ಲಿಫ್ಟ್ ನಲ್ಲಿ ದುಬೈ ದೊರೆಯೊಂದಿಗೆ ಅನಿರೀಕ್ಷಿತ ಭೇಟಿ: ಯುಎಇ ಪ್ರಧಾನಮಂತ್ರಿಯ ಸರಳತೆಯನ್ನು ಕೊಂಡಾಡಿದ ಭಾರತೀಯ ಕುಟುಂಬ
Photo : instagram / a.r.junaid
ದುಬೈ: ರಜಾ ದಿನ ಕಳೆಯಲು ದುಬೈಗೆ ತೆರಳಿದ್ದ ಭಾರತೀಯ ಉದ್ಯಮಿ ಅನಸ್ ರಹಮಾನ್ ಹಾಗೂ ಅವರ ಕುಟುಂಬಕ್ಕೆ ಅವಿಸ್ಮರಣೀಯ ಅಚ್ಚರಿಯೊಂದು ಎದುರಾಗಿದ್ದು, ಅವರಿಗೆ ಎಲಿವೇಟರ್ನಲ್ಲಿ (ಲಿಫ್ಟ್) ಸ್ವತಃ ದುಬೈ ದೊರೆ ಕೂಡಾ ಜೊತೆಗೂಡಿರುವುದು ಅವರ ಸಂತೋಷನ್ನು ಇಮ್ಮಡಿಗೊಳಿಸಿದೆ.
ಈ ಕುರಿತು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಹುರೂನ್ ಇಂಡಿಯಾದ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅನಸ್, ತಮ್ಮಿಬ್ಬರ ಭೇಟಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
"@hhshkmohd ಅವರನ್ನು ಎಲಿವೇಟರ್ನಲ್ಲಿ ಭೇಟಿಯಾಗುವುದು ಎಂತಹ ವಿಸ್ಮಯಕರ ಘಟನೆ? ಅಂತಹ ವಿನೀತ ವ್ಯಕ್ತಿ ಅವರು. ಅವರು ನಮಗೆ ಹಲವಾರು ಫೋಟೊಗಳನ್ನು ತೆಗೆದುಕೊಳ್ಳಲು ವಿನಯದಿಂದ ಅವರು ಅವಕಾಶ ನೀಡಿದರು ಮತ್ತು ಮಗಳು ಮಿಶೆಲ್ಳೊಂದಿಗೆ ಮಾತುಕತೆಯನ್ನೂ ನಡೆಸಿದರು" ಎಂದು ಮುಂಬೈ ಮೂಲದ ಉದ್ಯಮಿಯಾದ ಅನಸ್ ಆ ಚಿತ್ರಗಳಿಗೆ ನೀಡಿರುವ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.
Khaleej Times ವರದಿಯ ಪ್ರಕಾರ, "ಶನಿವಾರ ನಾನು ನನ್ನ ಕುಟುಂಬದ ಸದಸ್ಯರೊಂದಿಗೆ ಅಟ್ಲಾಂಟಿಸ್ ದಿ ರಾಯಲ್ ಹೋಟೆಲ್ನ 22ನೇ ಮಹಡಿಯಿಂದ ಎಲಿವೇಟರ್ ಮೂಲಕ ತೆರಳುವಾಗ ತಮ್ಮ ಬೆಂಗಾವಲು ಪಡೆಯೊಂದಿಗೆ ಯುಎಇಯ ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಹಾಗೂ ದುಬೈನ ದೊರೆ ಶೇಖ್ ಮುಹಮ್ಮದ್ ಬಿನ್ ರಾಶೀದ್ ಅಲ್ ಮಖ್ತೂಂ ಎಲಿವೇಟರ್ ಪ್ರವೇಶಿಸಿದರು ಎಂದು ಅನಾಸ್ ತಿಳಿಸಿದ್ದಾರೆ.
"ನಾವದನ್ನು ನೋಡಿ ಆಘಾತಗೊಂಡೆವು. ಅವರು ಲಿಫ್ಟ್ನೊಳಗೆ ಬಂದರು ಹಾಗೂ ನಮ್ಮೊಂದಿಗೆ ತುಂಬಾ ಸಲುಗೆಯಿಂದ ವರ್ತಿಸಿದರು. ನನ್ನ ಪುತ್ರಿಯ ಹೆಗಲ ಮೇಲೆ ಕೈಹಾಕಿದ ಅವರು, ನಾನ್ಯಾರೆಂದು ಗೊತ್ತೆ ಎಂದು ಆಕೆಯನ್ನು ಪ್ರಶ್ನಿಸಿದರು" ಎಂದು ಸುದ್ದಿ ಸಂಸ್ಥೆಗೆ ತಿಳಿಸಿರುವ ಅನಸ್, ಶೇಖ್ ನಮ್ಮೊಂದಿಗೆ ಮಾತುಕತೆ ನಡೆಸಿದರು ಹಾಗೂ ಲಿಫ್ಟ್ನಿಂದ ಹೊರ ಹೋಗುವ ಮುನ್ನ ನಮ್ಮೊಂದಿಗೆ ಹಲವಾರು ಫೋಟೊಗಳಿಗೆ ಪೋಸ್ ನೀಡಿದರು" ಎಂದೂ ಹೇಳಿದ್ದಾರೆ.