ಅಂತರಿಕ್ಷದಲ್ಲೂ ಟ್ರಾಫಿಕ್ ಜಾಮ್ !
ಬಸನಗೌಡ ಮಂಜುನಾಥಗೌಡ ಪಾಟೀಲ
ಅದು ಕಳೆದ ತಿಂಗಳು ಜುಲೈ 30. ಭಾರತದ ಹೆಮ್ಮೆಯ ಇಸ್ರೋ ಸಿಂಗಾಪುರ ದೇಶದ ಆರು ರಾಕೆಟ್‌ಗಳನ್ನು ಆಂಧ್ರಪ್ರದೇಶದ ಶ್ರೀ ಹರಿಕೋಟಾ ಉಡಾವಣೆ ಕೇಂದ್ರದಿಂದ ಉಡಾವಣೆ ಮಾಡಲು ಸರ್ವ ಸನ್ನದ್ಧವಾಗಿತ್ತು. 360 ಕೆಜಿ ತೂಕದ ರಾಕೆಟ್‌ಗಳನ್ನು ಹೊತ್ತ ಉಡಾವಣಾ ವಾಹಕ ಪಿಎಸ್‌ಎಲ್‌ವಿ ಸಿ-56, 535 ಕಿಲೋ ಮೀಟರ್ ದೂರದ ಗುರಿಗೆ ಕ್ರಮಿಸಬೇಕಿತ್ತು. ಈ ಉಡಾವಣೆಗೆ ಸಮಯ ಮುಂಜಾನೆ ಸಮಯ 6:30ಕ್ಕೆ ನಿಗದಿಯಾಗಿತ್ತು. ಪ್ರತೀ ಸೆಕೆಂಡು ಇಂತಹ ಉಡಾವಣೆಯ ಅವಧಿಯಲ್ಲಿ ಮುಖ್ಯವಾಗಿದ್ದ ಅಂದು ಆ ಉಡಾವಣೆ 1 ನಿಮಿಷ ತಡವಾಗಿತ್ತು. ಅಲ್ಲಿ ಉಡಾವಣೆ 6:31ಕ್ಕೆ ಆಗಿತ್ತು.
ತಡವಾಗಿ ಆಫೀಸಿಗೆ ಹೋದರೆ ಬಾಸ್‌ಗೆ ಸಾಮಾನ್ಯವಾಗಿ ಬಹುತೇಕರು ಹೇಳುವ ಒಂದೇ ಒಂದು ಕಾರಣ ಅದು ಟ್ರಾಫಿಕ್ ಜಾಮ್. ಆದರೆ ಅಂದಿನ ಉಡಾವಣೆ ಕೂಡಾ ಇಂತಹ ಟ್ರಾಫಿಕ್ ಜಾಮ್‌ನಿಂದಾಗಿಯೇ ತಡವಾಗಿತ್ತು!. ಹೌದು ರಸ್ತೆಯಲ್ಲಿ ವಾಹನಗಳ ದಟ್ಟಣೆಯಿಂದ ಟ್ರಾಫಿಕ್ ಸಮಸ್ಯೆ ಉಂಟಾದರೆ, ಬಾಹ್ಯಾಕಾಶದಲ್ಲಿ ಉಡಾವಣೆಯಾದ ರಾಕೆಟ್‌ಗಳ ಅವಶೇಷಗಳಿಂದ ಸಾಕಷ್ಟು ಇಂದು ದಟ್ಟಣೆಯಾಗುತ್ತಿದೆ.
ಉಡಾವಣೆಗೊಂಡ ರಾಕೆಟ್‌ಗಳು ತಮ್ಮ ಕೆಲಸ ಮುಗಿದ ಮೇಲೆ ಭೂಕಕ್ಷೆ ಪ್ರವೇಶಿಸಿ ಉರಿದು ಬೀಳುತ್ತವೆ. ಅಂತಹ ಸಣ್ಣ ಪುಟ್ಟ ಚೂರುಗಳು ಅಲ್ಲಲ್ಲಿ ಬಿದ್ದ ಸುದ್ದಿಯನ್ನು ನಾವೀಗ ಆಗಾಗ ಕೇಳುತ್ತಿರುತ್ತೇವೆ ಅಲ್ಲವೇ? ಕೆಲವೊಂದು ಬಾಹ್ಯಾಕಾಶದಲ್ಲಿಯೇ ಸಣ್ಣ ಚುರೂಗಳಾಗಿ ಭೂಕಕ್ಷೆ ಪ್ರವೇಶಿಸಲು ಸಾಧ್ಯವಾಗದೇ ಅಲ್ಲಿಯೇ ಸುತ್ತುತ್ತಿರುತ್ತವೆ. ಇಂತಹ ಅಲ್ಲಿಯೇ ಸುತ್ತುತ್ತಿರುವ ಚೂರೂಗಳಿಗೇ ವೈಜ್ಞಾನಿಕ ಭಾಷೆಯಲ್ಲಿ ‘ಬಾಹ್ಯಾಕಾಶ ತ್ಯಾಜ್ಯ’ ಎಂದು ಕರೆಯುತ್ತಾರೆ.
ಈ ಚೂರುಗಳ ವೇಗ ತುಂಬಾ ಜಾಸ್ತಿ ಇರುತ್ತದೆ. ಇಂತಹ ಚೂರುಗಳು ಉಡಾವಣೆಗೊಂಡ ಉಪಗ್ರಹಗಳಿಗೆ ಢಿಕ್ಕಿ ಹೊಡೆದು ಅಪಾಯ ಮಾಡಿದ ಉದಾಹರಣೆಗಳು ಕಣ್ಮುಂದೆ ಇವೆ. ಉದಾಹರಣೆಗೆ 2021ರ ಅಗಸ್ಟ್ 17, ಚೀನಾ ಉಡಾವಣೆ ಮಾಡಿದ ಉಪಗ್ರಹಕ್ಕೆ ರಶ್ಯ ದೇಶದ ಉಪಗ್ರಹವೊಂದು ಢಿಕ್ಕಿ ಹೊಡೆದಿತ್ತು. ಕಾರಣ ಇವುಗಳ ಮಧ್ಯೆ ಅತೀ ಹೆಚ್ಚಿನ ಪ್ರಮಾಣದಲ್ಲಿ ಬಾಹ್ಯಾಕಾಶ ತ್ಯಾಜ್ಯ ನಿರ್ಮಾಣವಾದ ವಾತಾವರಣವಿತ್ತು. ಇನ್ನು 2009ರಲ್ಲಿ ಅಮೆರಿಕದ ಉಪಗ್ರಹವೊಂದು ಈ ಕಾರಣದಿಂದಲೇ ಹಾನಿಗೊಳಗಾಗಿತ್ತು.
1950ರ ಅವಧಿಯಿಂದಲೇ ಬಾಹ್ಯಾಕಾಶ ಉಡಾವಣೆ ಕಾರ್ಯಗಳು ಆರಂಭವಾಗಿದ್ದು 2022ರ ವರ್ಷವೊಂದರಲ್ಲಿಯೇ ಸುಮಾರು 2,000ಕ್ಕೂ ಹೆಚ್ಚು ರಾಕೆಟ್‌ಗಳು ಉಡಾವಣೆಗೊಂಡಿವೆ. ಅಂತರಿಕ್ಷದಲ್ಲಿ ಪ್ರಸಕ್ತ 2,000ಕ್ಕೂ ಹೆಚ್ಚು ಉಪಗ್ರಹಗಳು ಕಾರ್ಯ ನಿರ್ವಹಿಸುತ್ತಿದ್ದು, 3,000ಕ್ಕೂ ಹೆಚ್ಚು ಉಪಗ್ರಹಗಳು ನಿಷ್ಕ್ರಿಯವಾಗಿವೆ. ಅಲ್ಲದೆ 34,000ಕ್ಕೂ ಹೆಚ್ಚು ಸಣ್ಣ ಸಣ್ಣ ಬಾಹ್ಯಾಕಾಶ ತ್ಯಾಜ್ಯದ ತುಂಡುಗಳಿವೆ. 2030ರ ವೇಳೆಗೆ ಸುಮಾರು 90 ದೇಶಗಳಿಂದ 17,000ಕ್ಕೂ ಹೆಚ್ಚಿನ ಉಪಗ್ರಹಗಳ ಉಡಾವಣೆ ಆಗಬಹುದೆಂದು ಅಂದಾಜಿಸಲಾಗಿದೆ.
ಸದ್ಯ ಬಾಹ್ಯಾಕಾಶದಲ್ಲಿರುವ ತ್ಯಾಜ್ಯಗಳ ಪೈಕಿ ಶೇ. 40 ಅಮೆರಿಕ, ಶೇ. 28 ರಶ್ಯ, ಶೇ. 19 ಚೀನಾ, ಶೇ. 0.8ರಷ್ಟು ಭಾರತದ ಪಾಲಿದೆ. ಭಾರತ ವರ್ಷವೊಂದರಲ್ಲಿ ನೂರಾರು ಉಪಗ್ರಹ ಉಡಾವಣೆ ಮಾಡಿದರೂ ಅಂತರಿಕ್ಷ ತ್ಯಾಜ್ಯದಲ್ಲಿ ನಮ್ಮ ದೇಶದ ಪಾಲು ಕಡಿಮೆ ಇರಲು ಕಾರಣ, ಸ್ವಚ್ಛ ಅಂತರಿಕ್ಷ ಅಭಿಯಾನ.
ಹೌದು ಭಾರತದ ಬಹುತೇಕ ಉಡಾವಣೆಗಳು ತಮ್ಮ ಉದ್ದೇಶ ಮುಗಿದ ಮೇಲೆ, ಸಂಶೋಧನೆ ಪೂರ್ಣಗೊಂಡ ಮೇಲೆ ಮರಳಿ ಭೂ ಕಕ್ಷೆಗೆ ಬಂದು ಸೇರುವಂತೆ ವಿನ್ಯಾಸದ ತಂತ್ರಜ್ಞಾನ ಹೊಂದಿವೆ. ಭೂ ಕಕ್ಷೆಗೆ ಬಂದ ಉಪಗ್ರಹಗಳು ಉರಿದು ಸಣ್ಣ ಸಣ್ಣ ತುಂಡುಗಳಾಗಿ ನೆಲಕ್ಕೆ ಬೀಳುತ್ತವೆ. ಇದೇ ಕಾರಣದಿಂದ ಬಾಹ್ಯಾಕಾಶದ ತ್ಯಾಜ್ಯದಲ್ಲಿ ಭಾರತದ ಪಾಲು ಕಡಿಮೆ.
ಯುರೋಪಿಯನ್ ದೇಶಗಳು ಮತ್ತು ಇತರ ಅನೇಕ ದೇಶಗಳು ಬಾಹ್ಯಾಕಾಶ ತ್ಯಾಜ್ಯ ನಿರ್ವಹಣೆಯಲ್ಲಿ ಮಾಡಬೇಕಾದ ಕಾರ್ಯಗಳ ಮತ್ತು ಈಗಿರುವ ತ್ಯಾಜ್ಯಗಳನ್ನು ತೆಗೆದು ಭೂಮಿಗೆ ತರುವತ್ತ ಸಂಶೋಧನೆ ಕೈಗೊಳ್ಳುವ ಸೂಚನೆ ಕಾಣುತ್ತಿದೆ. ಭಾರತವೂ ಈ ಕ್ಷೇತ್ರಕ್ಕೆ ಕಾಲಿಟ್ಟು ತ್ಯಾಜ್ಯ ತೆಗೆದು ಜಗತ್ತಿನ ಅನೇಕ ಸದುದ್ದೇಶಗಳ ಉಡಾವಣೆಗೆ ದಾರಿ ಮಾಡಿಕೊಟ್ಟರೂ ಆಶ್ಚರ್ಯವಿಲ್ಲ.