ಏಕರೂಪ ನಾಗರಿಕ ಸಂಹಿತೆ ಕುರಿತು ಪ್ರಧಾನಿ ಹೇಳಿಕೆ: ತುರ್ತು ಸಭೆ ನಡೆಸಿದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ
ಹೊಸದಿಲ್ಲಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ ಕೆಲವೇ ಗಂಟೆಗಳ ನಂತರ, ಭಾರತದ ಉನ್ನತ ಮುಸ್ಲಿಂ ಸಂಸ್ಥೆಯಾದ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿನ್ನೆ ರಾತ್ರಿ ತುರ್ತು ಸಭೆ ನಡೆಸಿತು.
ನಿನ್ನೆ ಭೋಪಾಲ್ ನಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಒಂದೇ ದೇಶದಲ್ಲಿ ಎರಡು ಕಾನೂನುಗಳು ಕಾರ್ಯನಿರ್ವಹಿಸುವುದಿಲ್ಲ. ಸಂವಿಧಾನವು ಎಲ್ಲಾ ನಾಗರಿಕರಿಗೆ ಸಮಾನ ಹಕ್ಕುಗಳನ್ನು ಉಲ್ಲೇಖಿಸುತ್ತದೆ ಹಾಗೂ ಸುಪ್ರೀಂ ಕೋರ್ಟ್ ನ ತೀರ್ಪುಗಳು ಕೂಡ ಏಕರೂಪದ ಕಾನೂನುಗಳನ್ನು ಜಾರಿಗೊಳಿಸಲು ಕೇಳಿಕೊಂಡಿವೆ ಎಂದು ಪ್ರತಿಪಾದಿಸಿದರು.
ಮುಸ್ಲಿಂ ಕಾನೂನು ಮಂಡಳಿಯ ಸಭೆಯು ವರ್ಚುವಲ್ ಆಗಿ ಸುಮಾರು ಮೂರು ಗಂಟೆಗಳ ಕಾಲ ನಡೆಯಿತು. ಯಾವಾಗಲೂ ಬಿಜೆಪಿ ಪ್ರಣಾಳಿಕೆಗಳ ಭಾಗವಾಗಿರುವ ಕಾರ್ಯಸೂಚಿಗೆ ಆದ್ಯತೆ ನೀಡುವ ಪ್ರಧಾನಿ ಮೋದಿಯವರ ಹೇಳಿಕೆಗಳ ಸಂದರ್ಭದಲ್ಲಿ ಯುಸಿಸಿಯ ಕಾನೂನು ಅಂಶಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.
ವಕೀಲರು ಮತ್ತು ತಜ್ಞರು ನೀಡಿದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಕಾನೂನು ಆಯೋಗಕ್ಕೆ ಕರಡು ಪ್ರಸ್ತಾವನೆಯನ್ನು ಸಲ್ಲಿಸಲು ಮುಸ್ಲಿಂ ಸಂಸ್ಥೆ ನಿರ್ಧರಿಸಿದೆ.
ಕಾನೂನು ಆಯೋಗವು ಏಕರೂಪ ನಾಗರಿಕ ಸಂಹಿತೆಯ ಕುರಿತು ಹೊಸ ಸಮಾಲೋಚನೆ ಪ್ರಕ್ರಿಯೆಯನ್ನು ಆರಂಭಿಸಿದ್ದು ಸರಕಾರವು ಶೀಘ್ರದಲ್ಲೇ ಕರಡು ಮಸೂದೆಯನ್ನು ತರಲು ಯೋಜಿಸುತ್ತಿದೆ ಎಂಬ ವರದಿಗಳ ನಡುವೆ ಸಂಬಂಧಫಟ್ಟವರಿಂದ ಅಭಿಪ್ರಾಯಗಳನ್ನು ಕೋರಿದೆ.