ಟ್ರಾಫಿಕ್ ನಿರ್ವಹಣೆಗೆ ಡ್ರೋನ್ ಬಳಕೆ; ಮೂರು ತಿಂಗಳಲ್ಲಿ ಬೆಂಗಳೂರು ಟ್ರಾಫಿಕ್ ಮುಕ್ತ ನಗರ: ಡಾ. ಜಿ ಪರಮೇಶ್ವರ್
ಬೆಂಗಳೂರು: ವಿಶ್ವಮಟ್ಟದಲ್ಲಿ ಅಪಖ್ಯಾತಿಗೆ ಒಳಗಾಗಿರುವ ಬೆಂಗಳೂರು ನಗರ ಸಂಚಾರ ದಟ್ಟಣೆ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದ್ದು ಮುಂದಿನ ಮೂರು ತಿಂಗಳಲ್ಲಿ ಟ್ರಾಫಿಕ್ ಮುಕ್ತ ನಗರ ಮಾಡಲು ಅಧಿಕಾರಿಗಳಿಗೆ ತಾಕೀತು ಮಾಡಿದ್ದೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಂದು ಎಸಿಪಿ, ಮೇಲ್ಮಟ್ಟ ಅಧಿಕಾರಿಗಳೊಂದಿಗೆ ನಗರ ಪೊಲೀಸ್ ಇಲಾಖೆಯ ಕಾರ್ಯಗಳ ಬಗ್ಗೆ ಸಭೆ ನಡೆಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು ಬೆಂಗಳೂರು ನಗರ ವಿಶ್ವಮಟ್ಟದಲ್ಲಿ ಟ್ರಾಫಿಕ್ ಗೆ ಅಪಖ್ಯಾತಿಗೆ ಒಳಗಾಗಿದೆ. ಸಂಚಾರ ದಟ್ಟಣೆ ಸಂಪೂರ್ಣವಾಗಿ ಕಡಿಮೆ ಮಾಡಲು ಆಯಾ ವಿಭಾಗದ ಡಿಸಿಪಿ, ಎಸಿಪಿ ಪೀಕ್ ಅವರ್ ನಲ್ಲಿ ಕಡ್ಡಾಯವಾಗಿ ಫೀಲ್ಡ್ ನಲ್ಲಿರಬೇಕು. ಆಯಾ ವಿಭಾಗಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾದರೆ ಹಿರಿಯ ಅಧಿಕಾರಿಗಳು ಖುದ್ದು ಫೀಲ್ಡ್ ಗಿಳಿದು ಕೆಲಸ ಮಾಡಬೇಕು ಎಂದು ಹೇಳಿದರು.
ಸಂಚಾರ ದಟ್ಟಣೆ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಸುಧಾರಿಸಲು ಇದೇ ಮೊದಲ ಬಾರಿಗೆ ಡ್ರೋನ್ ಕ್ಯಾಮರ ಬಳಸಲಾಗುತ್ತಿದೆ. ಅಲ್ಲದೆ ಪೀಕ್ ಅವರ್ ನಲ್ಲಿ ಸಂಚಾರ ದಟ್ಟಣೆ ಸುಧಾರಿಸಲು ಟ್ರಾಫಿಕ್ ಪೊಲೀಸರ ಜೊತೆಗೆ ಹೆಚ್ಚುವರಿಯಾಗಿ 10 ಮಂದಿ ಕಾನೂನು ವಿಭಾಗದ ಪೊಲೀಸರು ಕಾರ್ಯನಿರ್ವಹಿಸಲು ಸೂಚಿಸಿದ್ದೇನೆ. ಒಟ್ಟಾರೆ ರಾಜಧಾನಿಯಲ್ಲಿ ಸಂಚಾರ ದಟ್ಟಣೆಯ ದೂರುಗಳು ಬರದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು ಮುಂದಿನ ಮೂರು ತಿಂಗಳಲ್ಲಿ ಟ್ರಾಫಿಕ್ ಮುಕ್ತ ಸಿಟಿ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.