ಮಂಗಳೂರು: ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್ ಗಿರಿ; ಪ್ರಕರಣ ದಾಖಲು
ಆ್ಯಂಟಿ ಕಮ್ಯುನಲ್ ವಿಂಗ್ ಆರಂಭವಾದ ಬಳಿಕವೂ ಮುಂದುವರಿದ ಕೃತ್ಯ
ಪಣಂಬೂರು : ದ.ಕ. ಜಿಲ್ಲೆಯಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಆರಂಭವಾದ ಬಳಿಕವೂ ಮಂಗಳೂರು ನಗರದಲ್ಲಿ ಶುಕ್ರವಾರ ಸಂಜೆ ಅನೈತಿಕ ಪೊಲೀಸ್ ಗಿರಿ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.
ಮಂಗಳೂರಿನ ಪ್ರತಿಷ್ಠಿತ ಮೆಡಿಕಲ್ ಕಾಲೇಜೊಂದರ ವಿದ್ಯಾರ್ಥಿಗಳ ಮೇಲೆ ಅನೈತಿಕ ಪೊಲೀಸ್ ಗಿರಿ ಮಾಡಿರುವುದಾಗಿ ತಿಳಿದು ಬಂದಿದೆ.
ಶುಕ್ರವಾರ ಸಂಜೆ 5:30 ಸುಮಾರಿಗೆ ಪಣಂಬೂರು ಬೀಚ್ ಗೆ ಬಂದಿದ್ದ ವಿದ್ಯಾರ್ಥಿಗಳನ್ನು ವೀಕ್ಷಿಸುತ್ತಿದ್ದ ಇಬ್ಬರು ಅಪರಿಚಿತರು ತಮ್ಮಮೊಬೈಲ್ ನಲ್ಲಿ ವಿದ್ಯಾರ್ಥಿಗಳ ಚಲನವಲನಗಳನ್ನು ಚಿತ್ರೀಕರಿಸಿದ್ದರು. ಆದರೆ ಇದನ್ನು ಗಮನಿಸಿದ್ದ ಯುವಕರು ತಮ್ಮಪಾಡಿಗೆ ಇದ್ದರು. ಸುಮಾರು 6 ಗಂಟೆಯ ಸುಮಾರಿಗೆ ಯುವಕರು ಬೈಕ್ ನಲ್ಲಿ ಹಿಂದಿರುಗಿದರೆ ಯುವತಿಯರು ಬಸ್ ನಲ್ಲಿ ಹಿಂದಿರುಗಿದ್ದರು ಎನ್ನಲಾಗಿದೆ.
ವಿದ್ಯಾರ್ಥಿನಿಯರ ಪೈಕಿ ಕ್ರಿಶ್ಚಿಯನ್ ಸಮುದಾಯದ ಯುವತಿ ನಗರದ ಚಿಲಿಂಬಿಯಲ್ಲಿ ಬಸ್ ನಿಂದ ಇಳಿದು ತನ್ನ ಪಿಜಿ ಕಡೆ ತೆರಳುತ್ತಿದ್ದ ವೇಳೆ ಪಣಂಬೂರು ಬೀಚ್ ನಲ್ಲಿ ಹಿಂಬಾಲಿಸುತ್ತಿದ್ದ ಅದೇ ಅಪರಿಚಿತರು ಹಿಂಬಾಲಿಸಿಕೊಂಡು ಬಂದು ಯುವತಿಯ ಮೈಮೇಲೆ ಕೈಹಾಕಿ ಬೆದರಿಸಿದ್ದು, " ಕೇರಳ ಸ್ಟೋರಿ ನೊಡಿಯೂ ನಿಮಗೆ ಬುದ್ಧಿ ಬರುವುದಿಲ್ವಾ" ಎಂದು ಅವಾಚ್ಯ ಶಬ್ದಗಗಳಿಂದ ಬೈದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾಗಿ ತಿಳಿದು ಬಂದಿದೆ.
ಈ ಸಂಬಂಧ ಸಂತ್ರಸ್ತ ವಿದ್ಯಾರ್ಥಿನಿಯರು ಉರ್ವಸ್ಟೋರ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.