ಮೋದಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಶ್ರಮಿಸಿ: ಸಚಿವೆ ಶೋಭಾ
ಉಡುಪಿ, ಜೂ.15: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ ಸೋತಿದ್ದರೂ ಉಡುಪಿ ಜಿಲ್ಲೆಯಲ್ಲಿ ಐದೂ ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲೇ ಮುಂಚೂಣಿ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಮಸ್ತ ಕಾರ್ಯಕರ್ತರ ಸಾಧನೆ ಅಭಿನಂದನೀಯ. ಪ್ರಸಕ್ತ ಚುನಾವಣೆಯ ಅವಲೋಕನದ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಮಗದೊಮ್ಮೆ ದೇಶದ ಪ್ರಧಾನಿಯನ್ನಾಗಿಸಲು ಸಂಘಟಿತರಾಗಿ ಶ್ರಮಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಕಾರ್ಯ ತಂಡದ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ಅಲ್ಪಸಂಖ್ಯಾತರ ದರ್ಪ ಹೆಚ್ಚುತ್ತಿದೆ. ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಹೋರಾಟಗಳು ಅಗತ್ಯವಾಗಿದೆ ಎಂದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಎನ್.ರವಿ ಕುಮಾರ್ ಮಾತನಾಡಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಕರೆಯಂತೆ ಪ್ರತೀ ವಿಧಾನಸಭಾ ಕ್ಷೇತ್ರಗಳಲ್ಲಿ ಕೀ ವೋಟರ್ಸ್‌ಗಳನ್ನು ಗುರುತಿಸಿ ಭೇಟಿ ಮಾಡುವ ಜೊತೆಗೆ ಜಿಲ್ಲಾ, ಮೋರ್ಚಾ, ಪ್ರಕೋಷ್ಠ, ಸೋಶಿ ಯಲ್ ಮೀಡಿಯಾ ಟೀಮ್ ಹಾಗೂ ಹಿರಿಯ ಕಾರ್ಯಕರ್ತರ ಸಮಾವೇಶ ವನ್ನು ಆಯೋಜಿಸುವ ಮೂಲಕ ಮುಂಬರಲಿರುವ ತಾಪಂ., ಜಿಪಂ. ಮತ್ತು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಪೂರಕ ವಾತಾವರಣವನ್ನು ಸದೃಢಗೊಳಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯಕುಮಾರ್ ಶೆಟ್ಟಿ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಶಾಸಕರಾದ ವಿ.ಸುನೀಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಗಂಟಿಹೊಳಿ, ಮಾಜಿ ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಮುಖಂಡರಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಮನೋಹರ್ ಕಲ್ಮಾಡಿ, ದಿನಕರ ಬಾಬು, ಶಿಲ್ಪಾ ಜಿ. ಸುವರ್ಣ, ಉಮೇಶ್ ಎ.ನಾಯ್ಕ್, ಅಂಡಾರು ದೇವಿಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.