ತಮ್ಮ ಗೆಲುವಿನ ನಂತರ ಸಂಭ್ರಮಾಚರಣೆ ಮಾಡಿದ್ದ ಆಪ್ ನಾಯಕಿ ಅತಿಶಿ : ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದ ಸ್ವಾತಿ ಮಲಿವಾಲ್

ಸ್ವಾತಿ ಮಲಿವಾಲ್ (Photo: PTI)
ಹೊಸದಿಲ್ಲಿ: ಕಲ್ಕಜಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪ್ರತಿಸ್ಪರ್ಧಿ ರಮೇಶ್ ಬಿಧೂರಿ ವಿರುದ್ಧ ಗೆಲುವು ಸಾಧಿಸಿದ ನಂತರ ಸಂಭ್ರಮಾಚರಣೆ ಮಾಡಿದ್ದ ಆಪ್ ನಾಯಕಿ ಅತಿಶಿಯ ವಿರುದ್ಧ ರವಿವಾರ ವಾಗ್ದಾಳಿ ನಡೆಸಿದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್, ಇದು ನಾಚಿಕೆಗೇಡು ಎಂದು ಟೀಕಿಸಿದರು. ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯ, ಸತ್ಯೇಂದ್ರ ಜೈನ್, ಸೌರಭ್ ಭಾರದ್ವಾಜ್ ರಂತಹ ಘಟಾನುಘಟಿ ಆಪ್ ನಾಯಕರು ಬಿಜೆಪಿ ಅಭ್ಯರ್ಥಿಗಳೆದುರು ಪರಾಭವಗೊಂಡ ನಂತರ, ಸ್ವಾತಿ ಮಲಿವಾಲ್ ರಿಂದ ಈ ಟೀಕೆ ವ್ಯಕ್ತವಾಗಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸ್ವಾತಿ ಮಲಿವಾಲ್, “ಇದೆಂತಹ ನಾಚಿಕೆಗೇಡಿನ ಪ್ರದರ್ಶನ? ಪಕ್ಷವು ಪರಾಭವಗೊಂಡಿದೆ. ಪಕ್ಷದ ಎಲ್ಲ ಉನ್ನತ ನಾಯಕರು ಸೋಲು ಅನುಭವಿಸಿದ್ದಾರೆ. ಹೀಗಿದ್ದೂ, ಅತಿಶಿ ಮರ್ಲೇನಾ ಈ ರೀತಿ ಸಂಭ್ರಮಾಚರಣೆ ಮಾಡುವುದೆ?” ಎಂದು ಕುಟುಕಿದ್ದಾರೆ.
ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅವರು, “ಅತಿಶಿಗೆ ನಾಚಕೆಯಾಗಬೇಕು. ಆಕೆಯ ಪಕ್ಷವು ಭಾರಿ ಪರಾಭವ ಅನುಭವಿಸಿದೆ. ಅವರ ಎಲ್ಲ ಪ್ರಮುಖ ನಾಯಕರು ಸೋತಿದ್ದಾರೆ. ಹೀಗಿದ್ದೂ, ಆಕೆ ತನ್ನ ಗೆಲುವನ್ನು ಆಚರಿಸಲು ರೋಡ್ ಶೋ ನಡೆಸಿದ್ದಾರೆ ಹಾಗೂ ಈ ಸಂದರ್ಭದಲ್ಲಿ ನೃತ್ಯವನ್ನೂ ಮಾಡಿದ್ದಾರೆ. ಸಂಭ್ರಮಾಚರಣೆ ಮಾಡುವಂಥದ್ದು ಏನಿದೆ? ಆಕೆಯ ಪಕ್ಷದ ಸೋಲನ್ನೇ?” ಎಂದು ಪ್ರಶ್ನಿಸಿದ್ದಾರೆ.
ಈ ನಡುವೆ, ಶನಿವಾರ ತಮ್ಮ ಪಕ್ಷದ ಸೋಲನ್ನು ಒಪ್ಪಿಕೊಂಡಿದ್ದ ಅತಿಶಿ, “ನನ್ನಲ್ಲಿ ವಿಶ್ವಾಸವಿರಿಸಿದ್ದಕ್ಕೆ ಕಲ್ಕಜಿ ಮತದಾರರಿಗೆ ಧನ್ಯವಾದ ಸಲ್ಲಿಸುತ್ತೇನೆ. ನಾವು ಜನರ ತೀರ್ಪನ್ನು ಅಂಗೀಕರಿಸುತ್ತೇವೆ. ನಾನು ಗೆದ್ದಿದ್ದೇನೆ, ಆದರಿದು ಸಂಭ್ರಮಾಚರಣೆ ಮಾಡುವ ಸಮಯವಲ್ಲ. ಬಿಜೆಪಿ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಹೇಳಿದ್ದರು.