ಮಗುವಿನ ಶವವನ್ನು 150 ಕಿಲೋಮೀಟರ್ ವರೆಗೆ ಬಸ್‍ನಲ್ಲೇ ಕೊಂಡುಹೋದ ಪೋಷಕರು..!
ಭೋಪಾಲ್: ಆ್ಯಂಬುಲೆನ್ಸ್ ವೆಚ್ಚ ಭರಿಸಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ನವಜಾತ ಶಿಶುವಿನ ಶವವನ್ನು ಚೀಲದಲ್ಲಿ ತುಂಬಿ, ಬಸ್ಸಿನಲ್ಲೇ 150 ಕಿಲೋಮೀಟರ್ ದೂರದ ತಮ್ಮ ಹಳ್ಳಿಗೆ ಪ್ರಯಾಣಿಸಿದ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದ ದಿಂದೋರಿಯಿಂದ ವರದಿಯಾಗಿದೆ.
"ಆ್ಯಂಬುಲೆನ್ಸ್ ವೆಚ್ಚ ಭರಿಸುವ ಸ್ಥಿತಿಯಲ್ಲಿ ನಾವಿಲ್ಲ. ಜಬಲ್ಪುರ ವೈದ್ಯಕೀಯ ಕಾಲೇಜಿನ ವೈದ್ಯರ ಬಳಿ ಆ್ಯಂಬುಲೆನ್ಸ್‍ಗಾಗಿ ಕೋರಿಕೊಂಡಾಗ ನಿರಾಕರಿಸಿದರು. ಟ್ಯಾಕ್ಸಿ ಬಾಡಿಗೆಗೆ ಪಡೆಯಲೂ ಹಣ ಇರಲಿಲ್ಲ. ಆದ್ದರಿಂದ ಶವವನ್ನು ಒಂದು ಚೀಲದಲ್ಲಿ ತುಂಬಿಕೊಂಡು ದಿಂದೋರಿಗೆ ಬಸ್ಸಿನಲ್ಲಿ ಬಂದೆವು" ಎಂದು ಸುರತಿಯಾ ಬಾಯಿ ಹೇಳಿದ್ದಾರೆ.
ಆದರೆ ಮಗುವಿನ ಕುಟುಂಬದವರು ಆ್ಯಂಬುಲೆನ್ಸ್ ವ್ಯವಸ್ಥೆಯನ್ನು ಕೇಳಲಿಲ್ಲ ಎಂದು ಆಡಳಿತ ವರ್ಗದ ಸಮಜಾಯಿಷಿ ನೀಡಿದೆ ಎನ್ನಲಾಗಿದೆ.
ಜೂನ್ 13ರಂದು ಸುರಾತಿಯಾ ಬಾಯಿಯವರ ಸಹೋದರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ದಿಂದೋರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆರಿಗೆಯ ಬಳಿಕ ನವಜಾತ ಶಿಶುವಿನ ಆರೋಗ್ಯ ಸ್ಥಿತಿ ಕ್ಷೀಣಿಸತೊಡಗಿದ ತಕ್ಷಣವೇ ಮಗುವನ್ನು 150 ಕಿಲೋಮೀಟರ್ ದೂರದ ಜಬಲ್ಪುರ ಎನ್‍ಎಸ್‍ಸಿಬಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು. ಆದರೆ ಮಗುವನ್ನು ರಕ್ಷಿಸುವುದು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.
"ಆಸ್ಪತ್ರೆಯಿಂದ ಬಿಡುಗಡೆ ಮಾಡುವಾಗ ಮಗು ಜೀವಂತ ಇತ್ತು. ಇದು ವೈದ್ಯಕೀಯ ಸಲಹೆಯ ವಿರುದ್ಧವಾಗಿ ಆಸ್ಪತ್ರೆಯಿಂದ ತೆರಳಿದ ಪ್ರಕರಣ" ಎಂದು ಜಬಲ್ಪುರ ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.
"ಕುಟುಂಬ ಆ್ಯಂಬುಲೆನ್ಸ್ ಗೆ ಬೇಡಿಕೆ ಸಲ್ಲಿಸಿದ್ದರೆ ಆ ಸೌಲಭ್ಯ ಕಲ್ಪಿಸಬಹುದಿತ್ತು. ಆದರೆ ಕುಟುಂಬದವರು ಯಾವುದೇ ಬೇಡಿಕೆ ಸಲ್ಲಿಸದೇ ಮಗುವನ್ನು ಕೊಂಡೊಯ್ದರು" ಎಂದು ವೈದ್ಯಕೀಯ ಅಧೀಕ್ಷಕ ಡಾ.ಅರವಿಂದ್ ಶರ್ಮಾ ಹೇಳಿದ್ದಾರೆ.