ನಿಷೇಧ ಜಾರಿಗೆ ಬರುವ ಕೆಲವೇ ಗಂಟೆಗಳ ಮೊದಲು ಅಮೆರಿಕದಲ್ಲಿ ಟಿಕ್‌ಟಾಕ್ ಸೇವೆ ಸ್ಥಗಿತ!

ವಾಶಿಂಗ್ಟನ್ : ಟಿಕ್‌ಟಾಕ್ ಅನ್ನು ನಿಷೇಧಿಸುವ ಹೊಸ ಕಾನೂನು ಜಾರಿಗೆ ಬರುವ ಕೆಲವೇ ಗಂಟೆಗಳ ಮೊದಲು ಅಮೆರಿಕದಲ್ಲಿ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ.
ಟಿಕ್‌ಟಾಕ್ ಅನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತರಲಾಗಿದೆ. ನೀವು ಟಿಕ್ ಟಾಕ್ ಬಳಸಲು ಆಗುವುದಿಲ್ಲ ಎಂದು ಅಮೆರಿಕದ ಬಳಕೆದಾರರಿಗಾಗಿ ಅಪ್ಲಿಕೇಶನ್‌ನಲ್ಲಿ ಕಾಣಿಸಿಕೊಂಡ ಸಂದೇಶವು ಹೇಳಿದೆ.
ಚೀನಾ ಸರ್ಕಾರದೊಂದಿಗೆ ಅದರ ಸಂಪರ್ಕಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಅಮೆರಿಕ, ಜನವರಿ 19 ರೊಳಗೆ ಅದನ್ನು ಅಮೆರಿಕದ ಖರೀದಿದಾರರಿಗೆ ಮಾರಾಟ ಮಾಡಿದರೆ ಮಾತ್ರವೇ ವೀಡಿಯೊ-ಹಂಚಿಕೆ ಮಾಡುವ ಅಪ್ಲಿಕೇಶನ್ ಟಿಕ್ ಟಾಕ್ ಕಾರ್ಯಚರಣೆ ಮುಂದುವರಿಸಬಹುದು ಎಂದು ಈಗಾಗಲೇ ಸೂಚನೆ ನೀಡಲಾಗಿದೆ.
ಅಧ್ಯಕ್ಷ ಜೋ ಬೈಡನ್ ಈ ಸಮಸ್ಯೆಯನ್ನು ತಮ್ಮ ಉತ್ತರಾಧಿಕಾರಿ ಡೊನಾಲ್ಡ್ ಟ್ರಂಪ್ ವಿವೇಚನೆಗೆ ಬಿಡುವುದಾಗಿ ಹೇಳಿದ್ದರು. ಸೋಮವಾರ ಅಧಿಕಾರ ವಹಿಸಿಕೊಂಡ ನಂತರ ಟಿಕ್‌ಟಾಕ್‌ಗೆ ನಿಷೇಧದಿಂದ 90 ದಿನಗಳ ವಿರಾಮವನ್ನು ನೀಡುವುದಾಗಿ ಟ್ರಂಪ್ ಹೇಳಿದ್ದಾರೆ.
"90 ದಿನಗಳ ವಿಸ್ತರಣೆ ಮಾಡುವ ಯೋಚನೆಯಿದೆ. ನಾನು ಅದನ್ನು ಮಾಡಲು ನಿರ್ಧರಿಸಿದರೆ, ಬಹುಶಃ ಸೋಮವಾರ ಅದನ್ನು ಘೋಷಿಸುತ್ತೇನೆ " ಎಂದು ಟ್ರಂಪ್ ಶನಿವಾರ ಎನ್‌ಬಿಸಿ ನ್ಯೂಸ್‌ಗೆ ತಿಳಿಸಿದರು.
ಆಪಲ್ ಮತ್ತು ಗೂಗಲ್‌ನ ಯುಎಸ್ ಆಪ್ ಸ್ಟೋರ್‌ಗಳಿಂದಲೂ ಅಪ್ಲಿಕೇಶನ್ ಅನ್ನು ತೆಗೆದುಹಾಕಲಾಗಿದೆ. TikTok.com ವೀಡಿಯೊಗಳನ್ನು ತೋರಿಸುತ್ತಿಲ್ಲ ಎಂದು ಬಳಕೆದಾರರು ವರದಿ ಮಾಡಿದ್ದಾರೆ.
ಚೀನಾ ಮೂಲದ ಪೋಷಕ ಕಂಪನಿ ಬೈಟ್‌ಡ್ಯಾನ್ಸ್ ರವಿವಾರದೊಳಗೆ ಪ್ಲಾಟ್‌ಫಾರ್ಮ್ ಅನ್ನು ಅಮೆರಿಕಕ್ಕೆ ಮಾರಾಟ ಮಾಡದ ಹೊರತು ಅಮೆರಿಕದಲ್ಲಿ ಅಪ್ಲಿಕೇಶನ್ ಅನ್ನು ನಿಷೇಧಿಸುವ ಕಳೆದ ವರ್ಷ ಏಪ್ರಿಲ್‌ನಲ್ಲಿ ಅಂಗೀಕರಿಸಲಾದ ಕಾನೂನನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ.