಾಲ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿ ನಿಯಾಝ್ ಎಂಬಾತನ ವಿರುದ್ಧ ನಗರದ ಉರ್ವಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರತ ಎಎಸ್ಐಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಪ್ರಕರಣ, ಕೊಣಾಜೆ ಠಾಣೆಯಲ್ಲಿ ಕರ್ತವ್ಯ ನಿರತ ಸಿಬ್ಬಂದಿಗೆ ಹಲ್ಲೆ ಪ್ರಕರಣ, ಸುರತ್ಕಲ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಸೆನ್ ಕೆರೈ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ 2 ಪ್ರಕರಣ, ಉಡುಪಿಯ ಗಂಗೊಳ್ಳಿ ಠಾಣೆಯಲ್ಲಿ 2 ದರೋಡೆ ಪ್ರಕರಣ, ಕಂಕನಾಡಿ ನಗರ, ಕೊಣಾಜೆ ಠಾಣೆಯಲ್ಲಿ ಮಾದಕ ವಸ್ತು ಸೇವನೆಗೆ 2 ಪ್ರಕರಣಗಳು ಸೇರಿ ಒಟ್ಟು 10 ಪ್ರಕರಣಗಳು ದಾಖಲಾಗಿವೆ. ಈತ ನ್ಯಾಯಾಲಯದಿಂದ ಜಾಮೀನು ಪಡೆದು ನ್ಯಾಯಾಲಯದ ವಿಚಾರಣೆ ಸಮಯ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಾರಣ ವಾರೆಂಟ್ ಜಾರಿಯಾಗಿರುತ್ತದೆ ಎಂದು ಪೊಲೀಸ್ ಆಯುಕ್ತರು ವಿವರಿಸಿದರು.
ಮಹಮ್ಮದ್ ರಝೀನ್ ಎಂಬಾತನ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಮಾದಕ ವಸ್ತು ಮಾರಾಟಕ್ಕೆ ಸಂಬಂಧಿಸಿ ಪ್ರಕರಣ ದಾಖಲಾಗಿದೆ. ಈ ಮಾರಾಟ ಜಾಲ ಪತ್ತೆ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಪಿಎ ಹೆಗಡೆ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷರಾದ ಶ್ಯಾಮ್ ಸುಂದರ್ ಎಚ್. ಎಂ, ಪಿಎಸ್ ಐ ರಾಜೇಂದ್ರ ಬಿ., ಸುದೀಪ್ ಎಂ.ವಿ, ಶರಣಪ್ಪ ಭಂಡಾರಿ,
ನರೇಂದ್ರ ಹಾಗೂ ಸಿಸಿಬಿ ಪೊಲೀಸರು ಭಾಗವಹಿಸಿದ್ದು, ತಂಡಕ್ಕೆ 20000 ರೂ. ಬಹುಮಾನ ಘೋಷಿಸುವುದಾಗಿ ಆಯುಕ್ತರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಅಂಶುಕುಮಾರ್, ದಿನೇಶ್ ಕುಮಾರ್ ಉಪಸ್ಥಿತರಿದ್ದರು.