ಉತ್ತರಾಖಂಡ: 5 ತಿಂಗಳಲ್ಲಿ 14 ಹುಲಿಗಳ ಸಾವು
ಫೋಟೋ(ಪಿಟಿಐ)
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಕಳೆದ ಐದು ತಿಂಗಳ ಅವಧಿಯಲ್ಲಿ 14 ಹುಲಿಗಳು ಮೃತಪಟ್ಟಿರುವುದು ವನ್ಯಜೀವಿ ಅಧಿಕಾರಿಗಳಲ್ಲಿ ಆತಂಕ ಸೃಷ್ಟಿಸಿದೆ.
ಈ ಘಟನೆ ಬಗ್ಗೆ ತಕ್ಷಣ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅರಣ್ಯ ಇಲಾಖೆಯ ಮಹಾನಿರ್ದೇಶಕ ಸಿ.ಪಿ.ಗೋಯಲ್ ಅವರು ಇಲಾಖೆಗೆ ಸೂಚನೆ ನೀಡಿದ್ದಾರೆ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ವೆಬ್ಸೈಟ್ ಮಾಹಿತಿಯಂತೆ ಮೊದಲ ಹುಲಿಯ ಸಾವು ಈ ವರ್ಷದ ಜನವರಿ 23ರಂದು ಸಂಭವಿಸಿತ್ತು.
"ಈ ತಿಂಗಳು ರಾಜ್ಯದಲ್ಲಿ ಮತ್ತೆ ಎರಡು ಹುಲಿಗಳು ಮೃತಪಟ್ಟಿದ್ದು, ಕಳೆದ ಐದು ತಿಂಗಳಲ್ಲಿ ಸಾವಿನ ಸಂಖ್ಯೆ 14ಕ್ಕೆ ಏರಿದೆ" ಎಂದು ಅರಣ್ಯ ಇಲಾಖೆ ಮೂಲಗಳು ಹೇಳಿವೆ. ಈ 14 ಸಾವುಗಳ ಪೈಕಿ 10 ಸಾವುಗಳು ಕೋರ್ಬೆಟ್ ಹುಲಿ ರಕ್ಷಿತಾರಣ್ಯ, ಕುಮಾನ್ ಅರಣ್ಯ ಪ್ರದೇಶದಲ್ಲೇ ಸಂಭವಿಸಿವೆ.
ಈ ಬಗ್ಗೆ ಸಮಗ್ರ ತನಿಖೆಗೆ ರಾಜ್ಯದ ಅರಣ್ಯ ಇಲಾಖೆಯ ಮುಖ್ಯ ವನ್ಯಜೀವಿ ಸಂರಕ್ಷಕರು ಆದೇಶ ನೀಡಿದ್ದರೂ, ಮೃತಪಟ್ಟ ಹುಲಿಗಳ ಡಿಎನ್ಎ ವರದಿ ಇನ್ನೂ ಅರಣ್ಯ ಇಲಾಖೆಯಿಂದ ಬಂದಿಲ್ಲ ಎಂದು ಉನ್ನತ ಮೂಲಗಳು ಹೇಳಿವೆ.
"ಹುಲಿಗಳ ಸಾವಿನ ಪ್ರಕರಣದ ಹೊಣೆಯನ್ನು ಕುಮಾನ್ ಮುಖ್ಯ ಅಧಿಕಾರಿ ಪಿ.ಪಿ.ಪಾತ್ರಾ ಅವರಿಗೆ ವಹಿಸಲಾಗಿದ್ದು,
ಅವರು ಸಲ್ಲಿಸಿದ ವರದಿ ಅಧ್ಯಯನ ಮಾಡಿದ ಬಳಿಕ ಮತ್ತಷ್ಟು ಅಂಶಗಳ ಬಗ್ಗೆ ಮಾಹಿತಿ ಪಡೆದು ಮುಂದಿನ ಎರಡು ಮೂರು ದಿನಗಳಲ್ಲಿ ಅಂತಿಮ ವರದಿ ಪ್ರಕಟಿಸಲಾಗುವುದು ಎಂದು ಮುಖ್ಯ ವನ್ಯಜೀವಿ ಸಂರಕ್ಷಕ ಸಮೀರ್ ಸಿನ್ಹಾ ಸ್ಪಷ್ಟಪಡಿಸಿದರು.