ಚಿಕ್ಕಮಗಳೂರು: ಮದ್ಯಪಾನ ಮಾಡಿ ಶಾಸಕರಿಗೆ ಮನವಿ ಪತ್ರ ನೀಡಲು ಬಂದ ವಸತಿ ಶಾಲೆಯ ಪ್ರಾಂಶುಪಾಲ ಅಮಾನತು
ಚಿಕ್ಕಮಗಳೂರು, ಜೂ.26: ಮದ್ಯಪಾನ ಮಾಡಿದ್ದ ಪ್ರಾಂಶುಪಾಲರೊಬ್ಬರು ಶೃಂಗೇರಿ ಕ್ಷೇತ್ರದ ಶಾಸಕ ರಾಜೇಗೌಡ ಅವರಿಗೆ ಮನವಿ ಪತ್ರ ನೀಡಲು ಬಂದಿದ್ದು, ಇದನ್ನು ಗಮನಿಸಿದ ಶಾಸಕ ಪ್ರಾಂಶುಪಾಲರನ್ನು ನಡು ರಸ್ತೆಯಲ್ಲೇ ತರಾಟೆಗೆ ಪಡೆದಿದ್ದಲ್ದದೇ ಆಸ್ಪತ್ರೆಗೆ ಕಳಿಸಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಸಿಂಸ ಗ್ರಾಮದಲ್ಲಿ ನಡೆದಿದೆ.
ಎನ್.ಆರ್.ಪುರ ತಾಲೂಕಿನ ಸಿಂಸ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಲೋಕನಾಯಕ್ ಎಂಬವರು ವಸತಿ ಶಾಲೆಯ ಸಮಸ್ಯೆಗಳ ಬಗ್ಗೆ ಶಾಸಕ ಟಿ.ಡಿ. ರಾಜೇಗೌಡರಿಗೆ ಮನವಿ ನೀಡಲು ಆಗಮಿಸಿದ್ದರು. ಈ ವೇಳೆ ಪ್ರಾಂಶುಪಾಲ ಲೋಕನಾಯಕ್ ಅವರು ಮದ್ಯಪಾನ ಮಾಡಿರುವುದನ್ನು ಶಾಸಕ ರಾಜೇಗೌಡ ಗಮನಿಸಿದ್ದಾರೆ. ಇದನ್ನು ಕಂಡು ಕುಪಿತರಾದ ಶಾಸಕ ರಾಜೇಗೌಡ, ರಸ್ತೆ ಮಧ್ಯೆಯೇ ಫುಲ್ ಗರಂ ಆಗಿದ್ದರು. ಸ್ಥಳದಿಂದಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಪ್ರಿನ್ಸಿಪಾಲರನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು.
ಬಳಿಕ ಸ್ಥಳಕ್ಕೆ ಪೊಲೀಸರನ್ನು ಕರೆಸಿ, ಬ್ರೀಥಿಂಗ್ ಆಲ್ಕೋಹಾಲ್ ಅನಲೈಸರ್ ಮೂಲಕ ಪ್ರಾಂಶುಪಾಲರನ್ನು ತಪಾಸಣೆ ನಡೆಸಿದ್ದು, ತಪಾಸಣೆಯಲ್ಲಿ ಮದ್ಯಪಾನ ಮಾಡಿರುವುದು ಪತ್ತೆಯಾಗಿದೆ. ಈ ವೇಳೆ ಶಾಸಕ ರಾಜೇಗೌಡ ಮತ್ತೆ ಪ್ರಾಂಶುಪಾಲರನ್ನು ತರಾಟೆಗೆ ಪಡೆದು, ಶಿಕ್ಷಕರೇ ಹೀಗೆ ವರ್ತಿಸಿದರೆ ಮಕ್ಕಳ ಪಾಡೇನು ಎಂದು ಅಸಮಾಧಾನ ಹೊರಹಾಕಿದರು.
ಕೂಡಲೇ ಸರಕಾರಿ ಆಸ್ಪತ್ರೆಗೆ ಕರೆ ಮಾಡಿ ಆಂಬುಲೆನ್ಸ್ ಕರೆಸಿ ಪ್ರಿನ್ಸಿಪಾಲ್ ಲೋಕ ನಾಯಕ್ ಅವರನ್ನು ವೈದ್ಯಕೀಯ ಪರೀಕ್ಷೆಗೆಂದು ಎನ್.ಆರ್. ಪುರ ಸರಕಾರಿ ಆಸ್ಪತ್ರೆಗೆ ಕಳಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 6 ರಿಂದ 10ನೇ ತರಗತಿವರೆಗೆ 240 ಜನ ಹೆಣ್ಣು ಮಕ್ಕಳಿದ್ದಾರೆ. ಈಗ ಮತ್ತೆ ಹೊಸದಾಗಿ 40 ಮಕ್ಕಳು ದಾಖಲಾಗಿದ್ದಾರೆ. ಹಾಸ್ಟೆಲ್‍ನಲ್ಲಿ ವಾರ್ಡನ್ ಇಲ್ಲ. ವಾರ್ಡನ್ ಹಾಗೂ ಪ್ರಿನ್ಸಿಪಾಲ್ ಎರಡು ಹುದ್ದೆಯನ್ನು ಲೋಕ ನಾಯಕ್ ಅವರೇ ನಿರ್ವಹಿಸುತ್ತಿದ್ದಾರೆ. ಸುಮಾರು 300 ಜನ ಹೆಣ್ಣು ಮಕ್ಕಳಿರುವ ವಸತಿ ಶಾಲೆಯಲ್ಲಿ ಇಂತಹ ಪ್ರಿನ್ಸಿಪಾಲ್ ಇದ್ದರೆ ಹೆಣ್ಣು ಮಕ್ಕಳ ಗತಿ ಏನೆಂದು ಶಾಸಕ ರಾಜೇಗೌಡ ಪ್ರಿನ್ಸಿಪಾಲ್ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಕೂಡಲೇ ಅಮಾನತು ಮಾಡುವಂತೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ.