ಅನುಭವ ಮತ್ತು ಸಾಮರ್ಥ್ಯವಿರುವ ಸಿಎಂ ನಮ್ಮ ಬಳಿ ಇದ್ದಾರೆ: ಡಾ.ಎಂ.ಸಿ ಸುಧಾಕರ್
ಬೆಂಗಳೂರು: ವಿರೋಧ ಪಕ್ಷದವರು ರಾಜಕೀಯ ಮಾಡುತ್ತಿದ್ದು, ನಮ್ಮ ಯೋಜನೆಗಳು ಅನುಷ್ಟಾನ ಆಗುವುದಿಲ್ಲ ಅಂತ ಅಪಪ್ರಚಾರ ಮಾಡುತ್ತಿದ್ದಾರೆ. ಇಂಥ ಯೋಜನೆಗಳಿಗೆ ಅಡಚಣೆಗಳಾಗುವುದು ಸಹಜ.ಎಷ್ಟೇ ಅಡಚಣೆಗಳು ಬಂದರೂ ಕೂಡ ಯೋಜನೆ ಜಾರಿಗೆ ತಂದೇ ತರುತ್ತೇವೆ. ಅಷ್ಟು ಅನುಭವ ಮತ್ತು ಸಾಮರ್ಥ್ಯವಿರುವ ಸಿಎಂ ನಮ್ಮ ಬಳಿಯಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಶಾಸಕರ ತರಬೇತಿಗೆ ಸಂಪನ್ಮೂಲ ವ್ಯಕ್ತಿಗಳ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಹಿಂದೆ ನಾವು ಶಾಸಕರಾಗಿ ಆಯ್ಕೆಯಾದಾಗಲೂ ತರಬೇತಿ ನಡೆಸಿದ್ದರು. ಆಗಲೂ ಕೂಡ ನಮಗೆ ಸಿದ್ದಗಂಗಾ ಮಠದಲ್ಲಿ ತರಬೇತಿ ಆಯೋಜನೆ ಮಾಡಲಾಗಿತ್ತು. ಇದರಲ್ಲಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸ್ಪೀಕರ್ ಯು.ಟಿ ಖಾದರ್ ಅವರಿಗೆ ಸಾಮರ್ಥ್ಯ ಇದೆ ಎಂದರು.
ಉನ್ನತ ಶಿಕ್ಷಣ ಪರಿಷತ್ ಹಾಗೂ ದಕ್ಷಿಣ ಭಾರತ ಬ್ರಿಟಿಷ್ ಕೌನ್ಸಿಲ್ ಸಹಯೋಗದೊಂದಿಗೆ ಡಂಡಿ ಯುನಿವರ್ಸಿಟಿ ಗೆ ಅಂತರಾಷ್ಟ್ರೀಯ ವಿದ್ಯಾರ್ಥಿಗಳ ಎಕ್ಸಚೇಂಜ್ ಪ್ರೋಗ್ರಾಂಗೆ ನಮ್ಮ ಯುನಿವರ್ಸಿಟಿಯಿಂದ ವಿದ್ಯಾರ್ಥಿಗಳನ್ನು ಕಳುಹಿಸುತ್ತಿದ್ದೇವೆ. ವಿದ್ಯಾರ್ಥಿಗಳು ಹಾಗೂ ಬೋಧಕರು ಬ್ರಿಟಿಷ್ ಕೌನ್ಸಿಲ್ ಮೂಲಕ ಸ್ಕಾಟಲ್ಯಾಂಡ್ ನ ಡಂಡಿ ಯುನಿವರ್ಸಿಟಿ ಯಲ್ಲಿ ಸಂಶೋಧನೆ ಮಂಡನೆ ಮಾಡಲಿದ್ದಾರೆ. ಸಂಶೋಧನೆ ಆಧರಿಸಿ ಸ್ಕಾಲರ್ ಶಿಪ್ ಕೂಡ ನೀಡಲಾಗುತ್ತದೆ ಎಂದು ತಿಳಿಸಿದರು.