ವಾರಕ್ಕೆ 70 ಗಂಟೆ ದುಡಿಯಬೇಕು ಎಂದ ಇನ್ಫೋಸಿಸ್ ನ ನಾರಾಯಣ ಮೂರ್ತಿ; ಸಾಮಾಜಿಕ ಜಾಲತಾಣದಲ್ಲಿ ಉದ್ಯಮಿಗೆ ತರಾಟೆ

ಎನ್.ಆರ್. ನಾರಾಯಣ ಮೂರ್ತಿ (PTI)
ಬೆಂಗಳೂರು: ದೇಶದ ಐಟಿ ಉದ್ಯೋಗಿಗಳು ವಾರಕ್ಕೆ 70 ಗಂಟೆ ದುಡಿಯಬೇಕು ಎಂದು ಹೇಳಿಕೆ ನೀಡಿರುವ ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.
ಜಾಗತಿಕ ಮಟ್ಟದಲ್ಲಿ ವಿವಿಧ ಪ್ರಬಲ ಆರ್ಥಿಕ ಶಕ್ತಿಗಳ ಎದುರು ಭಾರತ ಪರಿಣಾಮಕಾರಿಯಾಗಿ ಸ್ಪರ್ಧೆ ಮಾಡಲು ಐಟಿ ಉದ್ಯೋಗಿಗಳು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡುವ ಅಗತ್ಯವಿದೆ, ನಮ್ಮ ದೇಶಕ್ಕಾಗಿ ದುಡಿಯುತ್ತೇವೆ ಎಂಬ ಮನೋಭಾವದಲ್ಲಿ ದುಡಿಯಬೇಕು ಎಂದು ಅವರು 'ದಿ ರೆಕಾರ್ಡ್' ಪಾಡ್ಕಾಸ್ಟ್ ಉದ್ಘಾಟನಾ ಸಂಚಿಕೆಯಲ್ಲಿ ಹೇಳಿದ್ದರು.
ಇದಕ್ಕೆ ಐಟಿ ಉದ್ಯೋಗಿಗಳು ಸೇರಿದಂತೆ ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು, ಮುಂಬೈನಂತಹ ನಗರಗಳಲ್ಲಿರುವ ಐಟಿ ಉದ್ಯೋಗಿಗಳು 2-3 ಗಂಟೆ ಟ್ರಾಫಿಕ್ನಲ್ಲಿಯೇ ಕಳೆಯಬೇಕಾಗುತ್ತದೆ, ದಿನದಲ್ಲಿ ಉಳಿದ 12 ಗಂಟೆ ಆಫೀಸಿನಲ್ಲಿ ಕಳೆದರೆ ವೈಯಕ್ತಿಕ ಜೀವನ ಅನ್ನುವುದು ಏನೂ ಉಳಿದಿಲ್ಲ ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.
ಐಟಿ ಉದ್ಯೋಗಿಗಳ ಮಾನಸಿಕ ಆರೋಗ್ಯದ ಬಗ್ಗೆಯೂ ಗಮನ ಕೊಡಬೇಕು. ಈಗಾಗಲೇ ಅತಿ ಹೆಚ್ಚು ಒತ್ತಡದ ಸಮಸ್ಯೆ ಕಾಡುತ್ತಿದೆ. ಕೆಲಸದ ಒತ್ತಡದ ಕಾರಣ ವೈಯಕ್ತಿಕ ಜೀವನವೂ ಹಾಳಾಗುತ್ತಿದೆ. ಐಟಿ ಉದ್ಯೋಗಿಗಳಲ್ಲೇ ವಿಚ್ಛೇದನ ಪ್ರಕರಣ ಹೆಚ್ಚಿದೆ, ಈ ನಡುವೆ ವಾರಕ್ಕೆ 70 ಗಂಟೆ ದುಡಿಯಲು ಸಲಹೆ ನೀಡುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ದೇಶಕ್ಕಾಗಿ ದುಡಿಯಿರಿ ಎಂದು ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ ಹೆಚ್ಚಿಸುವ ಅಜೆಂಡಾ ನಾರಾಯಣ ಮೂರ್ತಿ ಅವರ ಮಾತಿನಲ್ಲಿ ಅಡಗಿದೆ ಎಂದು ಕೆಲವರು ಟೀಕಿಸಿದ್ದಾರೆ.
“ಹೌದು! ಯುವತಿ-ಯುವಕರೇ, ಸಾಧ್ಯವಾದರೆ ನೀವೆಲ್ಲರೂ ನಿಮ್ಮದೇ ಆದ ಸಂಸ್ಥೆ ನಿರ್ಮಿಸಿ ಅದರಲ್ಲಿ ದಿನಕ್ಕೆ 20 ಗಂಟೆ ಬೇಕಾದ್ರೂ ದುಡಿರೀ! ಅದ್ಬಿಟ್ಟು, ಇವರ್ಯಾರಿಗೋಸ್ಕರಾನೋ ಕಷ್ಟ ಪಟ್ಟು ಜಾಸ್ತಿ ಹೊತ್ತು ಕೆಲಸ ಮಾಡಿ, ಇವರನ್ನೇ ಮೆರೆಸಬೇಕಾಗಿಲ್ಲ” ಎಂದು Atom360 ಫೌಂಡರ್ ರಿಝ್ಮಾ ಬಾನು ಟ್ವೀಟ್ ಮಾಡಿದ್ದಾರೆ.
“ಕಾರ್ಮಿಕ ಕಾನೂನುಗಳ ವಿನಾಯಿತಿಯಲ್ಲೇ ಬದುಕ್ಕುತಿರುವ ಇನ್ಫೋಸಿಸ್ ನಾರಾಯಣಮೂರ್ತಿ ಅವರಿಗೆ ಕಾರ್ಮಿಕ ಕಾನೂನುಗಳ ಅರಿವಿಲ್ಲ. ಹಾಗಾಗಿ ಈ ರೀತಿ ಅಸಂಬದ್ದ ಮಾತಾಡ್ತಾರೆ. ಯಾವತ್ತಾದರೂ ತಮ್ಮ ಯಾವುದೇ ಉದ್ಯೋಗಿಗೆ ಹೆಚ್ಚುವರಿ ವೇತನ ಕೊಟ್ಟಿದ್ದಾರಾ ಈ ವ್ಯಕ್ತಿ. ಕಾನೂನುಬಾಹಿರ ಸಲಹೆ ನೀಡಲು ನಾಚಿಕೆಯಾಗಬೇಕು ಇವರಿಗೆ.” ಎಂದು ನಟರಾಜ್ ಎಂಬವರು ಟೀಕಿಸಿದ್ದಾರೆ.