ಪರೀಕ್ಷೆ ಬರೆಯಲು ಬಂದ ತಾಯಿಯ ಮಗುವನ್ನು ಆರೈಕೆ ಮಾಡಿ ಗಮನ ಸೆಳೆದ ಮಹಿಳಾ ಪೊಲೀಸ್ ಪೇದೆ
ಅಹಮದಾಬಾದ್: ರವಿವಾರ ಓಧವ್‌ನಲ್ಲಿ ಜರುಗಿದ ಗುಜರಾತ್ ಹೈಕೋರ್ಟ್‌ನ ಜವಾನ ಹುದ್ದೆ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದ ತಾಯಿಯೊಬ್ಬಳ ಮಗುವನ್ನು ಆರೈಕೆ ಮಾಡಿರುವ ಗುಜರಾತ್ ಮಹಿಳಾ ಪೊಲೀಸ್ ಪೇದೆಯೊಬ್ಬರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಅಹಮದಾಬಾದ್ ಪೊಲೀಸರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೆಯಾಗಿರುವ ಭಾವಚಿತ್ರಗಳಲ್ಲಿ ಮಹಿಳಾ ಪೊಲೀಸ್ ಪೇದೆ ದಯಾ ಬೆನ್, ಆರು ತಿಂಗಳ ಮಗುವನ್ನು ಹಿಡಿದುಕೊಂಡು, ಮಗು ಜೊತೆ ಆಟವಾಡುತ್ತಿರುವುದನ್ನು ಕಾಣಬಹುದಾಗಿದೆ.
ಗುಜರಾತ್ ಹೈಕೋರ್ಟ್‌ನ ಜವಾನ ಹುದ್ದೆ ನೇಮಕಾತಿ ಪರೀಕ್ಷೆಗೆ ಹಾಜರಾಗಲು ಮಹಿಳಾ ಅಭ್ಯರ್ಥಿಯೊಬ್ಬರು ತಮ್ಮ ಆರು ತಿಂಗಳ ಗಂಡು ಮಗುವಿನೊಂದಿಗೆ ಓಧವ್ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದರು ಎಂದು ಆ ಪೋಸ್ಟ್‌ಗೆ ನೀಡಿರುವ ಶೀರ್ಷಿಕೆಯಲ್ಲಿ ಹೇಳಲಾಗಿದೆ. ಪರೀಕ್ಷೆ ಇನ್ನೇನು ಪ್ರಾರಂಭವಾಗಬೇಕಿದ್ದಾಗ ಆ ಮಹಿಳೆಯ ಮಗುವು ನಿರಂತರವಾಗಿ ಅಳಲು ಶುರು ಮಾಡಿದೆ. ಆಗ ಆ ಮಹಿಳೆಗೆ ನೆರವು ನೀಡಲು ಮುಂದಾದ ಮಹಿಳಾ ಪೇದೆಯು ಆ ಮಗುವನ್ನು ಆರೈಕೆ ಮಾಡುವ ಆಹ್ವಾನ ನೀಡಿ, ಆ ಮಹಿಳಾ ಅಭ್ಯರ್ಥಿಯು ಯಾವುದೇ ತೊಂದರೆ ಇಲ್ಲದಂತೆ ಪರೀಕ್ಷೆ ಬರೆಯಲು ಅನುವು ಮಾಡಿಕೊಟ್ಟಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅಹಮದಾಬಾದ್ ಪೊಲೀಸರು, "ಓಧವ್ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಆಗಮಿಸಿದ್ದ ಮಹಿಳಾ ಅಭ್ಯರ್ಥಿಯ ಮಗುವು ಅಳುತ್ತಿತ್ತು. ಹೀಗಾಗಿ, ಆ ಮಹಿಳೆಗೆ ಪ್ರಶ್ನೆ ಪತ್ರಿಕೆಗೆ ಉತ್ತರಿಸುವ ಸಮಯ ವ್ಯರ್ಥವಾಗಬಾರದಿತ್ತು. ಆಕೆ ತನ್ನ ಪರೀಕ್ಷೆಯನ್ನು ವ್ಯವಸ್ಥಿತ ರೀತಿಯಲ್ಲಿ ಮುಗಿಸಿರುವುದು ಸಂತಸದಾಯಕ ಸಂಗತಿಯಾಗಿದೆ" ಎಂದು ಹೇಳಿದ್ದಾರೆ.
ಅಹಮದಾಬಾದ್ ಪೊಲೀಸರು ಹಂಚಿಕೊಂಡಿರುವ ಈ ಘಟನೆಯ ಭಾವಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಹಲವಾರು ಬಳಕೆದಾರರು ಮಹಿಳಾ ಪೇದೆಯನ್ನು ಶ್ಲಾಘಿಸಿದ್ದಾರೆ.
ಮೆಚ್ಚುಗೆಯ ಸುರಿಮಳೆ ಸುರಿಸಿರುವ ನೆಟ್ಟಿಗರ ಪೈಕಿ ಓರ್ವ ಬಳಕೆದಾರ, "ನಿಮ್ಮ ಬಗ್ಗೆ ನಮಗೆ ಹೆಮ್ಮೆಯಾಗುತ್ತಿದೆ ಮೇಡಂ" ಎಂದು ಹೇಳಿದ್ದರೆ, ಮತ್ತೋರ್ವ ಬಳಕೆದಾರರು, "ಮಹಿಳಾ ಪೊಲೀಸ್ ಅಧಿಕಾರಿಯಾದ ದಯಾ ಬೆನ್ ಓರ್ವ ಮಹಿಳಾ ಪರೀಕ್ಷಾರ್ಥಿಗೆ ನೆರವು ಒದಗಿಸಿದ್ದು, ನಿಜಾರ್ಥದಲ್ಲಿ ಅವರು ತಾಯಿಯಾಗುವ ಮೂಲಕ ಆಕೆಯ ಮಗುವನ್ನು ರಕ್ಷಿಸಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಇದು ಪೊಲೀಸರ ನಿಜವಾದ ಗುರುತು. ಇತ್ತೀಚೆಗೆ ಮಕ್ಕಳ ಕಾಟ ಜಾಸ್ತಿಯಾದರೆ, "ಪೊಲೀಸರು ಬಂದು ನಿನ್ನನ್ನು ಹಿಡಿದುಕೊಂಡು ಹೋಗುತ್ತಾರೆ" ಎಂದು ಹೆದರಿಸಿ ಅವರನ್ನು ಸುಮ್ಮನಾಗಿಸಬಹುದಾಗಿದೆ" ಎಂದು ಮತ್ತೊಬ್ಬ ಬಳಕೆದಾರರೊಬ್ಬರು ಹಾಸ್ಯ ಮಾಡಿದ್ದಾರೆ.
"ಶ್ಲಾಘನೀಯ ಕೆಲಸ. ಅಹಮದಾಬಾದ್ ಪೊಲೀಸರಿಗೆ ವಂದನೆಗಳು", "ಭಾರಿ ಪ್ರಶಂಸನೀಯ ಹಾಗೂ ಆದರ್ಶಪ್ರಾಯ ಮಾನವೀಯತೆ" ಎಂದು ನೆಟ್ಟಿಗರೊಬ್ಬರು ಶ್ಲಾಘಿಸಿದ್ದಾರೆ.