ಚಿಕ್ಕಮಗಳೂರು: ಶೆಡ್ ಗೆ ನುಗ್ಗಿ ಕಾರು ಹಾನಿಗೊಳಿಸಿದ ಕಾಡಾನೆ
ಚಿಕ್ಕಮಗಳೂರು: ಕಾಡಾನೆಯೊಂದು ಮನೆಯ ಪಕ್ಕದ ಶೆಡ್ ಗೆ ನುಗ್ಗಿ ಶೆಡ್ ನಲ್ಲಿದ್ದ ಕಾರನ್ನು ಹಾನಿಗೊಳಿಸಿರುವ ಘಟನೆ ಬುಧವಾರ ರಾತ್ರಿ ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರಿಕೆ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಹೇರಿಕೆ ಗ್ರಾಮದ ಮಹೇಶ್ ಎಂಬವರ ಕಾರು ಹಾನಿಗೊಳಗಾಗಿದೆ. ಬುಧವಾರ ರಾತ್ರಿ ಮಳೆ ಸುರಿಯುತ್ತಿದ್ದ ಸಂದರ್ಭದಲ್ಲಿ ಶೆಡ್ ಅನ್ನು ಬೀಳಿಸಿದ ಆನೆ ಶೆಡ್ ನಲ್ಲಿ ನಿಲ್ಲಿಸಿದ್ದ ಕಾರನ್ನು ಹಾನಿಗೊಳಿಸಿದೆ. ಕಾರಿನ ಹಿಂಭಾಗದ ಗ್ಲಾಸ್ ಸಂಪೂರ್ಣ ಹುಡಿಯಾಗಿದೆ ಎನ್ನಲಾಗಿದೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಮೂಡಿಗೆರೆ ಅರಣ್ಯ ಇಲಾಖೆಯ ಆನೆ ಕಾರ್ಯಪಡೆ ಸಿಬ್ಬಂದಿಯೊಂದಿಗೆ ಶೆಡ್ ಮತ್ತು ಕಾರು ಹಾನಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಲಾಗಿದೆ ಎಂದು ತಿಳಿದು ಬಂದಿದೆ.
ಊರುಬಗೆ ಭಾಗದಲ್ಲಿ ಕಳೆದ ಅನೇಕ ದಿನಗಳಿಂದ ಮೂರ್ನಾಲ್ಕು ಕಾಡಾನೆಗಳು ಸತತವಾಗಿ ಗ್ರಾಮದೊಳಗೆ ದಾಳಿಯಿಡುತ್ತಿದ್ದು, ಹಗಲು ರಾತ್ರಿಯೆನ್ನದೇ ರಸ್ತೆಯಲ್ಲಿ, ಕಾಫಿ ತೋಟದಲ್ಲಿ ಓಡಾಡುತ್ತಿರುತ್ತವೆ. ಇದರಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಕಾರ್ಮಿಕರು ತೋಟದ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಕಾಡಾನೆಗಳನ್ನು ನಿಯಂತ್ರಿಸುವಂತೆ ಸ್ಥಳೀಯರು ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.