ಮಂಗಳೂರು: ಜುಲೈ 9 ರಂದು ರೆಸ್ಕ್ಯೋ ಚಾರಿಟೇಬಲ್ ಟ್ರಸ್ಟ್ ವಾರ್ಷಿಕೋತ್ಸವ ಪ್ರಯುಕ್ತ ಯು.ಟಿ.ಖಾದರ್ ಗೆ ಸನ್ಮಾನ, 1000 ಯುನಿಟ್ ರಕ್ತದಾನ
facebook.com/UTKhaderOfficial
ಮಂಗಳೂರು, ಜು. 6: ರೆಸ್ಕ್ಯೋ ಚಾರಿಟೇಬಲ್ ಟ್ರಸ್ಟ್ ಫರಂಗಿಪೇಟೆಯ 11ನೇ ವಾರ್ಷಿಕೋತ್ಸವದ ಅಂಗವಾಗಿ ಜುಲೈ 9 ರಂದು ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸನ್ಮಾನ ಕಾರ್ಯಕ್ರಮ ಅರ್ಕುಳ ಯಶಸ್ವಿ ಹಾಲ್ನಲ್ಲಿ ನಡೆಯಲಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಮಾರಿಪಳ್ಳ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಸ್ಟ್ನ ವಾರ್ಷಿಕೋತ್ಸವದ ಪ್ರಯುಕ್ತ ದ.ಕ. ಜಿಲ್ಲೆಯ ಆಯ್ದ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ 1000 ಯೂನಿಟ್ಗಳಷ್ಟು ರಕ್ತದಾನ ಮಾಡಲಿದ್ದೇವೆ. ಪರಂಗಿಪೇಟೆ ಪರಿಸರದ ಸುಮಾರು 8 ಶಾಲೆಯ 200ರಷ್ಟು ವಿದ್ಯಾರ್ಥಿಗಳಿಗೆ ಸುಮಾರು 4 ರಿಂದ 5 ಲಕ್ಷ ರೂ. ಸ್ಕಾಲರ್ಶಿಪ್ ವಿತರಣೆ, ಬಡ ನಿರ್ಗತಿಕ ಕುಟುಂಬಗಳಿಗೆ ಆರೋಗ್ಯ ಕಾರ್ಡ್ ವಿತರಿಸಲಿದ್ದೇವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಇನಾಯತ್ ಅಲಿ, ಮಿಥುನ್ ರೈ, ಬಂಟ್ವಾಳ ಉಪ ವಿಭಾಗ ಪೊಲೀಸ್ ಉಪಾಧೀಕ್ಷಕ ಪ್ರತಾಪ್ ಸಿಂಗ್ ಥೋರಟ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಮಂಗಳೂರು ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ ಅಝೀಯ್ ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಪುದು ಗ್ರಾಮ ವ್ಯಾಪ್ತಿಯ ಸುಮಾರು 11 ಮಸೀದಿಗೆ ಒಳಪಟ್ಟಿರುವ ಕೆಲವು ಯುವಕರು ಸೇರಿಕೊಂಡು 2012ರ ಜೂ.10ರಂದು ರೆಸ್ಕ್ಯೋ ಚಾರಿಟೇಬಲ್ ಟ್ರಸ್ಟ್ ಪರಂಗಿಪೇಟೆ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಈ ವ್ಯಾಪ್ತಿಗೆ ಸಂಬಂಧಪಟ್ಟ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಮತ್ತು ಮೂಲಭೂತ ಸೌಕರ್ಯಗಳಿಗೆ ಆದ್ಯತೆ ನೀಡಿ, ಬಡ ಮತ್ತು ನಿರ್ಗತಿಕರ ಸೇವೆ ಮಾಡಿಕೊಂಡು ಬಂದಿದ್ದೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟ್ರಸ್ಟಿನ ಪ್ರಮುಖರಾದ ಹನೀಫ್ ಖಾನ್ ಕೊಡಾಜೆ, ಸಲೀಂ ಅಲ್ತಾಫ್ ಡೈಮಂಡ್, ಶಬೀರ್ ಕೆಂಪಿ ಉಪ್ಪಿನಂಗಡಿ, ಮುಸ್ತಫಾ ಮೇಲ್ಮನೆ ಫರಂಗಿಪೇಟೆ, ಇಝ್ಝಾ ಬಜಾಲ್, ಆಸಿಫ್ ಮೇಲ್ಮನೆ ಫರಂಗಿಪೇಟೆ ಉಪಸ್ಥಿತರಿದ್ದರು.