ಕಾಂಗ್ರೆಸ್ಸಿನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಜೊತೆ ವೇದಿಕೆ ಹಂಚಿಕೊಂಡು ಶ್ಲಾಘಿಸಿದ ನಿತಿನ್ ಗಡ್ಕರಿ
ನಿತಿನ್ ಗಡ್ಕರಿ, Photo : PTI
ಪುಣೆ: ಪುಣೆ ನಗರದ ಸಮೀಪ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ. ಮಹಾರಾಷ್ಟ್ರದ ದೇವಸ್ಥಾನ ಪಟ್ಟಣವಾದ ಪಂಢರಪುರಕ್ಕೆ ಪ್ರತಿವರ್ಷ ತೀರ್ಥಯಾತ್ರೆಗೈಯುವ ಸಿಂಗ್ ಅವರನ್ನು ಶ್ಲಾಘಿಸಿದ್ದಾರೆ.
ಸೋಲಾಪುರ ಜಿಲ್ಲೆಯಲ್ಲಿ ವಿಠ್ಠಲ ಮತ್ತು ರುಕ್ಮಿಣಿ ದೇವಿಯ ಪ್ರಸಿದ್ಧ ದೇವಾಲಯವಿರುವ ಪಂಢರಪುರಕ್ಕೆ ಸಿಂಗ್ ಪ್ರತಿ ವರ್ಷ ಆಷಾಢ ಏಕಾದಶಿಯಂದು ದೇವರಿಗೆ ಪ್ರಾರ್ಥನೆ ಸಲ್ಲಿಸಲು ಭೇಟಿ ನೀಡುತ್ತಾರೆ.
ಪುಣೆ ಬಳಿಯ ಪಿಂಪ್ರಿ-ಚಿಂಚ್ವಾಡ್ ನಲ್ಲಿ ದಿವಂಗತ ಕಾಂಗ್ರೆಸ್ ನಾಯಕ ರಾಮಕೃಷ್ಣ ಮೋರೆ ಅವರ ಪುಸ್ತಕವನ್ನು ಬಿಡುಗಡೆ ಮಾಡಲು ಗಡ್ಕರಿ ಹಾಗೂ ಸಿಂಗ್ ಗುರುವಾರ ಒಟ್ಟಿಗೆ ಸೇರಿದರು.
ಗುರುವಾರ ಆಚರಿಸಲಾದ ಆಷಾಢ ಏಕಾದಶಿಯಂದು ಪಂಢರಪುರಕ್ಕೆ ವಾರ್ಷಿಕ ತೀರ್ಥಯಾತ್ರೆ ಕೈಗೊಂಡಿದ್ದಕ್ಕಾಗಿ ತಮ್ಮ ಭಾಷಣದಲ್ಲಿ ದಿಗ್ವಿಜಯ ಸಿಂಗ್ ಅವರನ್ನು ನಿತಿನ್ ಗಡ್ಕರಿ ಅವರು ಶ್ಲಾಘಿಸಿದರು.
"ನಾನು ನಿಮಗಿಂತ ಚಿಕ್ಕವನಾಗಿದ್ದರೂ ನಡೆಯಲು ನನಗೆ ಅಂತಹ ಧೈರ್ಯ ಬರುವುದಿಲ್ಲ. ಆದರೆ ನೀವು ತೀರ್ಥಯಾತ್ರೆಯ ಸಮಯದಲ್ಲಿ ತುಂಬಾ ನಡೆದಿದ್ದೀರಿ ... ನಾನು ನಿಮಗೆ ಅಭಿನಂದನೆಗಳು ಹಾಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ" ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಹೇಳಿದರು. .
ಗಡ್ಕರಿ ಅವರು ನಡೆಯಲು ಪ್ರಯತ್ನಿಸಬೇಕು. ಈ ಮೂಲಕ ಅವರು ನಿಯಮಿತವಾಗಿ ಭಾಗವಹಿಸಲು ಆರಂಭಿಸಬೇಕು ಎಂದು ಸಿಂಗ್ ಪ್ರತಿಕ್ರಿಯಿಸಿದರು.