ಕೊಡಗಿನಲ್ಲಿ ಮುಂಗಾರು ವಿಳಂಬ; ಬರಿದಾದ ಕಾವೇರಿ
ಮಡಿಕೇರಿ, ಜೂ.18: ಕಾವೇರಿ ನದಿಯ ಉಗಮ ಸ್ಥಾನ ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಆರಂಭಗೊಂಡಿದ್ದರೂ ನಿರೀಕ್ಷಿತ ಮಳೆಯಾಗುತ್ತಿಲ್ಲ. ವಾರ್ಷಿಕ 150ರಿಂದ 250 ಇಂಚಿಗೂ ಅಧಿಕ ಮಳೆಯಾಗುವ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ವಿಳಂಬವಾಗಿದ್ದು, ಕಾವೇರಿ ಒಡಲು ಬರಿದಾಗಿದೆ.
ಬಿಸಿಲ ನಡುವೆಯೇ ತುಂತುರು ಮಳೆಯಾಗುತ್ತಿದ್ದು, ಮೋಡ ಕವಿದ ವಾತಾವರಣದೊಂದಿಗೆ ಚಳಿಯೂ ಇದೆ. ಆದರೆ, ಮಳೆಗಾಲದ ಲಕ್ಷಣ ಗೋಚರಿಸುತ್ತಿಲ್ಲ. ಮಳೆ ವಿಳಂಬದಿಂದ ಕೃಷಿಕ ವರ್ಗ ಆತಂಕಗೊಂಡಿದೆ. ಪಟ್ಟಣ ಪ್ರದೇಶಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲೂ ಜಲಮೂಲಗಳು ನೀರಿನ ಕೊರತೆಯನ್ನು ಎದುರಿಸುತ್ತಿವೆ. ಹಸಿರ ಆಹಾರದ ಕೊರತೆಯಿಂದ ವನ್ಯಜೀವಿಗಳು ನಾಡಿಗೆ ಲಗ್ಗೆ ಇಡುತ್ತಿವೆ.
ಜಿಲ್ಲೆಯ ವಿವಿಧೆಡೆ ಕಾವೇರಿ ಒಡಲು ಬರಿದಾಗಿದ್ದು, ನೀರಿನ ಹರಿವೇ ಇಲ್ಲದೆ ನದಿಯ ಕಲ್ಲುಗಳು ಬಿಸಿಲಿನಲ್ಲಿ ಒಣಗುತ್ತಿವೆ. ರಾಜ್ಯ ಮತ್ತು ಹೊರ ರಾಜ್ಯದ ಕೋಟ್ಯಂತರ ಮಂದಿಗೆ ಕುಡಿಯುವ ನೀರನ್ನು ಒದಗಿಸುತ್ತಿರುವ ಕಾವೇರಿ ಮಳೆಯಿಲ್ಲದೆ ಬಡವಾಗಿದೆ. ಇನ್ನು ಒಂದು ವಾರದಲ್ಲಿ ಉತ್ತಮ ಮಳೆಯಾಗದಿದ್ದರೆ ಪರಿಸ್ಥಿತಿ ಕೈಮೀರಿ ಕುಡಿಯುವ ನೀರಿಗೂ ಬರ ಬರುವ ಸಾಧ್ಯತೆಗಳಿದೆ.
ಪ್ರತಿವರ್ಷ ಜೂನ್ ಮೊದಲ ವಾರದಿಂದಲೇ ಸುರಿಯುತ್ತಿದ್ದ ಮಳೆ ಕಳೆದ ಕೆಲವು ವರ್ಷಗಳಿಂದ ತನ್ನ ವೇಳಾಪಟ್ಟಿಯನ್ನೇ ಬದಲಾಯಿಸಿಕೊಂಡು ಬಿಟ್ಟಿದೆ. ಈ ಬಾರಿಯಂತೂ ಬಿಸಿಲಿನ ಅತಿರೇಕಕ್ಕೆ ಜನ ಬೇಸತ್ತಿದ್ದು, ಮಳೆಗಾಗಿ ಎದುರು ನೋಡುತ್ತಿದ್ದಾರೆ. ಜುಲೈ ತಿಂಗಳಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಗಳಿರುವುದರಿಂದ ಜಿಲ್ಲಾಡಳಿತ ಅಗತ್ಯ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಂಡಿದೆ.