ಉಡುಪಿ: ಸೌಜನ್ಯ ಅತ್ಯಾಚಾರ, ಕೊಲೆಪ್ರಕರಣದ ನ್ಯಾಯಬದ್ಧ ತನಿಖೆಗೆ ಆಗ್ರಹಿಸಿ ಪ್ರತಿಭಟನೆ
ಉಡುಪಿ, ಜು.23: ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನ್ಯಾಯ ಬದ್ಧವಾಗಿ ಮರುತನಿಖೆ ನಡೆಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವ ಸೇನೆ ನೇತೃತ್ವದಲ್ಲಿ ಉಡುಪಿಯ ಸರ್ವಿಸ್ ಬಸ್ ನಿಲ್ದಾಣ ಸಮೀಪದ ಬೋರ್ಡ್ ಹೈಸ್ಕೂಲ್ ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮೈಸೂರಿನ ಒಡನಾಡಿ ಸಂಸ್ಥೆಯ ಹೈಕೋರ್ಟ್ ವಕೀಲರಾದ ಶ್ರೀನಿವಾಸ್ ಅವರು, ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆರೋಪಿ ಎಂಬುದಾಗಿ ಬಂಬಿಸಲಾಗಿದ್ದ ಸಂತೋಷ್ ರಾವ್ ನಿರಾಪರಾಧಿ ಎಂಬುದಾಗಿ ತೀರ್ಪಿನಿಂದ ಸಾಬೀತಾಗಿದೆ. ಹಾಗಾಗಿ ಈ ಪ್ರಕರಣದ ಬಗ್ಗೆ ಮೇಲ್ಮನವಿ ಸಲ್ಲಿಸುವುದರಿಂದ ಆ ನಿರಾಪರಾಧಿಗೆ ಶಿಕ್ಷೆ ಕೊಡಿಸುವ ಪ್ರಯತ್ನ ಆಗುತ್ತದೆ. ಆದುದರಿಂದ ಮೇಲ್ಮನವಿ ಬದಲು ನಿಜವಾದ ಆರೋಪಿಯನ್ನು ಪತ್ತೆ ಹಚ್ಚಲು ನಿಟ್ಟಿನಲ್ಲಿ ಈ ಪ್ರಕರಣದ ಮರುತನಿಖೆ ಆಗಬೇಕು. ನಿಷ್ಪಕ್ಷಪಾತವಾದ ತನಿಖೆಗಾಗಿ ದಕ್ಷ ತನಿಖಾಧಿಕಾರಿಯನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದರು.
ಸೌಜನ್ಯ ಪ್ರಕರಣದ ತೀರ್ಪನ್ನು ಪರಿಶೀಲಿಸಿದಾಗ ಇಲ್ಲಿ ಪೊಲೀಸರ ಕರ್ತವ್ಯ ಲೋಪ ಎದ್ದು ಕಾಣುತ್ತದೆ. ಪ್ರಾರಂಭದಲ್ಲಿ ಪೊಲೀಸ್ ತನಿಖೆ, ನಂತರ ಸಿಐಡಿ ತನಿಖೆ, ಎರಡು ವರ್ಷಗಳ ಬಳಿಕ ನಡೆದ ಸಿಬಿಐ ತನಿಖೆಗಳು ಏಕಪಕ್ಷೀಯವಾಗಿ ನಡೆದಿದೆಯೇ ಹೊರತು ಪ್ರಕರಣದ ಮತ್ತೊಂದು ದೃಷ್ಟಿಕೋನದಲ್ಲಿ ನಡೆಸಿಲ್ಲ ಎಂದು ಅವರು ಆರೋಪಿಸಿದರು.
ಸೌಜನ್ಯ ಈಗ ಕುಸುಮವತಿ ಅವರ ಮಗಳಾಗಿ ಉಳಿದಿಲ್ಲ. ಆಕೆ ಇಡೀ ರಾಜ್ಯದ ಮಗಳು ಆಗಿದ್ದಾಳೆ. ಆದುದರಿಂದ ಆಕೆಯ ಸಾವಿಗೆ ನ್ಯಾಯ ಸಿಗುವವರೆಗೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಬೇಕು. ರಾಜ್ಯ ಸರಕಾರ ಮರು ತನಿಖೆ ನಡೆಸಿ ನಿಜವಾದ ಆರೋಪಿಗಳನ್ನು ಬಂಧಿಸುವರೆಗೆ ಹೋರಾಟ ಮುಂದುವರೆಸಬೇಕು ಎಂದು ಅವರು ಆಗ್ರಹಿಸಿದರು.
ಜನಪರ ಹೋರಾಟಗಾರ ಜಯನ್ ಮಲ್ಪೆ, ಬೆಳ್ತಂಗಡಿಯ ಪ್ರಗತಿಪರ ಹೋರಾಟಗಾರ ಶೇಖರ್ ಲಾಯಿಲ, ಹಿರಿಯ ಚಿಂತಕ ಪ್ರೊ.ಫಣಿರಾಜ್, ಹೋರಾಟಗಾರ ಶ್ರೀರಾಮ ದಿವಾಣ, ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ಮತ್ತು ತಾಲೂಕು ಸಂಚಾಲಕ ದಯಾನಂದ ಕಪ್ಪೆಟ್ಟು, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ, ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಗಣೇಶ್ ನೆರ್ಗಿ, ರಮೇಶ್ ಪಾಲ್, ಕಿಟ್ಟ ಶ್ರೀಯಾನ್, ಬಿ.ಎನ್.ಸಂತೋಷ್, ಭಗವನ್ ದಾಸ್, ದಿನೇಶ್ ಜವನರಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.