ಬ್ರಿಜ್ಭೂಷಣ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಅಪ್ರಾಪ್ತೆ, ಕುಟುಂಬದ ಮೇಲೆ ಒತ್ತಡವಿದೆ: ಸಾಕ್ಷಿ ಮಲಿಕ್
ಫೋಟೋ: PTI
ಹೊಸದಿಲ್ಲಿ: ಕುಸ್ತಿ ಫೆಡರೇಷನ್ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿದ್ದ ಅಪ್ರಾಪ್ತೆ ಮತ್ತಾಕೆಯ ಕುಟುಂಬದ ಮೇಲೆ ಬಹಳಷ್ಟು ಒತ್ತಡವಿದೆ ಎಂದು ಕುಸ್ತಿಪಟು ಸಾಕ್ಷಿ ಮಲಿಕ್ ಹೇಳಿದ್ದಾರೆ.
ಸಿಂಗ್ ಮೇಲೆ ಕ್ರಮಕ್ಕೆ ಆಗ್ರಹಿಸಿ ಹಲವು ದಿನಗಳ ಕಾಲ ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳಿಗೆ ದಿಲ್ಲಿ ಪೊಲೀಸರು ಸಿಂಗ್ ವಿರುದ್ಧ ಸಲ್ಲಿಸಿರುವ ಚಾರ್ಜ್ಶೀಟ್ ನಿರಾಸೆ ತಂದಿದೆ.
ಸದ್ಯದಲ್ಲಿಯೇ ತಮ್ಮ ಹೋರಾಟದ ಮುಂದಿನ ಕ್ರಮದ ಕುರಿತಂತೆ ನಿರ್ಧಾರ ಕೈಗೊಳ್ಳುವುದಾಗಿ ಒಲಿಂಪಿಕ್ಸ್ ಕಂಚು ವಿಜೇತೆ ಸಾಕ್ಷಿ ಮಲಿಕ್ ಹೇಳಿದ್ದಾರೆ.
“ಒಂದೆರಡು ದಿನಗಳಲ್ಲಿ ನಾವು ಕಠಿಣ ನಿರ್ಧಾರ ಕೈಗೊಳ್ಳಬೇಕಿದೆ. ಸದ್ಯಕ್ಕೆ ನಮ್ಮ ಪ್ರತಿಭಟನೆಯನ್ನು ತಡೆಹಿಡಿದಿದ್ದೇವೆ,” ಎಂದು ಅವರು ಹೇಳಿದರು.
ಚಾರ್ಜ್ ಶೀಟ್ ಪ್ರತಿ ಪಡೆಯಲು ತಮ್ಮ ವಕೀಲರು ಅರ್ಜಿ ಸಲ್ಲಿಸಿದ್ದಾರೆ ಎಂದು ಸಾಕ್ಷಿ ಹೇಳಿದರು.
ಸಿಂಗ್ ವಿರುದ್ಧ ಚಾರ್ಜ್ಶೀಟ್ ಹೊರತಾಗಿ ದಿಲ್ಲಿ ಪೊಲೀಸರು ಸಿಂಗ್ ವಿರುದ್ಧದ ಪೋಕ್ಸೋ ಪ್ರಕರಣ ರದ್ದತಿ ಕುರಿತಂತೆ 500 ಪುಟಗಳ ರದ್ದತಿ ವರದಿ ಸಲ್ಲಿಸಿದ್ದಾರೆ.
ಸಿಂಗ್ ವಿರುದ್ಧ ಸಲ್ಲಿಸಲಾಗಿರುವ 1082 ಪುಟಗಳ ಚಾರ್ಚ್ಶೀಟ್ ಅನ್ನು ಓದದೆ ಅದರ ಕುರಿತು ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ಪ್ರತಿಭಟನಾಕಾರರೊಬ್ಬರು ಹೇಳಿದ್ದಾರೆ.
ಕುಸ್ತಿಪಟುಗಳು ಯಾವುದೇ ನಿರ್ಧಾರ ಕೈಗೊಂಡರೂ ರೈತರ ಸಂಘಟನೆ ಅವರಿಗೆ ಬೆಂಬಲವಾಗಿ ನಿಲ್ಲುವುದು ಎಂದು ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಜೇಶ್ ಟಿಕಾಯತ್ ಹೇಳಿದ್ದಾರೆ.