ಮಣಿಪಾಲ: ಮಾಹೆ ವತಿಯಿಂದ 10,000 ಗಿಡ ನೆಡುವ ಕಾರ್ಯಕ್ರಮಕ್ಕೆ ಸಾಲುಮರದ ತಿಮ್ಮಕ್ಕ ಚಾಲನೆ
ಮಣಿಪಾಲ, ಜು.23: ಭಾರತ ಸರಕಾರದ ನಮಾಮಿ ಗಂಗೆ ಯೋಜನೆಯಡಿ ಸ್ವರ್ಣ ನದಿ ಜಲಾನಯನ ಪ್ರದೇಶದ ಅಭಿವೃದ್ದಿಗೆ ಮಣಿಪಾಲ ಮಾಹೆ ಹಮ್ಮಿಕೊಂಡಿರುವ 10,000 ಗಿಡ ನೆಡುವ ಕಾರ್ಯಕ್ರಮಕ್ಕೆ ಪ್ರದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಶನಿವಾರ ಮಣಿಪಾಲ ತಾಂತ್ರಿಕ ವಿದ್ಯಾಲಯ(ಎಂಐಟಿ) ದಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಮುಂದಿನ ಭವಿಷ್ಯಕ್ಕಾಗಿ ಪ್ರಕೃತಿಯ ಉಳಿವು, ಸಂರಕ್ಷಣೆ ಮಾಡಬೇಕಾಗಿ ಕರೆ ನೀಡಿದರು. ಮಣಿಪಾಲ ವಿಶ್ವವಿದ್ಯಾಲಯದ ಪರಿಸರದ ಮೇಲಿನ ಕಾಳಜಿಯನ್ನು ಶ್ಲಾಘಸಿದರು ಹಾಗೂ ಇನ್ನೂ ಹೆಚ್ಚಿನ ಮಟ್ಟದಲ್ಲಿ ಮುಂದುವರಿಸಲು ಕೋರಿದರು.
ತಿಮ್ಮಕ್ಕ ಅವರ ಪುತ್ರ ಉಮೇಶ್ ಮಾತನಾಡಿ, ನಮ್ಮೆಲ್ಲರ ಉತ್ಸಾಹದ ಚಿಲುಮೆ ಯಾಗಿರುವ ತಿಮ್ಮಕ್ಕ ಅನಕ್ಷರಸ್ತರಾಗಿದ್ದರೂ ಪರಿಸರದ ಬಗ್ಗೆ ಅಪಾರ ನಿಸ್ವಾರ್ಥ ಕಾಳಜಿ ಹೊಂದಿ ಮಾಡಿರುವ ಕೆಲಸ ಯುವಕರಿಗೆ ಪ್ರೇರಣೆಯಾಗ ಬೇಕು. ನಾವೆಲ್ಲರೂ ವಿದ್ಯಾಭ್ಯಾಸ ಹೊಂದಿದವಾರಾಗಿ ಕನಿಷ್ಠ ಪಕ್ಷ ತಿಮ್ಮಕ್ಕನವರ ಹಾದಿಯಲ್ಲಿ ಹೋಗುವ ಪ್ರಯತ್ನವಾದರೂ ಮಾಡಿದರೆ ಮಾತ್ರ ಮುಂದಿನ ಜನಾಂಗಕ್ಕೆ ಸ್ವಚ್ಛ ಪರಿಸರ ನೀಡಲು ಸಾಧ್ಯ ಎಂದರು.
ತಿಮ್ಮಕ್ಕನವರ ದಿವ್ಯ ಹಸ್ತದಿಂದ ಕೊಟ್ಟ ಗಿಡವನ್ನು ಎಂಐಟಿ ಆವರಣದಲ್ಲಿ ನೆಡಲಾಯಿತು. ಈ ಸಂಧರ್ಭ ಎಂಐಟಿಯ ಜಂಟಿ ನಿರ್ದೇಶಕ ಡಾ.ಸೋಮ ಶೇಖರ್ ಭಟ್, ಡಾ.ನಾರಾಯಣ ಶೆಣೈ, ಮಹೇಶ್ ಠಾಕೂರ್, ಎಂಐಟಿಯ ಸಹ ನಿರ್ದೇಶಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ದೇಶಕ ಡಾ.ಅನಿಲ್ ರಾಣಾ ಸ್ವಾಗತಿಸಿದರು. ಡಾ.ರಾಘವೇಂದ್ರ ಹೊಳ್ಳ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.