ಬೈಕ್ ನಲ್ಲಿ ಒಂಟೆಯನ್ನು ಕೂರಿಸಿ ಸವಾರಿ; ವಿಡಿಯೋ ವೈರಲ್
ಪ್ರಾಣಿಗಳ ವಿರುದ್ಧದ ಕ್ರೌರ್ಯ ಎಂದ ಜನರು
Screengrab: instagram/jist.news
ಹೊಸದಿಲ್ಲಿ: ಜನನಿಬಿಡ ರಸ್ತೆಯೊಂದರಲ್ಲಿ ಬೈಕ್ ನಲ್ಲಿ ಒಂಟೆಯನ್ನು ಕೂರಿಸಿಕೊಂಡು ಇಬ್ಬರು ಸವಾರರು ಸಂಚರಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಘಟನೆಯ ವಿಡಿಯೊ ಯಾವ ಸ್ಥಳದ್ದು ಎಂಬುದಿನ್ನೂ ದೃಢಪಡದಿದ್ದರೂ, ವಿಡಿಯೊದಲ್ಲಿ ಅರೇಬಿಕ್ ಭಾಷೆಯ ಸೂಚನಾ ಫಲಕಗಳು ಕಂಡು ಬಂದಿವೆ. ಹೀಗಾಗಿ ಈ ವಿಡಿಯೊ ಯಾವುದಾದರೂ ಅರಬ್ ದೇಶದ್ದಿರಬೇಕೆಂದು ಅಂದಾಜಿಸಲಾಗಿದೆ.
ಈ ವಿಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು, “ಇಬ್ಬರು ಸವಾರರು ಒಂಟೆಯೊಂದನ್ನು ತಮ್ಮ ಬೈಕ್ ನಲ್ಲಿ ಕೊಂಡೊಯ್ಯುತ್ತಿರುವುದು ಕಂಡು ಬಂದಿದ್ದು, ಇದರಿಂದ ಸಾಮಾಜಿಕ ಮಾಧ್ಯಮ ಬಳಕೆದಾರರು ಆಘಾತಗೊಂಡಿದ್ದಾರೆ. ಆದರೆ, ಈ ವಿಡಿಯೊವನ್ನು ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ” ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೊ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಬೈಕ್ ಸವಾರರು ಒಂಟೆಯ ಮೇಲೆ ಕ್ರೌರ್ಯವೆಸಗಿದ್ದಾರೆ ಎಂದು ಸಾಮಾಜಿಕ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಬೈಕ್ ನಲ್ಲಿ ಒಂಟೆ ಬಲವಂತವಾಗಿ ಕೂರುವಂತೆ ಮಾಡಲು ಆ ಸವಾರರು ಅದರ ಪಾದಗಳನ್ನು ಹೇಗೆ ಮಡಚಿದ್ದಾರೆ ಮತ್ತು ಅವನ್ನು ಲಗೇಜ್ ನಂತೆ ಹೇಗೆ ಅಸಹಜವಾಗಿ ಬಿಗಿಯಾಗಿ ಕಟ್ಟಿ ಹಾಕಿದ್ದಾರೆ ನೋಡಿ” ಎಂದು ಓರ್ವ ಬಳಕೆದಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಒಂಟೆಯು ನೆರವಿಗಾಗಿ ಅಳುತ್ತಿರುವಂತೆ ಕಂಡು ಬರುತ್ತಿದೆ” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.